ಶನಿವಾರ, ಅಕ್ಟೋಬರ್ 8, 2022
21 °C
ಅಮೆರಿಕ ಓಪನ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋಲು

ಮಹಿಳಾ ಟೆನಿಸ್‌ನ ಮಿನುಗುತಾರೆ ಸೆರೆನಾ: ವಿದಾಯದತ್ತ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ರಾಯಿಟರ್ಸ್‌/ ಎಎಫ್‌ಪಿ): ಎರಡು ದಶಕಗಳಿಗೂ ಹೆಚ್ಚು ಕಾಲ ಮಹಿಳಾ ಟೆನಿಸ್‌ನಲ್ಲಿ ಮಿನುಗಿ ನಿಂತ ಸೆರೆನಾ ವಿಲಿಯಮ್ಸ್‌ ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಅವರ ವರ್ಣರಂಜಿತ ಟೆನಿಸ್‌ ವೃತ್ತಿಬದುಕು ಬಹುತೇಕ ಕೊನೆಗೊಂಡಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಕ್ರೊವೇಷ್ಯ ಮೂಲದ ಆಸ್ಟ್ರೇಲಿಯಾದ ಆಟಗಾರ್ತಿ ಅಯ್ಲಾ ಟೊಮ್ಲಾನೊವಿಚ್‌ 7-5, 6-7 (4/7), 6-1 ರಲ್ಲಿ ಅಮೆರಿಕದ ದಿಗ್ಗಜ ಆಟಗಾರ್ತಿಯನ್ನು ಮಣಿಸಿದರು.

‘ನಿವೃತ್ತಿಗೆ ಕ್ಷಣಗಣನೆ ಶುರುವಾಗಿದೆ’ ಎಂದು ಸೆರೆನಾ ಒಂದು ತಿಂಗಳ ಹಿಂದೆಯೇ ಪ್ರಕಟಿಸಿದ್ದರು. ವಿದಾಯದ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲವಾದರೂ, ಶುಕ್ರವಾರ ಆಡಿದ ಪಂದ್ಯವೇ ಅವರ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಭಾವಿಸಲಾಗಿದೆ.

ಸೋಲು ಅನುಭವಿಸಿದ ಸೆರೆನಾ ಭಾವುಕರಾಗಿ ಅಭಿಮಾನಿಗಳತ್ತ ಕೈಬೀಸಿ ಅಂಗಳದಿಂದ ನಿರ್ಗಮಿಸಿದರು. ಈ ಪಂದ್ಯ ವೀಕ್ಷಿಸಲು ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ 23,859 ಮಂದಿ ನೆರೆದಿದ್ದರು.

ಸೆ. 26ಕ್ಕೆ 41ನೇ ವಯಸ್ಸಿಗೆ ಕಾಲಿಡಲಿರುವ ಸೆರೆನಾ, ತವರು ನೆಲದಲ್ಲಿ ಮತ್ತೊಂದು ಗ್ರ್ಯಾನ್‌ಸ್ಲಾಮ್‌ ಗೆದ್ದು ವೃತ್ತಿಬದುಕಿಗೆ ತೆರೆ ಎಳೆಯಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಅದಕ್ಕೆ ಟೊಮ್ಲಾನೊವಿಚ್‌ ಅವಕಾಶ ನೀಡಲಿಲ್ಲ. ಪ್ರಬಲ ಪೈಪೋಟಿ ನಡೆದ ಪಂದ್ಯದ ಮೊದಲ ಸೆಟ್‌ ಸೋತ ಸೆರೆನಾ, ಎರಡನೇ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಗೆದ್ದು ಸಮಬಲ ಸಾಧಿಸಿದರು. ಕೊನೆಯ ಸೆಟ್‌ನಲ್ಲಿ 1–0 ರಲ್ಲಿ ಮುನ್ನಡೆಯಲ್ಲಿದ್ದರು. ಆ ಬಳಿಕ ಆರೂ ಗೇಮ್‌ಗಳನ್ನು ಎದುರಾಳಿಗೆ ಒಪ್ಪಿಸಿ ನಿರಾಸೆ ಅನುಭವಿಸಿದರು.

ನಿವೃತ್ತಿ ನಿರ್ಧಾರವನ್ನು ಮುಂದೂಡುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಸೆರೆನಾ, ‘ನಿರ್ಧಾರ ಪುನರ್‌ ಪರಿಶೀಲಿಸುವುದಿಲ್ಲ. ಆದರೆ ಭವಿಷ್ಯದ ಬಗ್ಗೆ ಏನನ್ನೂ ಹೇಳಲಾಗದು’ ಎಂದು ಉತ್ತರಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. 

‘ವೃತ್ತಿಜೀವನದಲ್ಲಿ ನನಗೆ ‘ಮುನ್ನುಗ್ಗು ಸೆರೆನಾ’ ಎಂದು ಹುರಿದುಂಬಿಸಿದ ಪ್ರತಿಯೊಬ್ಬ ಅಭಿಮಾನಿಗೂ ಚಿರಋಣಿಯಾಗಿದ್ದೇನೆ. ನಿಮ್ಮ ಬೆಂಬಲದಿಂದಾಗಿ ನಾನು ಈ ಹಂತದವರೆಗೆ ಬೆಳೆದಿದ್ದೇನೆ’ ಎಂದು ಹೇಳಿ ಸೆರೆನಾ ಕಣ್ಣೀರಾದರು.

ಸೆರೆನಾ ವಿಲಿಯಮ್ಸ್‌ ತಮ್ಮ ಸಹೋದರಿ ವೀನಸ್‌ ವಿಲಿಯಮ್ಸ್‌ ಅವರ ಬೆಂಬಲವನ್ನು ಸ್ಮರಿಸಿಕೊಂಡರು. ‘ಒಂದು ವೇಳೆ ವೀನಸ್ ಇಲ್ಲದೇ ಹೋಗಿದ್ದರೆ ಸೆರೆನಾ ಇರುತ್ತಿರಲಿಲ್ಲ. ವೀನಸ್, ನಿನಗೆ ಧನ್ಯವಾದಗಳು. ವೀನಸ್‌ ಅವರಿಂದಾಗಿಯೇ ಸೆರೆನಾ ನಿಮ್ಮೆಲ್ಲರ ಮುಂದೆ ಬೆಳೆದು ನಿಂತಿದ್ದಾಳೆ’ ಎಂದು ಹೇಳಿದರು.

ಸೆರೆನಾ 1999 ರಲ್ಲಿ ತಮ್ಮ 17ನೇ ವರ್ಷದಲ್ಲಿ ಇಲ್ಲಿ ಚಾಂಪಿಯನ್‌ ಆಗಿ, ಚೊಚ್ಚಲ ಗ್ರ್ಯಾನ್‌ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಎರಡು ದಶಕಗಳಿಗೂ ಹೆಚ್ಚು ಸಮಯ ಮಹಿಳಾ ಟೆನಿಸ್‌ ಜಗತ್ತನ್ನು ಆಳಿದರಲ್ಲದೆ, 23 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ಧಾರೆ. 

2017ರಲ್ಲಿ ಗೆದ್ದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯೇ ಅವರ ಕೊನೆಯ ಗ್ರ್ಯಾನ್‌ಸ್ಲಾಮ್‌ ಆಗಿದೆ. ಅದಾದ ಬಳಿಕ ಗಾಯದ ಸಮಸ್ಯೆ ಹಾಗೂ ವೈಯುಕ್ತಿಕ ಕಾರಣಗಳಿಂದ ಕೆಲವು ಸಮಯ ಟೆನಿಸ್‌ನಿಂದ ದೂರವುಳಿದಿದ್ದರು. ಮರಳಿ ಕಣಕ್ಕಿಳಿದರೂ ಹಳೆಯ ಲಯ ಕಂಡುಕೊಳ್ಳಲು ಆಗಿರಲಿಲ್ಲ. 2020ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಎಎಸ್‌ಬಿ ಕ್ಲಾಸಿಕ್‌ ಟೂರ್ನಿಯ ಬಳಿಕ ಯಾವುದೇ ಡಬ್ಲ್ಯುಟಿಎ ಪ್ರಶಸ್ತಿಯನ್ನೂ ಜಯಿಸಿಲ್ಲ. ಆದರೂ ಅವರು ಎಲ್ಲೇ ಆಡಿದರೂ ಅಭಿಮಾನಿಗಳು ಕಿಕ್ಕಿರಿದು ನೆರೆಯುತ್ತಿದ್ದರು.

ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ: ಗಾಲ್ಫ್‌ ಆಟಗಾರ ಟೈಗರ್‌ ವುಡ್ಸ್‌, ಮಿಷಲ್‌ ಒಬಾಮಾ, ಬ್ಯಾಸ್ಕೆಟ್‌ಬಾಲ್‌ ದಂತಕತೆ ಲೆಬ್ರಾನ್‌ ಜೇಮ್ಸ್‌ ಒಳಗೊಂಡಂತೆ ಹಲವರು ಸೆರೆನಾ ಅವರನ್ನು ಶ್ಲಾಘಿಸಿದ್ದಾರೆ.

‘ಸೆರೆನಾ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ. ನಿಮಗೆ ಅಭಿನಂದನೆಗಳು’ ಎಂದು ಲೆಬ್ರಾನ್‌ ತಮ್ಮ ವಿಡಿಯೊ ಸಂದೇಶದಲ್ಲಿ ತಿಳಿಸಿದ್ಧಾರೆ.

ಸೆರೆನಾ ಸಾಗಿದ ಹಾದಿ...

1995: ವೃತ್ತಿಪರ ಆಟಗಾರ್ತಿಯಾಗಿ ಕಣಕ್ಕೆ

1999: ಅಮೆರಿಕ ಓಪನ್‌ನಲ್ಲಿ ಗೆದ್ದು ಮೊದಲ ಗ್ರ್ಯಾನ್‌ಸ್ಲಾಮ್‌ ಕಿರೀಟ ಮುಡಿಗೆ. ಅಲ್ತಿಯಾ ಗಿಬ್ಸನ್‌ (1958) ಬಳಿಕ ಗ್ರ್ಯಾನ್‌ಸ್ಲಾಮ್‌ ಗೆದ್ದ ಮೊದಲ ಆಫ್ರಿಕನ್‌– ಅಮೆರಿಕನ್‌ ಮಹಿಳೆ ಎಂಬ ಗೌರವ

2002–03: ಗಾಯದ ಕಾರಣ 2002ರ ಆಸ್ಟ್ರೇಲಿಯಾ ಓಪನ್‌ಗೆ ಗೈರು. ಬಳಿಕದ ಆರು ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಐದರಲ್ಲಿ ಚಾಂಪಿಯನ್‌ಪಟ್ಟ.

2004–07: ಗಾಯದ ಸಮಸ್ಯೆಯಿಂದ ವೃತ್ತಿಜೀವನದಲ್ಲಿ ಹಿನ್ನಡೆ. ಆದರೂ 2005, 2007ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ

2012: ವಿಂಬಲ್ಡನ್‌ ಕಿರೀಟ ಹಾಗೂ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಾಧನೆ

2014: ಅಮೆರಿಕ ಓಪನ್‌ ಗೆದ್ದು ಕ್ರಿಸ್‌ ಎವರ್ಟ್‌ ಮತ್ತು ಮಾರ್ಟಿನಾ ನವ್ರಾಟಿಲೋವಾ (18 ಗ್ರ್ಯಾನ್‌ಸ್ಲಾಮ್‌) ಅವರ ದಾಖಲೆ ಸರಿಗಟ್ಟಿದ ಸಾಧನೆ

2015: ಆಸ್ಟ್ರೇಲಿಯಾ ಓಪನ್‌ ಜಯಿಸಿ, 19ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಹಿರಿಮೆ

2016: ಸ್ಟೆಫಿ ಗ್ರಾಫ್‌ ಅವರ 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ದಾಖಲೆ ಸರಿಗಟ್ಟಿದ ಸಾಧನೆ

2017: ಆಸ್ಟ್ರೇಲಿಯಾ ಓಪನ್ ಗೆದ್ದು ಸ್ಟೆಫಿ ಗ್ರಾಫ್‌ ಹಿಂದಿಕ್ಕಿ 23ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ ಮುಡಿಗೆ.

2018–19: ಪುತ್ರಿ ಒಲಿಂಪಿಯಾಗೆ ಜನ್ಮನೀಡಿದ ಬಳಿಕ ಟೆನಿಸ್‌ ಕಣಕ್ಕೆ ಮರಳಿ, ವಿಂಬಲ್ಡನ್‌ ಮತ್ತು ಅಮೆರಿಕ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ

2021–22: 2021ರ ವಿಂಬಲ್ಡನ್‌ ಟೂರ್ನಿಯಲ್ಲಿ ಆಡುವಾಗ ಗಾಯಗೊಂಡು ಹೊರಕ್ಕೆ. 12 ತಿಂಗಳು ಟೆನಿಸ್‌ನಿಂದ ದೂರ

2022: ವಿಂಬಲ್ಡನ್‌ ಮೊದಲ ಸುತ್ತಿನಲ್ಲಿ ಸೋಲು. ಅಮೆರಿಕ ಓಪನ್‌ನ ಮೂರನೇ ಸುತ್ತಿನಲ್ಲಿ ನಿರ್ಗಮನ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು