ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಕುರಿತ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಯೊಶಿರೊ ಹೇಳಿಕೆಗೆ ಒಸಾಕ ಖಂಡನೆ

Last Updated 6 ಫೆಬ್ರುವರಿ 2021, 10:28 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಮಹಿಳೆಯರು ಸಭೆ ಸಮಾರಂಭಗಳಲ್ಲಿ ಹೆಚ್ಚು ಹೊತ್ತು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಟೋಕಿಯೊ ಒಲಿಂಪಿಕ್ಸ್‌ ಮುಖ್ಯಸ್ಥ ಹಾಗೂ ಜಪಾನ್‌ನ ಮಾಜಿ ಪ್ರಧಾನಿ ಯೋಶಿರೊ ಮೊರಿ ವಿರುದ್ಧ ನಡೆಯುತ್ತಿರುವ ಟೀಕೆಗಳಿಗೆ ಟೆನಿಸ್ ತಾರೆ ನವೊಮಿ ಒಸಾಕ ಕೂಡ ದನಿಗೂಡಿಸಿದ್ದಾರೆ.

‘ಮೊರಿ ಅವರ ಈ ಹೇಳಿಕೆಯನ್ನು ನಿಜವಾಗಿ ಗಣನೆಗೆ ತೆಗೆದುಕೊಳ್ಳಲೇಬಾರದು. ಯಾರೇ ಆಗಿರಲಿ, ಇಂಥ ಮಾತುಗಳನ್ನು ಆಡುವಾಗ ಸ್ವಲ್ಪ ಯೋಚನೆ ಮಾಡಬೇಕು. ತಾವು ಹೇಳುವುದು ವಾಸ್ತವಕ್ಕೆ ಎಷ್ಟು ಹತ್ತಿರವಿದೆ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಒಸಾಕ ಅಭಿಪ್ರಾಯಪಟ್ಟರು.

ಜಪಾನ್‌ನ ಪ್ರಮುಖ ಟೆನಿಸ್ ಆಟಗಾರ್ತಿಯಾಗಿರುವ ಒಸಾಕ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಟೆನಿಸ್ ಅಂಗಣದಲ್ಲಿ ಮಿಂಚು ಮೂಡಿಸಿದ್ದಾರೆ. ಮೂರು ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ಅವರು ಸದ್ಯ ಆಸ್ಟ್ರೇಲಿಯಾ ಓಪನ್‌ ಟೂರ್ನಿಗೆ ಸಜ್ಜಾಗುತ್ತಿದ್ದಾರೆ.

ಒಲಿಂಪಿಕ್ಸ್‌ ಪದಕ ವಿಜೇತರು, ಜಪಾನ್‌ನ ಕ್ರೀಡಾ ಅಧಿಕಾರಿಗಳು ಮತ್ತು ಟೋಕಿಯೊ ಒಲಿಂಪಿಕ್ಸ್ ಕಾರ್ಯಕರ್ತರು ಮೊರಿ ಅವರ ಮೇಲೆ ಟೀಕೆಗಳ ಮಳೆ ಸುರಿಸಿದ್ದರು. ಇದೇ ವೇಳೆ, ಇಂಥ ಮಾತು ಕೇಳಿ ನಾನು ಮೂಕಳಾಗಿದ್ದೇನೆ ಎಂದು ಟೋಕಿಯೊ ಗವರ್ನರ್ ಹೇಳಿದ್ದಾರೆ. ಜಪಾನ್‌ನ ದಿನಪತ್ರಿಕೆ ಅಸಾಹಿ ಶಿಂಬುನ್ ತನ್ನ ಸಂಪಾದಕೀಯದಲ್ಲಿ ಮೊರಿ ರಾಜಿನಾಮೆ ನೀಡಬೇಕು ಎಂದು ಅಭಿಪ್ರಾಯಪಟ್ಟಿತ್ತು. ರಾಜೀನಾಮೆಗಾಗಿ ಆನ್‌ಲೈನ್‌ನಲ್ಲಿ ನಡೆದ ಅಭಿಯಾನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಹಿ ಮಾಡಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ರೂಚಿ ಸಕಮೊಟೊ ಕೂಡ ಇದರಲ್ಲಿ ಒಳಗೊಂಡಿದ್ದಾರೆ.

ತಮ್ಮ ಹೇಳಿಕೆ ವಿವಾದದ ತಿರುವು ಪಡೆಯುತ್ತಿದ್ದಂತೆ ಮೊರಿ ಕ್ಷಮೆ ಯಾಚಿಸಿದ್ದರು. ಆದರೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಕ್ಷಮೆ ಯಾಚಿಸಿದ್ದರಿಂದ ಈ ವಿಷಯದಲ್ಲಿ ಇನ್ನು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಭಿಪ್ರಾಯಪಟ್ಟಿತ್ತು. ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಒಸಾಕ ಕೂಡ ಹೇಳಿದ್ದಾರೆ. ಆದರೆ ಮೊರಿ ಅಂಥ ಹೇಳಿಕೆ ನೀಡಲು ಕಾರಣವೇನು ಎಂಬುದನ್ನು ತಿಳಿಯಲು ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT