ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈನ್ ಅಂಪೈರ್‌ಗೆ ಚೆಂಡೆಸೆದು ಅಮೆರಿಕ ಓಪನ್ ಟೂರ್ನಿಯಿಂದ ಹೊರಬಿದ್ದ ಜೊಕೊವಿಚ್‌

Last Updated 7 ಸೆಪ್ಟೆಂಬರ್ 2020, 8:00 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಈ ಋತುವಿನಲ್ಲಿ ಅಜೇಯ ಓಟದೊಂದಿಗೆ ಮುನ್ನುಗ್ಗಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ವಿವಾದ ಸೃಷ್ಟಿಸಿ ಹೊರಬಿದ್ದಿದ್ದಾರೆ.

ಭಾನುವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾಯಿಂಟ್ ಕಳೆದುಕೊಂಡಾಗ ಉದ್ವೇಗಕ್ಕೆ ಒಳಗಾದ ಅವರು ಮಹಿಳಾ ಲೈನ್ ಅಂಪೈರ್ ಮೇಲೆ ಚೆಂಡು ಎಸೆದಿದ್ದಾರೆ. ಹೀಗಾಗಿ ಅವರನ್ನು ಟೂರ್ನಿಯಿಂದ ಹೊರದಬ್ಬಲಾಯಿತು. ಕೆಲವೇ ನಿಮಿಷಗಳಲ್ಲಿ ಟ್ವಿಟರ್ ಮೂಲಕ ಅವರು ಕ್ಷಮೆ ಯಾಚಿಸಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್ 20ನೇ ಶ್ರೇಯಾಂಕಿತ ಆಟಗಾರ ಸ್ಪೇನ್‌ನ ಪ್ಯಾಬ್ಲೊ ಕರೆನೊ ಎದುರಿನ ಪಂದ್ಯದ ಮೊದಲ ಸೆಟ್‌ನಲ್ಲಿ 5-6ರ ಹಿನ್ನಡೆಯಲ್ಲಿದ್ದಾಗ ಈ ಘಟನೆ ನಡೆಯಿತು.

ಆರ್ಥರ್ ಆಶ್ ಅಂಗಣದಲ್ಲಿ ಸರ್ವ್ ಮಾಡಲು ಸಜ್ಜಾಗಿದ್ದ ಜೊಕೊವಿಚ್ ಜೇಬಿನಲ್ಲಿದ್ದ ಒಂದು ಚೆಂಡನ್ನು ತೆಗೆದು ರ‍್ಯಾಕೆಟ್‌ನಲ್ಲಿ ಹಿಂದಕ್ಕೆ ಹೊಡೆದರು. ಅದು ಮಹಿಳಾ ಅಂಪೈರ್‌ ಕುತ್ತಿಗೆಗೆ ಬಡಿಯಿತು. ಮಂಡಿಯೂರಿ ನೋವಿನಿಂದ ಒದ್ದಾಡಿದ ಅವರು ಕೆಲಕಾಲ ಉಸಿರಾಡಲು ಕಷ್ಟಪಟ್ಟರು. ತಕ್ಷಣ ತಪ್ಪಿನ ಅರಿವಾದ ಜೊಕೊವಿಚ್ ಆ ಮಹಿಳೆಯತ್ತ ಧಾವಿಸಿ ಸಂತೈಸಿದರು. ಸ್ವಲ್ಪ ಸಮಯದ ನಂತರ ಮಹಿಳೆ ಎದ್ದು ನಡೆದರು.

ಆದರೆ ಇತ್ತ, ಕಣಕ್ಕೆ ಬಂದ ಟೂರ್ನಿಯ ರೆಫರಿ ಸೋರೆನ್ ಫ್ರೀಮೆಲ್‌ 10 ನಿಮಿಷಗಳ ಸಮಾಲೋಚನೆಯ ನಂತರ ಜೊಕೊವಿಚ್ ಅವರನ್ನು ಅನರ್ಹಗೊಳಿಸಿದರು. ಜೊಕೊವಿಚ್ ತಮಗೆ ಅರಿವಿಲ್ಲದೇ ಆದ ತಪ್ಪು ಅದು ಎಂದು ಹೇಳಿದರೂ ’ಶಿಕ್ಷೆ‘ಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

33 ವರ್ಷದ ಜೊಕೊವಿಚ್ ’ಇಡೀ ಘಟನೆ ನನಗೆ ತೀರಾ ಬೇಸರ ತರಿಸಿದ್ದು ಮನಸ್ಸು ಭಾರವಾಗಿದೆ. ಆ ಮಹಿಳೆಗೆ ಅಪಾಯ ಆಗಲಿಲ್ಲ ಎಂಬುದು ಸಮಾಧಾನದ ವಿಷಯ‘ ಎಂದು ಟ್ವೀಟ್ ಮಾಡಿದ್ದಾರೆ.

’ಉದ್ವೇಗದಿಂದ ವರ್ತಿಸಿದೆ. ಇದಕ್ಕೆ ಕ್ಷಮೆ ಇರಲಿ‘ ಎಂದು ಅವರು ಆಯೋಜಕರನ್ನೂ ಕೋರಿಕೊಂಡಿದ್ದಾರೆ.

’ಅಂಗಣದ ಒಳಗೆ ಅಪಾಯಕಾರಿ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ವ್ಯಕ್ತಿಯನ್ನು ಗುರಿಯಾಗಿಸಿ ಚೆಂಡನ್ನು ಹೊಡೆಯುವುದು ಗ್ರ್ಯಾನ್‌ಸ್ಲಾಂ ನಿಯಮಗಳಿಗೆ ವಿರುದ್ಧ‘ ಎಂದು ಅಮೆರಿಕ ಟೆನಿಸ್ ಸಂಸ್ಥೆ ಹೇಳಿದೆ. ಟೂರ್ನಿಯಲ್ಲಿ ಅವರು ಗಳಿಸಿದ ರ‍್ಯಾಂಕಿಂಗ್ ಪಾಯಿಂಟ್‌ಗಳು ಮತ್ತು ಸಂಭಾವನೆಯನ್ನು ಕಳೆದುಕೊಳ್ಳಲಿದ್ದಾರೆ ಎಂದೂ ಸಂಸ್ಥೆ ವಿವರಿಸಿದೆ.

’ಉದ್ದೇಶಪೂರ್ವಕವಾಗಿ ಚೆಂಡನ್ನು ಅಂಪೈರ್‌ ಕಡೆಗೆ ಹೊಡೆದಿಲ್ಲ ಎಂದು ಜೊಕೊವಿಚ್ ಹೇಳಿದ್ದಾರೆ. ಆದು ನಿಜ ಇರಬಹುದು. ಆದರೆ ಅವರು ಕೋಪದಿಂದ, ವಿವೇಚನೆ ಇಲ್ಲದೆ ಚೆಂಡನ್ನು ಅತ್ತ ಹೊಡೆದದ್ದು ಮೇಲ್ನೋಟಕ್ಕೇ ಸಾಬೀತಾಗಿದೆ. ಚೆಂಡು ಬಡಿದು ಅಂಪೈರ್‌ಗೆ ನೋವಾಗಿದೆ. ಆದ್ದರಿಂದ ಕ್ಷಿಮಿಸಲು ಸಾಧ್ಯವಿಲ್ಲ‘ ಎಂದು ಫ್ರೀಮೆಲ್ ಹೇಳಿದರು.

ಎರಡನೇ ಆಟಗಾರ

ಗ್ರ್ಯಾನ್‌ ಸ್ಲಾಂ ಟೂರ್ನಿಯೊಂದರ ಪುರುಷರ ಸಿಂಗಲ್ಸ್‌ನಲ್ಲಿ ಆಟಗಾರನೊಬ್ಬ ಪಂದ್ಯದ ಮಧ್ಯದಲ್ಲಿ ಅನರ್ಹಗೊಂಡ ಎರಡನೇ ಪ್ರಕರಣ ಇದಾಗಿದೆ. 1990ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಅಮೆರಿಕದ ಜಾನ್ ಮೆಕ್ನಾರ್ ವಿವಾದಾಸ್ಪದ ರೀತಿಯಲ್ಲಿ ಹೊರಬಿದ್ದಿದ್ದರು.

ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ (20) ಮತ್ತು ರಫೆಲ್ ನಡಾಲ್ (19) ಅವರ ದಾಖಲೆಯತ್ತ ಜೊಕೊವಿಚ್ (17)ದಾಪುಗಾಲು ಇಡುವ ಗುರಿಯೊಂದಿಗೆ ಜೊಕೊವಿಚ್ ಇಲ್ಲಿ ಕಣಕ್ಕೆ ಇಳಿದಿದ್ದರು.

ಶ್ರೇಯಾಂಕರಹಿತ ಆಟಗಾರ ಸ್ಪೇನ್‌ನ ಅಲೆಜಾಂಡ್ರೊ ಡೇವಿಡೊವಿಚ್ ಅವರನ್ನು 6–2, 6–2, 6–1ರಲ್ಲಿ ಮಣಿಸಿದ ಅಲೆಕ್ಸಾಂಡರ್ ಜ್ವೆರೆವ್ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು. ಕೆನಡಾದ ಡೆನಿಸ್ ಶಪೊವಲೊವ್ 6-7 (0-7), 6-3, 6-4, 6-3ರಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರು ಬಾರಿಯ ಗ್ರ್ಯಾನ್‌ಸ್ಲಾಂ ವಿಜೇತೆ ಏಂಜಲಿಕ್ ಕೆರ್ಬರ್ ಅವರನ್ನು 6–1, 6–4ರಲ್ಲಿ 28ನೇ ಶ್ರೇಯಾಂಕಿತ ಆಟಗಾರ್ತಿ ಅಮೆರಿಕದ ಜೆನಿಫರ್ ಬ್ರ್ಯಾಡಿ ಸೋಲಿಸಿದರೆ 23ನೇ ಶ್ರೇಯಾಂಕಿತೆ, ಕಜಕಸ್ತಾನದ ಯೂಲಿಯಾ ಪುಟಿನ್ಸೇವ 6–3, 2–6, 6–4ರಲ್ಲಿ ಎಂಟನೇ ಶ್ರೇಯಾಂಕಿತೆ ಪೆಟ್ರಾ ಮ್ಯಾಟ್ರಿಕ್ ಅವರನ್ನು ಮಣಿಸಿದರು. ಆರನೇ ಶ್ರೇಯಾಂಕಿತೆ ಪೆಟ್ರಾ ಕ್ವಿಟೋವಾ ಅಮೆರಿಕದ ಶೆಲ್ಬಿ ರೋಜರ್ಸ್‌ಗೆ 6–7 (5/7), 6–3, 6–7 (6/8)ರಲ್ಲಿ ಮಣಿದು ಹೊರಬಿದ್ದರು. ನವೊಮಿ ಒಸಾಕ ಎದುರು ಅನೆಟ್ ಕೊಂಟಾವೆಟ್ 3–6, 4–6ರಲ್ಲಿ ಸೋಲುಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT