ಸೋಮವಾರ, ಜುಲೈ 4, 2022
22 °C
ಜೊಕೊವಿಚ್ ಲಸಿಕೆ–ವೀಸಾ ಪ್ರಕರಣದಿಂದ ವಿವಾದದ ರೂಪ ಪಡೆದುಕೊಂಡಿದ್ದ ಟೂರ್ನಿ

ಆಸ್ಟ್ರೇಲಿಯನ್ ಓಪನ್‌ಗೆ ನಡಾಲ್, ಬಾರ್ಟಿ ಮೆರುಗು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ನೊವಾಕ್ ಜೊಕೊವಿಚ್ ಅವರ ಲಸಿಕೆ ಮತ್ತು ವೀಸಾ ಪ್ರಕರಣದ ಮೂಲಕ ವಿವಾದದ ಜೊತೆಯಲ್ಲಿ ಆರಂಭಗೊಂಡ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ರಫೆಲ್ ನಡಾಲ್ ಮತ್ತು ಆ್ಯಶ್ಲಿ ಬಾರ್ಟಿ, ಅಮೋಘ ಸಾಧನೆಯ ಮೂಲಕ ಕಳೆ ತುಂಬಿದ್ದಾರೆ. ಈ ವಿಷಯದ ಸುತ್ತ ಈಗ ಟೆನಿಸ್ ಜಗತ್ತಿನಲ್ಲಿ ಚರ್ಚೆ ನಡೆಯುತ್ತಿದೆ.

ಭಾನುವಾರ ಕೊನೆಗೊಂಡ ಟೂರ್ನಿಯ ಪುರುಷರ ವಿಭಾಗದಲ್ಲಿ ಸ್ಫೇನ್‌ನ ರಫೆಲ್ ನಡಾಲ್ ಪ್ರಶಸ್ತಿ ಗೆಲ್ಲುವುದರೊಂದಿಗೆ 21 ಗ್ರ್ಯಾನ್‌ ಸ್ಲಾಂ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮೊದಲ ಆಟಗಾರ ಎನಿಸಿದ್ದರು. ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದ ಬಾರ್ಟಿ 44 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು. ಸ್ಥಳೀಯ ಆಟಗಾರರಾದ ನಿಕ್ ಕಿರ್ಗಿಯೋಸ್ ಮತ್ತು ತನಸಿ ಕೊಕಿನಕಿಸ್‌ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದು ತವರಿನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರು. 

ಕೋವಿಡ್–19ರ ಲಸಿಕೆ ಹಾಕಿಸಿಕೊಳ್ಳದೆ ದೇಶ ಪ್ರವೇಶಿಸಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ವಶಕ್ಕೆ ಪಡೆದುಕೊಂಡು ಹೋಟೆಲ್‌ನಲ್ಲಿ ಇರಿಸಿದ್ದ ಆಸ್ಟ್ರೇಲಿಯಾದ ಅಧಿಕಾರಿಗಳು ಅವರ ವೀಸಾವನ್ನು ರದ್ದುಗೊಳಿಸಿದ್ದರು. ಜೊಕೊವಿಚ್‌ ನ್ಯಾಯಾಲಯದ ಮೊರೆಹೋಗಿದ್ದರು. ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಸೂಚಿಸಿದಾಗ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವರು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಆಸ್ಟ್ರೇಲಿಯಾ ಸರ್ಕಾರ ಮತ್ತೊಮ್ಮೆ ವಿಸಾ ರದ್ದು ಮಾಡಿ ಅವರನ್ನು ಹೊರಗಟ್ಟಿತ್ತು.

ಟೂರ್ನಿ ಆರಂಭವಾಗುವ ಹಿಂದಿನ ದಿನ ಜೊಕೊವಿಚ್ ತಮ್ಮೂರಿಗೆ ಮರಳಿದ್ದರು. ಅವರನ್ನು ಹೋಟೆಲ್‌ನಲ್ಲಿ ಇರಿಸಿದ್ದ ಸಂದರ್ಭಲ್ಲಿ  ಸರ್ಬಿಯಾದಲ್ಲೂ ಆಸ್ಟ್ರೇಲಿಯಾದಲ್ಲೂ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಟೂರ್ನಿ ಸುಗಮವಾಗಿ ನಡೆಯುವ ಬಗ್ಗೆ ಆಯೋಜಕರಿಗೆ ಭರವಸೆ ಇರಲಿಲ್ಲ.  

ಚೀನಾದ ಟೆನಿಸ್ ಪಟು ಪೆಂಗ್‌ ಶುಯಿ ಮೇಲಿನ ಕಾಳಜಿ ಪ್ರದರ್ಶಿಸಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಆಯೋಜಕರು ಮತ್ತೊಂದು ಸಮಸ್ಯೆಯನ್ನು ತಮ್ಮತ್ತ ಎಳೆದುಕೊಂಡಿದ್ದರು. ಪೆಂಗ್ ‘ಶುಯಿ ಎಲ್ಲಿ’ ಎಂಬ ಬರಹ ಇರುವ ಟಿ–ಶರ್ಟ್‌ ಧರಿಸಿಕೊಂಡು ಬಂದರೆ ಪ್ರೇಕ್ಷಕರನ್ನು ಒಳಬಿಡಬಾರದು ಎಂದು ತಾಕೀತು ಮಾಡಿದ್ದರು.

ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಕಾರಣದಿಂದಲೂ ಆಯೋಜಕರ ಮೇಲೆ ಆರೋಪಗಳು ಕೇಳಿಬಂದಿದ್ದವು. ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಅಲೆಕ್ಸಾಂಡರ್ ಜ್ವೆರೆವ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಕೋವಿಡ್‌ ಪ್ರಕರಣಗಳು ಕಾಣಿಸಿಕೊಳ್ಳಲಿಲ್ಲ ಎಂಬುದು ಕೂಡ  ಆಯೋಜಕರಲ್ಲಿ ಸಮಾಧಾನ ಮೂಡಿಸಿದೆ.

ಚಾಂಪಿಯನ್‌ಗೆ ಫೆಡರರ್‌, ನೊವಾಕ್ ಅಭಿನಂದನೆ

ಪ್ಯಾರಿಸ್‌ (ಎಎಫ್‌ಪಿ): ದಾಖಲೆಯ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದುಕೊಂಡ ರಫೆಲ್ ನಡಾಲ್ ಅವರನ್ನು ತಲಾ 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್‌ ಅಭಿನಂದಿಸಿದ್ದಾರೆ. ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ರಫೆಲ್ ನಡಾಲ್ 2-6, 6-7 (5/7), 6-4, 6-4, 7-5ರಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಅವರನ್ನು ಮಣಿಸಿದ್ದರು.

ಮೊದಲ ಎರಡು ಸೆಟ್‌ಗಳನ್ನು ಸೋತಿದ್ದರೂ ಸಿಡಿದೆದ್ದ ನಡಾಲ್ ರೋಚಕ ಹಣಾಹಣಿಯಲ್ಲಿ ಮುಂದಿನ ಮೂರು ಸೆಟ್‌ಗಳನ್ನು ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಐದು ತಾಸು 24 ನಿಮಿಷಗಳ ಪಂದ್ಯದಲ್ಲಿ ಕೊನೆಯ ವರೆಗೂ ಹೋರಾಡಿದ ಮೆಡ್ವೆಡೆವ್‌ ಗಮನ ಸೆಳೆದಿದ್ದರು.

‘ನನ್ನ ಗೆಳೆಯನೂ ಅತ್ಯುತ್ತಮ ಪ್ರತಿಸ್ಪರ್ಧಿಯೂ ಆಗಿರುವ ನಡಾಲ್‌ಗೆ ಹೃದಯಾಂತರಾಳದ ಅಭಿನಂದನೆಗಳು’ ಎಂದು 40 ವರ್ಷದ ಫೆಡರರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಇದು ಶ್ರೇಷ್ಠ ಸಾಧನೆ. ಅವರೊಬ್ಬ ದಿಟ್ಟ ಹೋರಾಟಗಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಜೊಕೊವಿಚ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು