ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಮಹಾಮಾರಿ: ಟೆನಿಸ್‌ ಕ್ರೀಡಾಂಗಣದಲ್ಲಿ ತಾತ್ಕಾಲಿಕ ಆಸ್ಪತ್ರೆ!

ಅಮೆರಿಕ ಓಪನ್‌ ಟೂರ್ನಿಗೆ ವೇದಿಕೆ ಕಲ್ಪಿಸುವ ಬಿಲ್ಲಿ ಜೀನ್‌ ಕಿಂಗ್‌ ಕೇಂದ್ರ
Last Updated 31 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಪ್ರತಿಷ್ಠಿತ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಗೆ ವೇದಿಕೆ ಕಲ್ಪಿಸುವ ಬಿಲ್ಲಿ ಜೀನ್‌ ಕಿಂಗ್‌ ರಾಷ್ಟ್ರೀಯ ಟೆನಿಸ್‌ ಕೇಂದ್ರದಲ್ಲಿ ಆಸ್ಪತ್ರೆಯೊಂದು ತಲೆ ಎತ್ತಲಿದೆ!

ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈ ಕ್ರೀಡಾಂಗಣದ ಒಂದು ಭಾಗದಲ್ಲಿ 350 ಹಾಸಿಗೆ ಸಾಮರ್ಥ್ಯವಿರುವ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲು ನ್ಯೂಯಾರ್ಕ್‌ ಸಿಟಿ ಎಮರ್ಜೆನ್ಸಿ ಮ್ಯಾನೆಜ್‌ಮೆಂಟ್‌ (ಎನ್‌ವೈಸಿಇಎಮ್‌) ಕಚೇರಿಯು ನಿರ್ಧರಿಸಿದೆ ಎಂದು ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯು ವರದಿ ಮಾಡಿದೆ.

ಲೂಯಿಸ್‌ ಆರ್ಮ್‌ಸ್ಟ್ರಾಂಗ್‌ ಕ್ರೀಡಾಂಗಣದಲ್ಲಿ ಬೃಹತ್‌ ಪಾಕ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇಲ್ಲಿ ದಿನಕ್ಕೆ 25,000 ಮಂದಿಗೆ ಆಹಾರ ಸಿದ್ಧಪಡಿಸಲಾಗುತ್ತದೆ. ವೈದ್ಯಕೀಯ ಸಿಬ್ಬಂದಿ ಹಾಗೂ ಇತರರಿಗೆ ಈ ಆಹಾರವನ್ನು ಪೂರೈಸಲಾಗುತ್ತದೆ.

46.5 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ಬಿಲ್ಲಿ ಜೀನ್‌ ಕಿಂಗ್‌ ಕೇಂದ್ರದಲ್ಲಿ ಒಟ್ಟು ಮೂರು ಬೃಹತ್‌ ಕ್ರೀಡಾಂಗಣಗಳಿವೆ. ಒಟ್ಟು 33ಟೆನಿಸ್‌ ಅಂಗಳಗಳೂ ಇದರಲ್ಲಿವೆ. ಆರ್ಥರ್‌ ಆ್ಯಷೆ ಕ್ರೀಡಾಂಗಣವು ಒಟ್ಟು 23,200 ಆಸನ ಸಾಮರ್ಥ್ಯ ಹೊಂದಿದೆ.

‘ಒಳಾಂಗಣದಲ್ಲಿರುವ ವಿಸ್ತಾರವಾದ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲು ಅವಕಾಶ ನೀಡುವಂತೆ ಎನ್‌ವೈಸಿಇಎಮ್‌ ಸೋಮವಾರ ಮನವಿ ಮಾಡಿತ್ತು. ಇದಕ್ಕೆ ನಾವು ಒಪ್ಪಿಗೆ ನೀಡಿದ್ದೇವೆ. ಆಸ್ಪತ್ರೆ ನಿರ್ಮಾಣ ಕಾರ್ಯವು ಮಂಗಳವಾರದಿಂದಲೇ ಆರಂಭವಾಗಲಿದೆ’ ಎಂದು ಅಮೆರಿಕ ಟೆನಿಸ್‌ ಸಂಸ್ಥೆಯ (ಯುಎಸ್‌ಟಿಎ) ಮಾಧ್ಯಮ ವಕ್ತಾರ ಕ್ರಿಸ್‌ ವಿಡ್ಮಿಯರ್‌ ಹೇಳಿದ್ದಾರೆ.

‘ನ್ಯೂಯಾರ್ಕ್‌ ನಗರವು ಕೊರೊನಾ ಮಹಾಮಾರಿಯಿಂದ ತಲ್ಲಣಿಸಿದೆ. ಟೆನಿಸ್‌ ಕ್ರೀಡಾಂಗಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಸ್ಪತ್ರೆಯಲ್ಲಿ ಕೋವಿಡ್‌–19 ಪೀಡಿತರಿಗೆ ಚಿಕಿತ್ಸೆ ನೀಡುವುದಿಲ್ಲ. ಸಾಮಾನ್ಯ ರೋಗಿಗಳಿಗೆ ಇಲ್ಲಿ ಆರೈಕೆ ಮಾಡಲಾಗುತ್ತದೆ’ ಎಂದು ಎನ್‌ವೈಸಿಇಎಮ್‌ ಮಾಧ್ಯಮ ವಕ್ತಾರ ಓಮರ್‌ ಬೊರ್ನ್‌ ಸ್ಪಷ್ಟಪಡಿಸಿದ್ದಾರೆ.

‘ನ್ಯೂಯಾರ್ಕ್‌ನಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಲಭ್ಯವಿರುವ ಖಾಲಿ ಜಾಗಗಳಲ್ಲೆಲ್ಲಾ ತಾತ್ಕಾಲಿಕ ಆಸ್ಪತ್ರೆ ಹಾಗೂ ವೈದ್ಯಕೀಯ ಕೇಂದ್ರಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಸೆಂಟ್ರಲ್‌ ಪಾರ್ಕ್‌ನಲ್ಲಿ 68 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT