ಸೋಮವಾರ, ಮಾರ್ಚ್ 20, 2023
30 °C

PV Web Exclusive: ಅರಬ್‌ನ ಸ್ಫೂರ್ತಿದೀಪ ಜಬೆವುರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಟದ ಮನೆ

***

2015ರಲ್ಲಿ ಆನ್ಸ್‌ ಜಬೆವುರ್‌ ತಮ್ಮ ಇಷ್ಟದ ಹುಡುಗನನ್ನು ಮದುವೆಯಾದಾಗ, ‘ಈ ಹುಡುಗಿಯ ಟೆನಿಸ್ ಬದುಕು ಇನ್ನು ಗೋವಿಂದ’ ಎಂದು ಅನೇಕರು ಕಿಚಾಯಿಸಿದ್ದರು. ಆರು ವರ್ಷಗಳಾಗಿವೆ, ವೃತ್ತಿಪರ ಟೆನಿಸ್‌ನಲ್ಲಿ ಛಲದಿಂದ ಆಡುತ್ತಾ ಅರಬ್‌ನ ಎಷ್ಟೋ ಮಕ್ಕಳಿಗೆ ಅವರು ಸ್ಫೂರ್ತಿದೇವತೆಯಂತೆ ಕಾಣುತ್ತಿದ್ದಾರೆ. ಕ್ರೀಡೆಯ ಇಂತಹ ಮಾನವೀಯ ಹೃದಯಗಳ ಮಿಡಿತ ಕೇಳುವುದೇ ಒಂದು ಸುಖ.

***

ವಿಂಬಲ್ಡನ್‌ ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಬೆಲರೂಸ್‌ನ ಅರಿನಾ ಸಬಲೆಂಕಾ ಹಾಗೂ ಟ್ಯೂನಿಷಿಯಾದ ಆನ್ಸ್‌ ಜಬೆವುರ್ ಎದುರು ಬದಿರಾದರು. ಸಬಲೆಂಕಾ ಎರಡು ನೇರ ಸೆಟ್‌ಗಳಿಂದ ಸುಲಭವಾಗಿ ಜಬೆವುರ್ ಅವರನ್ನು ಮಣಿಸಿದರು. ಏಸ್‌ಗಳನ್ನು ಹಾಕುವುದು, ವಿನ್ನರ್‌ಗಳನ್ನು ಪ್ರಯೋಗಿಸುವುದರಲ್ಲಿ ತಾವು ಏನೂ ಕಡಿಮೆಯಿಲ್ಲ ಎನ್ನುವಂತೆ ಜಬೆವುರ್ ಆಡಿದರಾದರೂ, ಪಾಯಿಂಟ್‌ಗಳನ್ನು ಹೆಕ್ಕುತ್ತಾ ಗೇಮ್‌ಗಳನ್ನು ತಮ್ಮದಾಗಿಸಿಕೊಳ್ಳುವ ಶಾಣ್ಯಾತನದ ಕೊರತೆ ಅವರಲ್ಲಿ ಇತ್ತು.

ಈ ಇಬ್ಬರೂ ಹೆಣ್ಣುಮಕ್ಕಳ ಆಟದಲ್ಲಿ ಎರಡು ಅರಳಿದ ಮನಸ್ಸುಗಳು ನೋಡಲು ಸಿಕ್ಕವು. ಎರಡನೇ ಶ್ರೇಯಾಂಕಿತ ಆಟಗಾರ್ತಿ ಎನ್ನುವ ಪಟ್ಟಿಯೇ ತನಗೆ ಭಾರವಾಯಿತು ಎಂದು ಸಬಲೆಂಕಾ ತೊಳಲಾಡುತ್ತಿದ್ದರು. ಅವರಿಗಿನ್ನೂ ಇಪ್ಪತ್ಮೂರರ ಪ್ರಾಯ. ಅವರು ಟೆನಿಸ್‌ ಆಡಲು ಶುರುಮಾಡಿದ್ದೇ ಆಕಸ್ಮಿಕ. ಅಪ್ಪ ಸರ್ಜಿ ಹಾಕಿ ಆಟಗಾರರಾಗಿದ್ದವರು. ಅವರೊಮ್ಮೆ ಮಗಳನ್ನು ತಮ್ಮ ದೇಶದ ರಾಜಧಾನಿ ಮಿನ್ಸ್ಕ್‌ ನಗರದಲ್ಲಿ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಹಾದಿಯಲ್ಲಿ ಮೂರ್ನಾಲ್ಕು ಟೆನಿಸ್‌ ಕೋರ್ಟ್‌ಗಳು ಕಾಣಸಿಕ್ಕವು. ನಿಲ್ಲಿಸಿ, ಮಗಳನ್ನು ಅವುಗಳತ್ತ ಕರೆದುಕೊಂಡು ಹೋದರು. ಮುದ್ದು ಮಗುವಿನ ಕೈಗೆ ಅಲ್ಲಿ ಅಭ್ಯಾಸ ಮಾಡುತ್ತಿದ್ದವರು ರ‍್ಯಾಕೆಟ್‌ ಕೊಟ್ಟರು. ಖುಷಿಯಿಂದ ಸ್ವಲ್ಪ ಹೊತ್ತು ಆಟವಾಡಿದಳು. ಆ ಕ್ಷಣವೇ ಸರ್ಜಿ ಅವರಿಗೆ ತಮ್ಮ ಮಗಳನ್ನು ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿ ಬೆಳೆಸಬೇಕು ಎಂಬ ಬಯಕೆ ಹುಟ್ಟಿತು. ಸಬಲೆಂಕಾ ಅದನ್ನು ಇನ್ನೊಂದು ಆಟ ಎನ್ನುವಂತಷ್ಟೇ ಆಗ ಆಡಿದ್ದಳು.


ಸಬಲೆಂಕಾಗೆ ಗೆಲುವಿನ ಖುಷಿ

2014ರಲ್ಲಿ ಮಿನ್ಸ್ಕ್‌ ನಗರಿಯಲ್ಲೇ ರಾಷ್ಟ್ರೀಯ ಟೆನಿಸ್‌ ಸಂಸ್ಥೆ ಶುರುವಾಯಿತು. ಅದಾಗಲೇ 16 ವರ್ಷದ ಹರೆಯಕ್ಕೆ ಕಾಲಿಟ್ಟಿದ್ದ ಮಗಳನ್ನು ಸರ್ಜಿ ಅಲ್ಲಿಗೆ ಸೇರಿಸಿದರು. ಅಕಸ್ಮಾತ್ತಾಗಿ ಆಡಿದ ಆಟಕ್ಕೆ ವೃತ್ತಿಪರತೆಯ ರೂಪು ಸಿಕ್ಕಿತು. 14 ವರ್ಷದೊಳಗಿನವರ ವಿಭಾಗದಲ್ಲಿ ಜೂನಿಯರ್ ಟೆನಿಸ್‌ ಆಡದೇ ಇದ್ದರೂ ಅಪ್ಪ ಹಚ್ಚಿದ ಕನಸಿನ ರೆಕ್ಕೆಗಳಿಂದ ಸಬಲೆಂಕಾ ಟೆನಿಸ್‌ ಆಗಸದಲ್ಲಿ ಹಾರಿದರು. ಈಗ ಅವರು ವಿಂಬಲ್ಡನ್‌ನ ನಾಲ್ಕರ ಘಟ್ಟಕ್ಕೆ ಬಂದು ನಿಲ್ಲುವಷ್ಟು ಸಶಕ್ತರಾಗಿರುವುದು ಆಸಕ್ತಿಕರ.

ಟೆನಿಸ್‌ನಲ್ಲಿ ಸಬಲೆಯಾದ ಸಬಲೆಂಕಾ ಯಶೋಗಾಥೆ ಒಂದು ಕಡೆಯಾದರೆ, ಟ್ಯೂನಿಷಿಯಾದ ಜಬೆವುರ್‌ ಹರಿಸಿದ ಬೆವರಿನ ಹಾದಿ ಇನ್ನೊಂದು ಕಡೆ ಕಾಣುತ್ತದೆ. ಈ ಹೆಣ್ಣುಮಗಳ ವೃತ್ತಿಬದುಕಿನ ಕಥಾನಾಯಕಿ ತಾಯಿ ಸಮೀರಾ. ಅವರೂ ಹವ್ಯಾಸಕ್ಕೆಂದು ಟೆನಿಸ್ ಆಡುತ್ತಿದ್ದರು. ಮಗಳಿಗೆ ತಮ್ಮ ಕನಸನ್ನು ತೊಡಿಸಿ ಬೆಳೆಸಲು ನಿರ್ಧರಿಸಿದರು. ಜಬೆವುರ್‌ಗೆ ಇಬ್ಬರು ಅಣ್ಣಂದಿರು, ಒಬ್ಬ ಅಕ್ಕ. ಮಕ್ಕಳನ್ನು ಹಡೆದೂ ಹಡೆದೂ ಅದಕ್ಕಿನ್ನು ಪೂರ್ಣವಿರಾಮ ಎಂದು ಸ್ಪಷ್ಟವಾದ ಮೇಲೆ, ಸಮೀರಾ ಮಗಳ ಕೈಗೆ ಟೆನಿಸ್ ರ‍್ಯಾಕೆಟ್ ಕೊಟ್ಟರು. ಮೂರನೇ ವಯಸ್ಸಿನಿಂದಲೇ ಹುಡುಗಿ ಟೆನಿಸ್‌ನ ಮೂಲಪಾಠಗಳನ್ನು ಅಮ್ಮನಿಂದಲೇ ಕಲಿತಳು. Ksar Hellal ಎಂಬ ಸಣ್ಣ ಪಟ್ಟಣದ ನಿವಾಸಿಯಾಗಿದ್ದ ಜಬೆವುರ್, ಅಲ್ಲಿಯೇ ಶಾಲೆಯ ಟೆನಿಸ್‌ ಪ್ರಮೋಷನ್ ಸೆಂಟರ್‌ನಲ್ಲಿ ಟೆನಿಸ್ ಅಭ್ಯಾಸ ಪ್ರಾರಂಭಿಸಿದ್ದು. 4ನೇ ವಯಸ್ಸಿನಿಂದ 13ನೇ ವಯಸ್ಸಿನವರೆಗೆ ಅಲ್ಲಿಯೇ ಆಟದ ಕನವರಿಕೆ. ಆ ಸೆಂಟರ್‌ಗೆ ತನ್ನದೇ ಆದ ಟೆನಿಸ್‌ ಕೋರ್ಟ್‌ ಇರಲಿಲ್ಲ. ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಇದ್ದ ಟೆನಿಸ್ ಕೋರ್ಟ್‌ಗಳಲ್ಲೇ ಅಭ್ಯಾಸ ಮಾಡಬೇಕಿತ್ತು. ತನ್ನ ಮಗಳು ವೃತ್ತಿಪರ ಟೆನಿಸ್ ಆಟಗಾರ್ತಿ ಆಗಲೇಬೇಕು ಎಂಬ ಸಂಕಲ್ಪದಿಂದ ತಾಯಿ ತಮ್ಮ ನಿವಾಸವನ್ನೇ ರಾಜಧಾನಿ ಟ್ಯುನಿಸ್‌ಗೆ ಸ್ಥಳಾಂತರಿಸಿದರು. ಮಗಳಿಗೆ ಯಾವ ಹೊತ್ತಿನಲ್ಲೇ ಅಭ್ಯಾಸವಿದ್ದರೂ ತಾವೇ ಕಾರಿನಲ್ಲಿ ಕರೆದುಕೊಂಡು ಹೋಗುವುದು ನಿತ್ಯ ಕಾಯಕವಾಯಿತು. ನಾಲ್ಕು ವರ್ಷ ಅಲ್ಲಿ ವೃತ್ತಿಪರ ಟೆನಿಸ್‌ನ ವರಸೆಗಳನ್ನು ಕಲಿತ ಮೇಲೆ ಬೆಲ್ಜಿಯಂ, ಫ್ರಾನ್ಸ್‌ಗೂ ಕರೆದುಕೊಂಡು ಹೋದರು.

ಇಪ್ಪತ್ತರ ಹರೆಯದಲ್ಲೇ ಮಗಳು ಫೆನ್ಸಿಂಗ್ ಸ್ಪರ್ಧಿ ಕರೀಂ ಕಮೌನ್ ಎಂಬುವವರನ್ನು ಮದುವೆಯಾದದ್ದೇ ಆ ತಾಯಿ ಕೂಡ ಮಗಳ ಭವಿಷ್ಯದ ಕನಸು ಕಮರಿತು ಎಂದೇ ಭಾವಿಸಿದರು. ಆದರೆ, ಮದುವೆಯಾದ ಮೇಲೂ ಜಬೆವುರ್ ಟೆನಿಸ್‌ ಪ್ರೀತಿಯಿಂದ ವಿಮುಖರಾಗಲಿಲ್ಲ. ಐಷಾರಾಮ, ಸಕಲೇಷ್ಟ ಸವಲತ್ತುಗಳಿದ್ದರೂ ಆಟಕ್ಕೇ ಆದ್ಯತೆ ಕೊಟ್ಟರು. ಅವರ ಪತಿಯೇ ಅವರಿಗೆ ಫಿಸಿಕಲ್ ಟ್ರೈನರ್ ಆದರು.

2017ರಿಂದ ವೃತ್ತಿಪರ ಟೆನಿಸ್‌ನಲ್ಲಿ ತಮ್ಮ ಪ್ರಯತ್ನದ ದಾಪುಗಾಲನ್ನು ಅವರು ಹಾಕಲಾರಂಭಿಸಿದರು. ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ ಮುಖ್ಯ ಡ್ರಾನಲ್ಲಿ ಅರ್ಹತೆ ಪಡೆಯಲು ಅವರು ಮೊದಲ ಸುತ್ತಿನಲ್ಲೇ ವಿಶ್ವದ ನಂಬರ್ 22ನೇ ಆಟಗಾರ್ತಿಯಾಗಿದ್ದ ಅನಸ್ತೇಸಿಯಾ ಪವಿಯುಜೆಂಕೊವಾ ಅವರನ್ನು ಮಣಿಸಿದರು. ಆಗ 171ನೇ ರ‍್ಯಾಂಕಿಂಗ್‌ನಲ್ಲಿದ್ದ ಅವರು 131ಕ್ಕೆ ಜಿಗಿದರು.

ಕಳೆದ ವರ್ಷ ಅವರು ಗ್ರ್ಯಾನ್‌ ಸ್ಲ್ಯಾಮ್ ಕನಸುಗಳಿಗೆ ರೆಕ್ಕೆ ಮೂಡಿಸಿಕೊಂಡಿದ್ದರು. ಆಗ ಅವರ ಮನೆಯ ಆವರಣದಲ್ಲಿ ಒಂದಿಷ್ಟು ಪುಟ್ಟ ಮಕ್ಕಳು ರ‍್ಯಾಕೆಟ್ ಹಿಡಿದಿದ್ದರು. ಅವರಿಗೆ ಈ ಆಟಗಾರ್ತಿಯ ಸಣ್ಣದೊಂದು ಸಲಹೆ ಸಿಕ್ಕರೂ ಅದು ಮೃಷ್ಟಾನ್ನದಂತೆ. ಒಬ್ಬ ಹುಡುಗ ಜಬೆವುರ್ ಕೈಗಳನ್ನು ಹಿಡಿದು ಒಂದಿಷ್ಟು ಹೊತ್ತು ಅವರ ಸಲಹೆಗಳನ್ನು ಕೇಳಿಸಿಕೊಂಡ. ಅವನು ಹೊರನಡೆದ ಸಂದರ್ಭದಲ್ಲಿ ಜಬೆವುರ್ ಅವರ ಪತಿ ಕರೀಂ ಕೌನ್ ಮನೆಯತ್ತ ಹೆಜ್ಜೆ ಹಾಕುತ್ತಿದ್ದರು. ‘ಜಬೆವುರ್ ಕೈಗಳು ನನ್ನ ಕೈಗಳಿಗೆ ಸೋಕಿವೆ. ಇನ್ನು ಒಂದು ವಾರ ನಾನು ಕೈತೊಳೆಯುವುದಿಲ್ಲ. ನನಗೆ ನೀನೇ ಊಟ ಮಾಡಿಸು’ ಎಂದು ಆ ಹುಡುಗ ತನ್ನ ಅಮ್ಮನಿಗೆ ಹೇಳಿದ್ದು ಕರೀಂ ಅವರ ಕಿವಿಗೆ ಬಿತ್ತು. ಮಕ್ಕಳಿಗೆ ತಮ್ಮ ಪತ್ನಿಯೆಂದರೆ ಅಷ್ಟೊಂದು ಅಭಿಮಾನ ಇರುವುದೇ ಅವರ ಮೈನವಿರೇಳಿಸಿತು. ಅಷ್ಟೇ ಅಲ್ಲ, ತಮ್ಮ ಪತ್ನಿಯ ವೃತ್ತಿಬದುಕಿಗೆ ಇಂಧನವಾಗುವುದು ತಮ್ಮ ಹೊಣೆಗಾರಿಕೆ ಎಂದೇ ಅವರಿಗೆ ಅನ್ನಿಸಿತು.

2017ರಲ್ಲಿ ರೋಲ್ಯಾಂಡ್‌ ಗ್ಯಾರೋಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಆಟಗಾರ್ತಿ ಡೊಮಿನಿಕಾ ಸಿಬಲಿಕೋವಾ ಅವರನ್ನು ಸೋಲಿಸಿ, ಮೂರನೇ ಸುತ್ತು ಪ್ರವೇಶಿಸಿದಾಗ ಅಂತಹ ಸಾಧನೆ ಮಾಡಿದ ಅರಬ್‌ನ ಮೊದಲ ಮಹಿಳೆ ಎಂಬ ಹಿರಿಮೆ ಅವರದ್ದಾಯಿತು. ಈ ಸಲ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದಾಗಲೂ ಅವರಿಂದಲೇ ಇತಿಹಾಸ ಸೃಷ್ಟಿ.


ವಿಂಬಲ್ಡನ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡಾಗ ಜಬೆವುರ್ ನಿರಾಸೆ

ಈ ವರ್ಷ ಎರ್ಮಿಂಗ್‌ಹ್ಯಾಮ್ ಕ್ಲಾಸಿಕ್‌ ಟೂರ್ನಿಯಲ್ಲಿ ಅವರು ವಿಜಯದ ನಗೆ ಬೀರಿದಾಗ ಅವರಿಗೆ ನೆನಪಾಗಿದ್ದು ಹತ್ತು ವರ್ಷಗಳ ಹಿಂದಿನ ತಮ್ಮ ಗೆಲುವಿನ ಮುಗ್ಧತೆಯ ದಿನ. 2010 ಹಾಗೂ 2011ರ ಫ್ರೆಂಚ್ ಓಪನ್ ಜೂನಿಯರ್ ಗ್ರ್ಯಾನ್‌ ಸ್ಲ್ಯಾಮ್‌ನಲ್ಲಿ ಅವರು ಫೈನಲ್‌ ಪ್ರವೇಶಿಸಿದ್ದರು. 2011ರಲ್ಲಿ ಕೊನೆಯ ಘಟ್ಟದಲ್ಲೂ ಗೆಲುವು ಒಲಿದಿತ್ತು. 1964ರಲ್ಲಿ ಇಸ್ಮಾಯಿಲ್ ಶಫಿ ಎಂಬ ಅರಬ್ ಬಾಲಕ ವಿಂಬಲ್ಡನ್‌ ಜೂನಿಯರ್ ಚಾಂಪಿಯನ್ ಆಗಿದ್ದ. ಅದಾದ ನಂತರ 2011ರವರೆಗೆ ಅರಬ್‌ನ ಯಾವುದೇ ಜೂನಿಯರ್ ಆಟಗಾರ/ಆಟಗಾರ್ತಿ ಇಂತಹ ಪ್ರಶಸ್ತಿ ಎತ್ತಿಹಿಡಿದಿರಲಿಲ್ಲ.

2019ರಲ್ಲಿ ಅರಬ್‌ ಸರ್ಕಾರ ವರ್ಷದ ಮಹಿಳಾ ಕ್ರೀಡಾಪಟು ಎಂಬ ಗೌರವ ಪ್ರಶಸ್ತಿಯನ್ನು ಜಬೆವುರ್ ಅವರಿಗೆ ನೀಡಿತ್ತು. ‘ಇನ್ನು ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ’ ಎಂದು ಆಗ ಅವರು ಪ್ರತಿಕ್ರಿಯಿಸಿದ್ದರು. ಅದನ್ನು ಚಾಚೂ ತಪ್ಪದೆ ನಿರ್ವಹಿಸುವವರಂತೆ ಅವರು ಆಡುತ್ತಿರುವುದು ಅರಬ್‌ನ ಅನೇಕ ಮಕ್ಕಳಿಗೆ ಸ್ಫೂರ್ತಿಯಾಗಿದೆ. 42 ವರ್ಷಗಳ ನಂತರ ಎ.ಒ. ಮೇನ್‌ ಡ್ರಾಗೆ ಈಜಿಪ್ಟ್‌ ದೇಶದಿಂದ ಮೊಹಮ್ಮದ್ ಸಾಫ್ವತ್ ಎಂಬ ಯುವಕ ಆಯ್ಕೆಯಾಗಿದ್ದು ಇದಕ್ಕೆ ಸಾಕ್ಷಿ.

ದೊಡ್ಡ ಟೂರ್ನಿಗಳಲ್ಲಿ ಒಬ್ಬರೇ ಗೆಲ್ಲುತ್ತಾರೆ. ಆದರೆ, ಅವರ ಹಾದಿಯಲ್ಲಿ ಸೋತೂ ಗೆಲ್ಲುವವರಲ್ಲಿ ಜಬೆವುರ್ ತರಹದವರು ಇದ್ದೇ ಇರುತ್ತಾರೆ. ಇವರು ಆಫ್ರಿಕಾ ಕ್ರೀಡಾಪ್ರೇಮಿಗಳಲ್ಲಿ ಉತ್ಸಾಹದ ಬೆಳಕು ಮೂಡಿಸಿರುವ ಯುವತಿ. ಮದುವೆಯಾಗಿ ಆರು ವರ್ಷಗಳಾದ ಮೇಲೂ, 26ರ ವಯಸ್ಸಿನಲ್ಲಿಯೂ ಅವರ ಬತ್ತದ ಆಟಪ್ರೀತಿಗೆ ಶರಣೆನ್ನಲೇಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು