ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

US Open 2023: ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್‌–ಡೇನಿಯಲ್ ಮೆಡ್ವೆಡೇವ್ ಪೈಪೋಟಿ

Published : 9 ಸೆಪ್ಟೆಂಬರ್ 2023, 19:30 IST
Last Updated : 9 ಸೆಪ್ಟೆಂಬರ್ 2023, 19:30 IST
ಫಾಲೋ ಮಾಡಿ
Comments

ನ್ಯೂಯಾರ್ಕ್‌: ಅಗ್ರ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್ ಅವರನ್ನು ಹಾಲಿ ಚಾಂಪಿಯನ್ ಪಟ್ಟದಿಂದ ಶುಕ್ರವಾರ ಪದಚ್ಯುತಗೊಳಿಸಿದ ಡೇನಿಯಲ್ ಮೆಡ್ವೆಡೇವ್, ಅಮೆರಿಕ ಓಪನ್ ಪುರುಷರ ಸಿಂಗಲ್ಸ್‌ ಫೈನಲ್ ತಲುಪಿದರು.

ಭಾನುವಾರ ನಡೆಯುವ ಫೈನಲ್‌ನಲ್ಲಿ ಅವರು 23 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್, ಎರಡನೇ ಶ್ರೇಯಾಂಕದ ನೊವಾಕ್‌ ಜೊಕೊವಿಚ್‌ ಅವರನ್ನು ಎದುರಿಸಲಿದ್ದಾರೆ. 2021ರಲ್ಲೂ ಇವರಿಬ್ಬರು ಫೈನಲ್‌ ಎದುರಾಳಿಗಳಾಗಿದ್ದರು.

ರಷ್ಯಾದ ಮೆಡ್ವೆಡೇವ್ 7–6 (7–3), 6–1, 3–6, 6–3 ರಿಂದ ಅಲ್ಕರಾಜ್ ಅವರನ್ನು ಸೋಲಿಸಿ ಐದನೇ ಬಾರಿ ಗ್ರ್ಯಾನ್‌ಸ್ಲಾಮ್‌ ಫೈನಲ್ ತಲುಪಿದರು. 2008ರ ನಂತರ ಸತತ ಎರಡು ವರ್ಷ ಚಾಂಪಿಯನ್‌ ಆದ ಮೊದಲ ಆಟಗಾರನಾಗುವ ಅಲ್ಕರಾಜ್ ಕನಸನ್ನೂ ಭಗ್ನಗೊಳಿಸಿದರು. ರೋಜರ್‌ ಫೆಡರರ್‌ 2004 ರಿಂದ 2008ರವರೆಗೆ ಐದು ವರ್ಷ ಸತತವಾಗಿ ಗೆದ್ದ ನಂತರ ಫ್ಲಷಿಂಗ್‌ ಮಿಡೋಸ್‌ನಲ್ಲಿ ಯಾರೂ ಬೆನ್ನುಬೆನ್ನಿಗೆ ಪ್ರಶಸ್ತಿ ಗೆದ್ದಿಲ್ಲ.

‘ಅವರು (ಅಲ್ಕರಾಜ್‌) ನಂಬಲಸಾಧ್ಯ ರೀತಿಯ ಆಟಗಾರ. ಅವರನ್ನು ಸೋಲಿಸಬೇಕಾದರೆ ನಮ್ಮ ಆಟ ಮಾಮೂಲಿ ಆಟಕ್ಕಿಂತ ಎತ್ತರದಲ್ಲಿರಬೇಕು. ನಾನು ಹೇಗೊ ಅದನ್ನು ನಿಭಾಯಿಸಿದೆ’ ಎಂದು 27 ವರ್ಷದ ಮೆಡ್ವೆಡೇವ್ ಪ್ರತಿಕ್ರಿಯಿಸಿದರು.

ಇನ್ನೊಂದೆಡೆ 36 ವರ್ಷದ ಜೊಕೊವಿಚ್‌ ಅವರು 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದು ಆಸ್ಟ್ರೇಲಿಯಾ ಆಟಗಾರ್ತಿ ಮಾರ್ಗರೆಟ್ ಕೋರ್ಟ್‌ ಹೆಸರಿನಲ್ಲಿರುವ ಸರ್ವಾಧಿಕ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲುವಿನ ದಾಖಲೆಯನ್ನು ಸರಿಗಟ್ಟುವ ಪ್ರಯತ್ನದಲ್ಲಿದ್ದಾರೆ. ಆ ಮೂಲಕ ಇಲ್ಲಿನ ಕಿರೀಟದೊಂದಿಗೆ ಅಗ್ರಕ್ರಮಾಂಕಕ್ಕೆ ಮೆರುಗು ನೀಡುವ ಅವಕಾಶ ಹೊಂದಿದ್ದಾರೆ.

3ನೇ ಶ್ರೇಯಾಂಕದ ಮೆಡ್ವೆಡೇವ್ ತಮ್ಮ ಏಕೈಕ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು 2021ರಲ್ಲಿ ಇಲ್ಲಿಯೇ  ಗೆದ್ದುಕೊಂಡಿದ್ದರು. ಆ ವರ್ಷ ಅವರು ಫೈನಲ್‌ನಲ್ಲಿ ನೊವಾಕ್‌ ಜೊಕೊವಿಚ್‌ ಅವರನ್ನೇ ನೇರ ಸೆಟ್‌ಗಳಲ್ಲಿ ಸೋಲಿಸಿದ್ದರು. ಇತರ ಮೂರು ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಚಾಂಪಿಯನ್ ಆಗಿದ್ದು ಕ್ಯಾಲೆಂಡರ್‌ ಗ್ರ್ಯಾಂಡ್‌ಸ್ಲಾಮ್‌ ಕೈತಪ್ಪಿದ ಹತಾಶೆಯಲ್ಲಿ ಜೊಕೊ ಅವರಿಗೆ ಆಗ ಕಣ್ಣೀರು ತಡೆಯಲಾಗಿರಲಿಲ್ಲ.

ಇಲ್ಲೂ ಅಮೋಘ ಆಟದ ಪ್ರದರ್ಶನವನ್ನೇ ನೀಡಿದ ಮೆಡ್ವೆಡೇವ್, ಸ್ಪೇನ್‌ನ ಗಟ್ಟಿಗನನ್ನು ಸೋಲಿಸಿ, ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

‘ಬಹುಶಃ ಇಂಥ ಪಂದ್ಯಗಳನ್ನು ನಿಭಾಯಿಸಲು ಬೇಕಾದ ಪ್ರಬುದ್ಧತೆ ಇನ್ನೂ ಬರಬೇಕಾಗಿದೆ. ಅದನ್ನು  ನಾನು ಕಲಿತುಕೊಳ್ಳಬೇಕಿದೆ’ ಎಂದರು ಅಲ್ಕರಾಜ್.

ಜೊಕೊವಿಚ್ ಇನ್ನೊಂದು ಸೆಮಿಫೈನಲ್‌ನಲ್ಲಿ ಶ್ರೇಯಾಂಕರಹಿತ ಆಟಗಾರ ಬೆನ್ ಶೆಲ್ಟನ್ನ(ಅಮೆರಿಕ)  ಅವರ ಯಶಸ್ಸಿನ ಓಟವನ್ನು 6–3, 6–2, 7–6 (7/4) ರಿಂದ ಅಂತ್ಯಗೊಳಿಸಿ 17 ಯತ್ನಗಳಲ್ಲಿ ಹತ್ತನೇ ಬಾರಿ ಇಲ್ಲಿ ಫೈನಲ್ ತಲುಪಿದರು.

‘ಇನ್ನೊಂದು ಗ್ರ್ಯಾನ್‌ಸ್ಲಾಮ್‌ ಫೈನಲ್‌! ಈ ಸ್ಥಾನದಲ್ಲಿ ಇದಕ್ಕಿಂತ ಹೆಚ್ಚು ಖುಷಿ ಬೇರೆಯೇನಿಲ್ಲ’ ಎಂದು ಸರ್ಬಿಯಾದ ಆಟಗಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT