ಗುರುವಾರ , ಆಗಸ್ಟ್ 18, 2022
24 °C

PV Web Exclusive| ಗ್ರೀಸ್ ಟೆನಿಸ್‌ನ ರಾಜಕುಮಾರ ಸ್ಟೆಫನೊಸ್ ಸಿಟ್ಸಿಪಾಸ್!

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಈ ಬಾರಿಯ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಆರಂಭಗೊಂಡಾಗ ಟೆನಿಸ್ ಪ್ರಿಯರ ಮನಸಿನಲ್ಲಿ ಇದ್ದದ್ದು ಮೂರೇ ಮುಖಗಳು. ಸ್ಪೇನ್‌ನ ರಫೆಲ್ ನಡಾಲ್‌, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಸ್ವಿಟ್ವರ್ಲೆಂಡ್‌ನ ರೋಜರ್ ಫೆಡರರ್‌. ಡ್ರಾ ಪ್ರಕಟಗೊಂಡಾಗ ಈ ಮೂವರು ಮೊದಲಾರ್ಧ ಭಾಗದಲ್ಲಿ ಇದ್ದ ಕಾರಣ ಫೈನಲ್‌ಗೂ ಮೊದಲು ಒಬ್ಬರು ಹೊರಬೀಳುವುದು ಖಚಿತವಾಗಿತ್ತು.

ರೋಜರ್ ಫೆಡರರ್ ವಿಶ್ರಾಂತಿಗಾಗಿ ಕ್ವಾರ್ಟರ್ ಫೈನಲ್ ಹಂತದಲ್ಲೇ ಹೊರನಡೆಯಲು ತೀರ್ಮಾನಿಸಿದರು. ಜೊಕೊವಿಚ್ ಎದುರಿನ ಸೆಮಿಫೈನಲ್ ಮುಖಾಮುಖಿಯಲ್ಲಿ ಸೋತು ನಡಾಲ್ ಹೊರಬಿದ್ದರು. ಈಗ ಜೊಕೊವಿಚ್‌ ಫೈನಲ್‌ಗೇರಿದ್ದಾರೆ. ಪ್ರಶಸ್ತಿಗಾಗಿ ಭಾನುವಾರ ಸಂಜೆ ನಡೆಯಲಿರುವ ಹಣಾಹಣಿಯಲ್ಲಿ ಅವರ ಎದುರಾಳಿ ಸ್ಟೆಫನೊಸ್ ಸಿಟ್ಸಿಪಾಸ್.

ಈಗ, ಫ್ರೆಂಚ್ ಓಪನ್‌ ಟೂರ್ನಿಯ ಕಳೆದ ಆವೃತ್ತಿಗೆ ಬರೋಣ. ಅದು ಸೆಮಿಫೈನಲ್ ಪಂದ್ಯ. ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರ ಪೈಕಿ ಒಬ್ಬರಾಗಿದ್ದ ಜೊಕೊವಿಚ್‌ಗೆ ಅಂದು ಎದುರಾಳಿಯಾಗಿದ್ದದ್ದು ಇದೇ ಸ್ಟೆಫನೊಸ್ ಸಿಟ್ಸಿಪಾಸ್. ಉದ್ದ ಕೂದಲಿನ, ಮೋಹಕ ಶೈಲಿಯ ಈ ಆಟಗಾರನ ಹೆಸರು ಟೆನಿಸ್ ಜಗತ್ತಿನ ಗಮನ ಸೆಳೆಯಲು ಆರಂಭವಾಗಿ ಹೆಚ್ಚು ಸಮಯವೇನೂ ಆಗಿರಲಿಲ್ಲ. ಐದು ವರ್ಷಗಳ ಹಿಂದೆ ಅಗೊಮ್ಮೆ ಈಗೊಮ್ಮೆ ಮಿಂಚಿ ಮಾಯವಾಗುತ್ತಿದ್ದ ಅವರು 2019ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಂತರ ಪ್ರಮುಖ ಟೂರ್ನಿಗಳಲ್ಲಿ ತಮ್ಮ ಅಸ್ತಿತ್ವವನ್ನು ತೋರಲಾರಂಭಿಸಿದರು.

ಕಳೆದ ವರ್ಷ ಫ್ರೆಂಚ್ ಓಪನ್‌ನಲ್ಲಿ ಗ್ರಿಗರಿ ಡಿಮಿತ್ರೊವ್ ಮತ್ತು ಆ್ಯಂಡ್ರೆ ರುಬ್ಲೆವ್‌ ಅವರನ್ನು ಮಣಿಸಿದ್ದ ಸ್ಟೆಫನೊಸ್ ಸೆಮಿಫೈನಲ್‌ನಲ್ಲಿ ಮೊದಲ ಎರಡು ಸೆಟ್‌ಗಳನ್ನು ಸೋತರೂ ನಂತರದ ಎರಡು ಸೆಟ್‌ಗಳಲ್ಲಿ ಜೊಕೊವಿಚ್‌ ಅವರಲ್ಲಿ ಆತಂಕ ಸೃಷ್ಟಿಸಿದ್ದರು. ಕೊನೆಯ ಸೆಟ್ ಸೋತು ನಿರಾಸೆ ಅನುಭವಿಸಬೇಕಾಯಿತು. ಆದರೆ ಹೋರಾಟಗಾರ ಎನ್ನುವುದನ್ನಂತೂ ಸಾಬೀತುಪಡಿಸಿದರು. ಅಂದು ಮೂಡಿದ ಆತ್ಮವಿಶ್ವಾಸ ಈಗ ಈ ವರ್ಷ ಅವರನ್ನು ಫೈನಲ್‌ ವರೆಗೆ ಕರೆದುಕೊಂಡು ಹೋಗಿದೆ. ಈ ಮೂಲಕ ಗ್ರೀಸ್‌ನ ಟೆನಿಸ್‌ಗೆ ಸಂಬಂಧಿಸಿ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ.

ಹಾಗೆ ನೋಡಿದರೆ ಸ್ಟೆಫನೊಸ್ ಸಣ್ಣ ವಯಸ್ಸಿನಿಂದಲೇ ದಾಖಲೆಗಳನ್ನು ಬರೆಯುತ್ತ ಬಂದ ಆಟಗಾರ. ಮೊತ್ತಮೊದಲ ಒಲಿಂಪಿಕ್ಸ್‌ ದೀಪ ಬೆಳಗಿದ ಅಥೆನ್ಸ್‌ನಲ್ಲಿ ಜನಿಸಿದ ಅವರು ಟೆನಿಸ್ ಪ್ರಿಯರ ಕುಟುಂಬಕ್ಕೆ ಸೇರಿದವರು. ತಾಯಿ ಜೂಲಿಯಾ ಅಪೊಸ್ತೊಲಿ ಮಹಿಳಾ ಟೆನಿಸ್‌ನಲ್ಲಿ ಹೆಸರು ಗಳಿಸಿದವರು. ತಂದೆ ಅಪೊಸ್ತೊಲೊಸ್ ಟೆನಿಸ್ ಕೋಚ್‌. ಮೂರನೇ ವಯಸ್ಸಿನಲ್ಲೇ ಟೆನಿಸ್‌ನತ್ತ ಒಲವು ಹೊಂದಿದ ಅವರು ಆರನೇ ವಯಸ್ಸಿನಲ್ಲಿ ಅಭ್ಯಾಸವನ್ನೂ ಆರಂಭಿಸಿದರು. ಅಂದಿನಿಂದ 22ರ ಹರೆಯದ ಇಂದಿನವರೆಗೂ ತಂದೆಯೇ ಗುರು.

ಜೂನಿಯರ್ ವಿಭಾಗದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನಕ್ಕೇರಿ ಹೆಸರು ಗಳಿಸಿದ ಸ್ಟೆಫನೊಸ್ ಗ್ರೀಸ್‌ನಲ್ಲೂ, ವಿಶ್ವಮಟ್ಟದಲ್ಲೂ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಬಂದಿದ್ದಾರೆ. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಹತ್ತರಲ್ಲಿ ಸ್ಥಾನ ಗಳಿಸಿದವರ ಪೈಕಿ ಅತಿ ಕಿರಿಯ ಆಟಗಾರ ಆಗಿದ್ದಾರೆ. ಈಗ ಅವರು ಜೀವನಶ್ರೇಷ್ಠ ಐದನೇ ಸ್ಥಾನದಲ್ಲಿದ್ದಾರೆ. ಗ್ರೀಸ್ ಟೆನಿಸ್‌ ಇತಿಹಾಸದಲ್ಲಿ ಗರಿಷ್ಠ ರ‍್ಯಾಂಕಿಂಗ್ ಹೊಂದಿದ ಆಟಗಾರ ಎನಿಸಿದ್ದಾರೆ. 2019ರ ಎಟಿಪಿ ಫೈನಲ್ಸ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ವರ್ಷಾಂತ್ಯದ ಟೂರ್ನಿಯ ಪ್ರಶಸ್ತಿ ಗೆದ್ದ ಅತಿ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದರು. ಆಗ ಅವರ ವಯಸ್ಸು 19.

ಅದಕ್ಕೂ ಎರಡು ವರ್ಷಗಳ ಹಿಂದೆ ಮೊದಲ ಎಟಿಪಿ ಪಂದ್ಯ ಗೆದ್ದ ಅವರು ನಂತರ ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಮಾಡಿದ ಸಾಧನೆ ಅಚ್ಚರಿ ಮೂಡಿಸಿತ್ತು. 2018ರಲ್ಲಿ ಮೂರು ಟೂರ್ನಿಗಳ ಫೈನಲ್ ಪ್ರವೇಶಿಸಿದ್ದರು. ಕೆನಡಾ ಓಪನ್‌ನಲ್ಲಿ ರನ್ನರ್ ಅಪ್ ಆಗುವ ಮುನ್ನ ಒಂದೇ ಟೂರ್ನಿಯಲ್ಲಿ ಅಗ್ರ ಕ್ರಮಾಂಕದ ಮೂವರು ಆಟಗಾರರನ್ನು ಮಣಿಸಿದ ಮೊದಲ ಆಟಗಾರ ಎಂಬ ಶ್ರೇಯಸ್ಸು ಗಳಿಸಿದ್ದರು. ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಈ ಹಿಂದೆ ಒಟ್ಟು ಮೂರು ಸೆಮಿಫೈನಲ್ ಕಂಡಿದ್ದರೂ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಈ ಮೂಲಕ ಗ್ರ್ಯಾನ್‌ಸ್ಲಾಮ್‌ ಒಂದರ ಫೈನಲ್‌ಗೆ ಲಗ್ಗೆ ಇರಿಸಿದ ಗ್ರೀಸ್‌ನ ಮೊದಲ ಆಟಗಾರ ಎನಿಸಿದ್ದಾರೆ.

ಮಧ್ಯರಾತ್ರಿ ಎದ್ದ; ಗೆದ್ದ

ಟಿವಿಯಲ್ಲಿ ಟೆನಿಸ್ ಆಟ ನೋಡುವ ಹವ್ಯಾಸ ಸಣ್ಣ ವಯಸ್ಸಿನಲ್ಲೇ ಇತ್ತು ಎಂದು ಸ್ಟೆಫನೊಸ್ ಹೇಳಿದ್ದಾರೆ. ಆದರೆ ಅವರ ತಂದೆ ಹೇಳಿದ ಕಥೆಯೊಂದು ಕುತೂಹಲಕಾರಿಯಾಗಿದೆ. ಫ್ರಾನ್ಸ್‌ನಲ್ಲಿ ನಡೆದ ಟೂರ್ನಿಯೊಂದರ ಪಂದ್ಯವನ್ನು ನೋಡಿ ಮಲಗಿದ್ದ ಸ್ಟೆಫನೊಸ್ ಮಧ್ಯರಾತ್ರಿ ಎದ್ದು ‘ಅಪ್ಪ, ನಿನಗೊಂದು ಮಾತು ಹೇಳಬೇಕಿದೆ’ ಎಂದರಂತೆ. ‘ಹೇಳು ಏನು’ ಎಂದಾಗ ‘ನನಗೆ ಟೆನಿಸ್ ಆಟಗಾರ ಆಗಬೇಕು. ಆ ಆಟದ ಸೊಬಗು ಮತ್ತು ಆಟಗಾರರ ಛಲ ನನ್ನನ್ನು ತುಂಬ ಕಾಡುತ್ತಿದೆ’ ಎಂದರಂತೆ.

ಬಾಲಕನ ಆಸೆಯಂತೆ ತರಬೇತಿಗೆ ಸೇರಿಸಲಾಯಿತು. ಅಥೆನ್ಸ್‌ನ ಗ್ಲೈಫಾಡ ಕ್ಲಬ್‌ನಲ್ಲಿ ಪಾಠ ಆರಂಭವಾಯಿತು. ನಂತರ ಫ್ರಾನ್ಸ್‌ನ ‍ಪ್ಯಾಟ್ರಿಕ್ ಮೌರತೊಗ್ಲು ಅಕಾಡೆಮಿಯಲ್ಲಿ ತರಬೇತಿ. 2013ರಲ್ಲಿ ಐಟಿಎಫ್‌ ಜೂನಿಯರ್ ಸರ್ಕೀಟ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಸ್ಪರ್ಧಾತ್ಮಕ ಕಣಕ್ಕೆ ಇಳಿದ ಅವರು 2016ರ ವಿಂಬಲ್ಡನ್‌ ಟೂರ್ನಿಯ ಜೂನಿಯರ್ ವಿಭಾಗದ ಬಾಲಕರ ಡಬಲ್ಸ್‌ ಪ್ರಶಸ್ತಿ ಗೆದ್ದು ಜೂನಿಯರ್ ಗ್ರ್ಯಾನ್‌ಸ್ಲಾಂ ಗೆದ್ದ ದೇಶದ ಮೊದಲ ಆಟಗಾರ ಎನಿಸಿಕೊಂಡಿದ್ದರು. ನಂತರ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಸಾಗಿದರು.

2016ರಲ್ಲಿ ವೃತ್ತಿಪರ ಆಟಗಾರನಾದರು. 2019ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ದಶಕದ ನಂತರ ಗ್ರ್ಯಾನ್ ಸ್ಲಾಂ ಟೂರ್ನಿಯೊಂದರ ನಾಲ್ಕರ ಘಟ್ಟಕ್ಕೇರಿದ ಅತಿ ಕಿರಿಯ ಆಟಗಾರ ‌ಎನಿಸಿದ್ದರು. 2007ರ ಅಮೆರಿಕ ಓಪನ್‌ನಲ್ಲಿ ಜೊಕೊವಿಚ್‌ ಈ ಸಾಧನೆ ಮಾಡಿದ್ದರು. ಇಬ್ಬರೂ 20ನೇ ವಯಸ್ಸಿನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಬಲಶಾಲಿ ಸರ್ವ್‌; ಬೇಸ್‌ಲೈನ್‌ ಪ್ರಭಾವ

ಅಂಗಣದ ತುಂಬ ಓಡಾಡಿ ಚೆಂಡನ್ನು ಎದುರಾಳಿ ಅಂಗಣಕ್ಕೆ ಅಟ್ಟಬಲ್ಲ ಚುರುಕಿನ ಆಟಗಾರ ಸ್ಟೆಫನೊಸ್‌. ಆದರೂ ಅವರ ಬೇಸ್‌ಲೈನ್ ಹೊಡೆತಗಳು ಹೆಚ್ಚು ಆಕರ್ಷಕ ಮತ್ತು ಅದರ ಮೂಲಕವೇ ಹೆಚ್ಚು ಪ್ರಭಾವಿ ಆಗಿದ್ದಾರೆ. ಬಲಶಾಲಿ ಸರ್ವ್‌ಗಳ ಮೂಲಕವೂ ಎದುರಾಳಿಯನ್ನು ಕಂಗೆಡಿಸುವ ಸಾಮರ್ಥ್ಯ ಅವರಿಗಿದೆ. ಟಾ‍ಪ್‌ಸ್ಪಿನ್ ಮೂಲಕ ಪಾಯಿಂಟ್‌ಗಳನ್ನು ಕಬಳಿಸಬಲ್ಲ ಅವರು ನೆಟ್ ಬಳಿ ಬಂದು ಚೆಂಡನ್ನು ಡ್ರಾಪ್ ಮಾಡುವುದರಲ್ಲೂ ಪಳಗಿದ್ದಾರೆ.

ಸುಲಭವಾಗಿ ಗೆಲ್ಲಬಲ್ಲ ಸಂದರ್ಭದಲ್ಲೂ ಚೆಂಡನ್ನು ಅಂಗಣದ ಹೊರಗೆ ಹಾಕುವುದು ಮತ್ತು ಶಕ್ತಿಶಾಲಿ ಸರ್ವ್‌ಗಳನ್ನು ರಿಟರ್ನ್ ಮಾಡಲು ಪರದಾಡುವುದಷ್ಟೇ ಅವರ ದೌರ್ಬಲ್ಯ. ಇವುಗಳಿಂದ ಹೊರಬರಲು ಕೆಲವು ಸಮಯದಿಂದ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಯಶಸ್ವಿಯಾದರೆ ಟೆನಿಸ್ ಜಗತ್ತಿಗೆ ಮತ್ತೊಬ್ಬ ಪರಿಪೂರ್ಣ ಆಟಗಾರನ ಪ್ರವೇಶ ಆದಂತೆಯೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು