ಸೋಮವಾರ, ಜನವರಿ 27, 2020
21 °C
ಸ್ಪೇನ್‌ ವಿರುದ್ಧದ ಹಣಾಹಣಿಯಲ್ಲಿ 2–1ರ ಗೆಲುವು ಸಾಧಿಸಿದ ಸರ್ಬಿಯಾಗೆ ಪ್ರಶಸ್ತಿ

ಜೊಕೊವಿಚ್‌ಗೆ ಮಣಿದ ನಡಾಲ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ : ಕುತೂಹಲ ಕೆರಳಿಸಿದ್ದ ಹಣಾಹಣಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಗೆಲುವು ತಮ್ಮದಾಗಿಸಿಕೊಂಡರು. ಭಾನುವಾರ ಇಲ್ಲಿ ನಡೆದ ಎಟಿಪಿ ಕಪ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಸೋಲಿಗೆ ಶರಣಾದರು. ಡಬಲ್ಸ್‌ನಲ್ಲೂ ಜೊಕೊವಿಚ್ ಗೆಲುವು ಸಾಧಿಸುವುದರೊಂದಿಗೆ ಪ್ರಶಸ್ತಿಯು ಸರ್ಬಿಯಾ ಪಾಲಾಯಿತು. 

ವಿಶ್ವ ಕ್ರಮಾಂಕದ ಮೊದಲ ಸ್ಥಾನದಲ್ಲಿರುವ ನಡಾಲ್ ಮತ್ತು ಎರಡನೇ ಸ್ಥಾನದಲ್ಲಿರುವ ಜೊಕೊವಿಚ್ ನಡುವಿನ ಪೈಪೋಟಿ ವಿಶ್ವದ ಟೆನಿಸ್ ಪ್ರಿಯರ ಗಮನ ಸೆಳೆದಿತ್ತು. ಮೊದಲ ಸೆಟ್‌ನಲ್ಲಿ 6–2ರ ಜಯ ಸಾಧಿಸಿದ ಜೊಕೊವಿಚ್‌ಗೆ ಎರಡನೇ ಸೆಟ್‌ನಲ್ಲಿ ನೈಜ ಸವಾಲು ಎದುರಾಯಿತು. ಟೈ ಬ್ರೇಕರ್‌ ಕಂಡ ಜಿದ್ದಾಜಿದ್ದಿಯ ಹೋರಾಟದಲ್ಲಿ ಜೊಕೊವಿಚ್ 7–6(7/4)ರಲ್ಲಿ ಗೆದ್ದು ಸಂಭ್ರಮಿಸಿದರು. 

ಎರಡನೇ ಸಿಂಗಲ್ಸ್‌ನಲ್ಲಿ ಸ್ಪೇನ್‌ ತಿರುಗೇಟು ನೀಡಿತು. ರಾಬರ್ಟೊ ಬೌಟಿಸ್ಟ ಅಗುಟ್ 7–5, 6–1ರಲ್ಲಿ ಸರ್ಬಿಯಾದ ದುಸಾನ್ ಲಾಜೊವಿಚ್ ವಿರುದ್ಧ ಗೆದ್ದು 1–1ರ ಸಮಬಲ ಸಾಧಿಸಿದರು. ಆದರೆ ಪಟ್ಟು ಬಿಡದ ಸರ್ಬಿಯಾ ಆಟಗಾರರು ಡಬಲ್ಸ್‌ನಲ್ಲಿ ಗೆಲುವು ತಮ್ಮದಾಗಿಸಿಕೊಂಡರು. 

ಸ್ಪೇನ್‌ ಪರ ಕಣಕ್ಕೆ ಇಳಿದ ಫೆಲಿಸಿನೊ ಲೋಪೆಜ್ ಮತ್ತು ಪ್ಯಾಬ್ಲೊ ಕರೆನೊ ಬೂಸ್ಟ ವಿರುದ್ಧ ಜೊಕೊವಿಚ್ ಮತ್ತು ವಿಕ್ಟರ್ ಟ್ರೊಯ್ಕಿ ಜೋಡಿ 6–3, 6–4ರಲ್ಲಿ ಗೆಲುವು ಸಾಧಿಸಿದರು.

ಭಾನುವಾರ ಮೊದಲ ಗೇಮ್‌ನಲ್ಲೇ ಸ್ಪೇನ್ ಆಟಗಾರನ ಸರ್ವ್ ಮುರಿದು ಜೊಕೊವಿಚ್ ಉತ್ತಮ ಆರಂಭ ಕಂಡರು. ನೆಲಮಟ್ಟದಲ್ಲಿ ನುಗ್ಗಿ ಬಂದ ಅವರ ಹೊಡೆತಗಳು ನಡಾಲ್ ಅವರನ್ನು ಕಂಗೆಡಿಸಿದವು. ಹೀಗಾಗಿ ಮೊದಲ ಸೆಟ್ ನಿರೀಕ್ಷಿತ ಪೈಪೋಟಿ ಕಾಣದೇ ಮುಗಿಯಿತು.

ಎರಡನೇ ಗೇಮ್‌ನಲ್ಲಿ ನಡಾಲ್ ಭರ್ಜರಿ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಆರನೇ ಗೇಮ್‌ನಲ್ಲಿ ಐದು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿ ಜೊಕೊವಿಚ್ ಮೇಲುಗೈ ಸಾಧಿಸಿದರು. ಟೈ ಬ್ರೇಕರ್‌ನಲ್ಲಿ ಮೋಹಕ ಬ್ಯಾಕ್‌ ಹ್ಯಾಂಡ್ ಹೊಡೆತದ ಮೂಲಕ ಪಾಯಿಂಟ್ ಗಳಿಸಿದ ಸರ್ಬಿಯಾ ಆಟಗಾರ ಸೆಟ್ ಹಾಗೂ ಪಂದ್ಯ ಗೆದ್ದುಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು