ಗುರುವಾರ , ಜೂನ್ 30, 2022
22 °C
ವೆರೊನಿಕಾಗೆ ಮಣಿದ ಒಸಾಕಾ

ಇಂಡಿಯನ್‌ ವೆಲ್ಸ್ ಟೆನಿಸ್‌ ಟೂರ್ನಿ: ಸೋಲಿನಿಂದ ಪಾರಾದ ರಫೆಲ್ ನಡಾಲ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಇಂಡಿಯನ್ ವೆಲ್ಸ್, ಅಮೆರಿಕ: ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಅವರು ಅಮೆರಿಕದ ಸೆಬಾಸ್ಟಿಯನ್‌ ಕೊರ್ಡಾ ಎದುರು ಗೆದ್ದು, ಇಂಡಿಯನ್ ವೆಲ್ಸ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತು ತಲುಪಿದರು. ಆದರೆ ಜಪಾನ್‌ನ ನವೊಮಿ ಒಸಾಕಾ ರಷ್ಯಾದ ವೆರೊನಿಕಾ ಕುದರ್ಮೆತೊವಾ ವಿರುದ್ಧ ಸೋತು ಅಶ್ರುಧಾರೆಯೊಂದಿಗೆ ಹೊರನಡೆದರು.

ಎರಡನೇ ಸುತ್ತಿನ ಪಂದ್ಯದಲ್ಲಿ ನಡಾಲ್‌ 6-2, 1-6, 7-6 (7/3)ರಿಂದ ಸೆಬಾಸ್ಟಿಯನ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ಅನ್ನು ಸುಲಭವಾಗಿ ಗೆದ್ದ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನಡಾಲ್‌ ಅವರಿಗೆ 21 ವರ್ಷದ ಕೊರ್ಡಾ ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿ ತಮ್ಮದಾಗಿಸಿಕೊಂಡರು.

ನಿರ್ಣಾಯಕ ಮತ್ತು ಮೂರನೇ ಸುತ್ತಿನಲ್ಲೂ ವಿಶ್ವ ರ‍್ಯಾಂಕಿಂಗ್‌ನಲ್ಲಿ 38ನೇ ಸ್ಥಾನದಲ್ಲಿರುವ ಸೆಬಾಸ್ಟಿಯನ್‌ ನಡಾಲ್‌ ಅವರಿಗೆ ಭಾರಿ ಸವಾಲೊಡ್ಡಿದರು. ಟೈಬ್ರೇಕ್‌ವರೆಗೆ ಸಾಗಿದ ಈ ಸೆಟ್‌ನಲ್ಲಿ ಸ್ಪೇನ್ ಆಟಗಾರ ತಮ್ಮ ಅನುಭವವನ್ನು ಸಾಣೆ ಹಿಡಿದರು. ಎರಡು ಬ್ರೇಕ್‌ ಪಾಯಿಂಟ್ಸ್ ಕಳೆದುಕೊಂಡರೂ ಸೆಟ್‌ ಮತ್ತು ಪಂದ್ಯವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಒಸಾಕ ಕಣ್ಣೀರು: ಮಹಿಳಾ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಒಸಾಕ 0–6, 4–6ರಿಂದ ವೆರೊನಿಕಾ ವಿರುದ್ಧ ನಿರಾಸೆ ಅನುಭವಿಸಿದರು. ಪಂದ್ಯದ ವೇಳೆ ಪ್ರೇಕ್ಷಕರೊಬ್ಬರಿಂದ ನಿಂದನೆಗೆ ಒಳಗಾದ ಅವರು ಕಣ್ಣೀರು ಸುರಿಸಿದರು. ಇದೇ ಟೂರ್ನಿಯ 2001ರ ಆವೃತ್ತಿಯಲ್ಲಿ ಅಮೆರಿಕದ ವೀನಸ್‌ ಹಾಗೂ ಸೆರೆನಾ ವಿಲಿಯಮ್ಸ್ ಕೂಡ ಇದೇ ರೀತಿಯ ಅಪಹಾಸ್ಯಕ್ಕೆ ಈಡಾಗಿದ್ದರು.

ಅಮೆರಿಕ ಓಪನ್ ಚಾಂಪಿಯನ್‌ ರಷ್ಯಾದ ಡೇನಿಯಲ್ ಮೆಡ್ವೆಡೆವ್‌ ಮೊದಲ ಸುತ್ತಿನ ಹಣಾಹಣಿಯಲ್ಲಿ ಸುಲಭವಾಗಿ ಗೆದ್ದರು. 6-3, 6-2ರಿಂದ ಜೆಕ್‌ ಗಣರಾಜ್ಯದ ಥಾಮಸ್‌ ಮಚಾಕ್‌ ಅವರನ್ನು ಪರಾಭವಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು