ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ಜೊಕೊವಿಚ್ ಸ್ಪರ್ಧೆ; 'ಗೋಲ್ಡನ್ ಸ್ಲ್ಯಾಮ್ ಗುರಿ'

Last Updated 16 ಜುಲೈ 2021, 9:45 IST
ಅಕ್ಷರ ಗಾತ್ರ

ಬೆಲ್‌ಗ್ರೇಡ್: ಊಹಾಪೋಹಗಳಿಗೆಲ್ಲ ತೆರೆ ಎಳೆದಿರುವ ಸರ್ಬಿಯಾ ಸ್ಟಾರ್ ನೊವಾಕ್ ಜೊಕೊವಿಚ್, ಮುಂಬರುವ ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಇದರೊಂದಿಗೆ 'ಗೋಲ್ಡನ್ ಸ್ಲ್ಯಾಮ್' ಮೇಲೆ ಕಣ್ಣಿಟ್ಟಿದ್ದಾರೆ. ಫ್ರೆಂಚ್ ಓಪನ್ ಬೆನ್ನಲ್ಲೇ ವಿಂಬಲ್ಡನ್ ಗ್ರ್ಯಾನ್‌ಸ್ಲ್ಯಾಮ್‌ ಟೂರ್ನಿಯಲ್ಲೂ ಗೆಲುವು ದಾಖಲಿಸಿರುವ ಜೊಕೊವಿಚ್ ಅಮೋಘ ಲಯದಲ್ಲಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ 34 ವರ್ಷದ ಜೊಕೊವಿಚ್, ಸರ್ಬಿಯಾದ ಹೆಮ್ಮೆಯ ಆಟಗಾರನಾಗಿ ಒಲಿಂಪಿಕ್ ಮಹಾಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ವಿಂಬಲ್ಡನ್ ಗೆದ್ದ ಜೊಕೊವಿಚ್ ದಾಖಲೆಯ 20ನೇ ಬಾರಿಗೆ ಗ್ರ್ಯಾನ್‌ಸ್ಲ್ಯಾಮ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ದಾಖಲೆಯನ್ನು ಸರಿಗಟ್ಟಿದ್ದರು.

ಏನಿದು ಗೋಲ್ಡನ್ ಸ್ಲ್ಯಾಮ್‌?
ಕ್ಯಾಲೆಂಡರ್ ವರ್ಷವೊಂದರಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲ್ಯಾಮ್‌ಗಳ (ಆಸ್ಟ್ರೇಲಿಯನ್ ಓಪನ್, ಅಮೆರಿಕನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್) ಜೊತೆಗೆ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದರೆ 'ಗೋಲ್ಡನ್ ಸ್ಲ್ಯಾಮ್' ದಾಖಲೆಗೆ ಅರ್ಹವಾಗಲಿದ್ದಾರೆ.

ಈ ಸುವರ್ಣಾವಕಾಶ ಜೊಕೊವಿಚ್‌ಗೆ ಒದಗಿ ಬಂದಿದೆ.ಇದರೊಂದಿಗೆಈ ದಾಖಲೆ ಬರೆದ ವಿಶ್ವದ ಮೊದಲ ಪುರುಷ ಸಿಂಗಲ್ಸ್ ಆಟಗಾರ ಎಂಬ ಕೀರ್ತಿಗೆಭಾಜನರಾಗಲಿದ್ದಾರೆ.

1988ರಲ್ಲಿ ಮಾಜಿ ಆಟಗಾರ್ತಿ ಸ್ಟೆಫಿ ಗ್ರಾಫ್, ಮಹಿಳಾ ವಿಭಾಗದಲ್ಲಿ ಈ ಮಹತ್ತರ ಸಾಧನೆ ಮಾಡಿದ್ದರು.

ಜೊಕೊವಿಚ್ ಈಗಾಗಲೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದು, ಟೋಕಿಯೊ ಹಾಗೂ ಅಮೆರಿಕನ್ ಓಪನ್‌ನಲ್ಲಿ ಪ್ರಶಸ್ತಿ ಗುರಿಯಾಗಿಸಿದ್ದಾರೆ.

ರೋಜರ್ ಫೆಡರರ್, ರಫೆಲ್ ನಡಾಲ್, ಡಾಮಿನಿಕ್ ಥೀಮ್ ಸೇರಿದಂತೆ ಅನೇಕ ಘಟಾನುಘಟಿ ಆಟಗಾರರು ಟೋಕಿಯೊ ಒಲಿಂಪಿಕ್ಸ್‌ನಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಜೊಕೊವಿಚ್‌ಗೆ ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT