ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿ: ಎಂಟರಘಟ್ಟಕ್ಕೆ ಜೊಕೊವಿಚ್‌, ಸಬಲೆಂಕಾ

ರುಬ್ಲೆವ್ ಮುನ್ನಡೆ; ಗಾರ್ಸಿಯಾಗೆ ಆಘಾತ
Last Updated 23 ಜನವರಿ 2023, 14:34 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಸುಲಭ ಗೆಲುವು ಸಾಧಿಸಿದ ಸರ್ಬಿಯಾದ ನೊವಾಕ್ ಜೊಕೊವಿಚ್‌ ಮತ್ತು ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಕ್ರಮವಾಗಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

22ನೇ ಗ್ಯಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜೊಕೊವಿಚ್‌ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 6-2, 6-1, 6-2ರಿಂದ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಅವರನ್ನು ಪರಾಭವಗೊಳಿಸಿದರು.

ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ 10ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್‌, ಎಂಟರಘಟ್ಟದಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್ ಅವರನ್ನು ಎದುರಿಸುವರು. ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ರುಬ್ಲೆವ್‌ 6-3, 3-6, 6-3, 4-6, 7-6 (11/9)ರಿಂದ ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಅವರನ್ನು ಪರಾಭವಗೊಳಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್‌ ಹಣಾಹಣಿಗಳಲ್ಲಿ ಅಮೆರಿಕದ ಬೆನ್ ಶೆಲ್ಟನ್‌ 6-7 (5/7), 6-2, 6-7 (4/7), 7-6 (7/4), 6-2ರಿಂದ ತಮ್ಮದೇ ದೇಶದ ಜೆಜೆ ವೂಲ್ಫ್ ವಿರುದ್ಧ ಗೆದ್ದರು. ಈ ಮೂಲಕ 20 ವರ್ಷಗಳಲ್ಲಿ ಪದಾರ್ಪಣೆಯಲ್ಲೇ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಅಮೆರಿಕದ ಟಾಮಿ ಪೌಲ್‌ 6-2, 4-6, 6-2, 7-5ರಿಂದ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್ ಅವರಿಗೆ ಆಘಾತ ನೀಡಿದರು.

ಸಬಲೆಂಕಾ ಜಯಭೇರಿ: ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬೆನ್ನತ್ತಿರುವ ಸಬಲೆಂಕಾ ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 7-5, 6-2ರಿಂದ 12ನೇ ಶ್ರೇಯಾಂಕದ, ಸ್ವಿಟ್ಜರ್ಲೆಂಡ್ ಆಟಗಾರ್ತಿ ಬೆಲಿಂದಾ ಬೆನ್ಸಿಚ್‌ ಅವರನ್ನು ಪರಾಭವಗೊಳಿಸಿದರು. ಅವರಿಗೆ ಎಂಟರಘಟ್ಟದಲ್ಲಿ ಡೊನ್ನಾ ವೆಕಿಕ್‌ ಸವಾಲು ಎದುರಾಗಿದೆ. ಕ್ರೊವೇಷ್ಯಾದ 17 ವರ್ಷದ ಡೊನ್ನಾ, 16ರ ಘಟ್ಟದ ಹಣಾಹಣಿಯಲ್ಲಿ 6-2, 1-6, 6-3ರಿಂದ ಜೆಕ್‌ ಗಣರಾಜ್ಯದ ಲಿಂಡಾ ಫ್ರುಹ್‌ವಿರ್ಟೊವಾ ಎದುರು ಗೆದ್ದರು.

ಗಾರ್ಸಿಯಾಗೆ ಆಘಾತ: ಮಹಿಳಾ ಸಿಂಗಲ್ಸ್ ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 4ನೇ ಶ್ರೇಯಾಂಕದ ಆಟಗಾರ್ತಿ ಫ್ರಾನ್ಸ್‌ನ ಕ್ಯಾರೊಲಿನ್‌ ಗಾರ್ಸಿಯಾ ಆಘಾತ ಅನುಭವಿಸಿದರು. ಪೋಲೆಂಡ್‌ನ ಮ್ಯಾಗ್ಡಾ ಲಿನೆಟ್‌ 7-6 (7/3), 6-4ರಿಂದ ಕ್ಯಾರೊಲಿನ್ ಅವರನ್ನು ಸೋಲಿಸಿದರು. ಮತ್ತೊಂದು ಪಂದ್ಯದಲ್ಲಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ 6-0, 6-4ರಿಂದ ಚೀನಾದ ಜಾಂಗ್‌ ಶುಯಿ ಮೇಲೆ ಸುಲಭ ಗೆಲುವು ಸಾಧಿಸಿ ಎಂಟರಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT