ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಐಟಿಎಫ್‌ ಮಹಿಳಾ ಟೂರ್‌

ಅಂತರರಾಷ್ಟ್ರೀಯ ಟೆನಿಸ್‌ಗೆ ಕೆಎಸ್‌ಎಲ್‌ಟಿಎ ಆತಿಥ್ಯ; 28ರಂದು ಆರಂಭ
Last Updated 24 ನವೆಂಬರ್ 2021, 13:33 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗೆ ಉದ್ಯಾನ ನಗರಿ ಸಜ್ಜಾಗಿದೆ. ಇದೇ 28ರಿಂದ ಡಿಸೆಂಬರ್ ಐದರ ವರೆಗೆ ನಡೆಯಲಿರುವ ಐಟಿಎಫ್‌ ವಿಶ್ವ ಮಹಿಳಾ ಟೂರ್‌ಗೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ನ ಕ್ಯಾಲೆಂಡರ್ ಅಂಗವಾಗಿ ರಾಜ್ಯ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ಟೂರ್ ನಡೆಯಲಿದ್ದು ಬೆಸ್ಕಾಂ, ಜುವಾರಿ ಗಾರ್ಡನ್‌ ಸಿಟಿ, ಹಟ್ಟಿ ಚಿನ್ನದ ಗಣಿ ಮತ್ತು ನವೀಕರಿಸಬಲ್ಲ ಇಂಧನ ನಿಗಮ ಪ್ರಾಯೋಜಕತ್ವ ವಹಿಸಿದೆ.

ಕೋವಿಡ್‌ನಿಂದಾಗಿ ಉಂಟಾದ ಎರಡನೇ ಲಾಕ್‌ಡೌನ್‌ ನಂತರ ಏಷ್ಯಾದಲ್ಲಿ ನಡೆಯುತ್ತಿರುವ ಮೊದಲ ದೊಡ್ಡ ಟೂರ್ನಿ ಇದಾಗಿದ್ದು ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಪಾಯಿಂಟ್‌ಗಳನ್ನು ಗಳಿಸಲು ನೆರವಾಗಲಿದೆ.

ಅರ್ಹತಾ ಸುತ್ತಿನ ಪಂದ್ಯಗಳು 28 ಮತ್ತು 29ರಂದು ನಡೆಯಲಿದ್ದು ಮುಖ್ಯ ಸುತ್ತಿನ ಹಣಾಹಣಿ 30ರಿಂದ ನಡೆಯಲಿದೆ. 24 ಮಂದಿಯ ಕಣದಲ್ಲಿ ನಾಲ್ವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದು ಎಂಟು ಮಂದಿ ಅರ್ಹತಾ ಸುತ್ತಿನ ಮೂಲಕ ಬರಲಿದ್ದಾರೆ. ಯುವರಾಣಿ ಬ್ಯಾನರ್ಜಿ ಮತ್ತು ಜಗಮೀತ್‌ ಕೌರ್ ಅವರ ವೈಲ್ಡ್ ಕಾರ್ಡ್ ಪ್ರವೇಶವನ್ನು ಈಗಾಗಲೇ ಘೋಷಿಸಲಾಗಿದೆ. ಉಳಿದ ಇಬ್ಬರ ಹೆಸರನ್ನು ಎಐಟಿಎಗುರುವಾರ ಪ್ರಕಟಿಸಲಿದೆ.

ಭಾರತದ ಪ್ರಮುಖ ಆಟಗಾರ್ತಿಯರಾದ ಋತುಜಾ ಭೋಸ್ಲೆ, ಸೌಜನ್ಯಾ ಬಾವಿಶೆಟ್ಟಿ, ಜೀಲ್ ದೇಸಾಯಿ ಮತ್ತು ವೈದೇಹಿ ಚೌಧರಿ ಕಣದಲ್ಲಿದ್ದು ದಕ್ಷಿಣ ಕೊರಿಯಾದ ಸೊ ರಾ ಲೀ ಮತ್ತು ಡೆನ್ಮಾರ್ಕ್‌ನ ಎಲಿನಾ ಜಮ್ಶಿದಿ ಅವರು ಕೂಡ ಸವಾಲಿಗೆ ಸಜ್ಜಾಗಿದ್ದಾರೆ.

’ಕೋವಿಡ್‌ನಿಂದಾಗಿ ಕ್ರೀಡಾ ಚಟುವಟಿಕೆಗೆ ಪೆಟ್ಟು ಬಿದ್ದಿತ್ತು. ಈಗ ಅಂತರರಾಷ್ಟ್ರೀಯ ಟೂರ್ನಿಗೆ ಆತಿಥ್ಯ ನೀಡುವ ಅವಕಾಶ ಲಭಿಸಿರುವುದು ಖುಷಿ ತಂದಿದೆ. ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಟೆನಿಸ್ ಪಟುಗಳಿಗೆ ಸ್ಥಳೀಯ ವಾತಾವರಣದಲ್ಲಿ ಆಡಲು ಈ ಟೂರ್ನಿ ಅನುಕೂಲವಾಗಲಿದೆ. ಇದರಿಂದ ನಮ್ಮಲ್ಲಿ ಟೆನಿಸ್‌ ಬೆಳವಣಿಗೆಗೆ ಉಪಯೋಗವಾಗಲಿದೆ‘ ಎಂದು ಕೆಎಸ್‌ಎಲ್‌ಟಿಎ ಗೌರವ ಕಾರ್ಯದರ್ಶಿ ಮಹೇಶ್ವರ ರಾವ್ ಅಭಿಪ್ರಾಯಪಟ್ಟರು.

‘ಎರಡು ವರ್ಷಗಳ ನಂತರ ಸ್ಪರ್ಧಾತ್ಮಕ ಟೆನಿಸ್ ನಮ್ಮಲ್ಲಿಗೆ ಮರಳಿದೆ. ಕೋವಿಡ್‌ನಿಂದಾಗಿ ಪ್ರಯಾಣ ನಿರ್ಬಂಧಗಳು ಇದ್ದ ಕಾರಣ ಕೆಲವು ಟೂರ್ನಿಗಳನ್ನು ನಡೆಸುವ ಅವಕಾಶಗಳನ್ನು ಕಳೆದುಕೊಂಡಿದ್ದೆವು‘ ಎಂದು ಟೂರ್ನಿಯ ನಿರ್ದೇಶಕ ಸುನಿಲ್ ಯಜಮಾನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT