ಬುಧವಾರ, ಏಪ್ರಿಲ್ 14, 2021
31 °C

ಟೆನಿಸ್‌: ವೈಭವ್, ದಿಶಾಗೆ ಚಾಂಪಿಯನ್ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವೈಭವ್ ಕೃಷ್ಣ ಶ್ರೀರಾಮ್ ಮತ್ತು ದಿಶಾ ಸಂತೋಷ್‌ ಖಂಡೋಜಿ ಇಲ್ಲಿನ ಟೆನಿಸ್ 360 ಅಕಾಡೆಮಿಯಲ್ಲಿ ನಡೆದ ರಾಜ್ಯ ಟೆನಿಸ್ ಸಂಸ್ಥೆಯ ಟ್ಯಾಲೆಂಟ್ ಸೀರಿಸ್‌ನ 16 ವರ್ಷದೊಳಗಿನವರ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. 

ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರನೇ ಶ್ರೇಯಾಂಕದ ವೈಭವ್‌ ನಾಲ್ಕನೇ ಶ್ರೇಯಾಂಕಿತ ಸುಚಿರ್ ಚೇತನ್ ಶೇಷಾದ್ರಿ ವಿರುದ್ಧ ಗೆಲುವು ಸಾಧಿಸಿದರು. ಬಾಲಕಿಯರ ವಿಭಾಗದಲ್ಲಿ ಮೂರನೇ ಶ್ರೇಯಾಂಕದ ಕಾಜಲ್ ರಮಿಸೆಟ್ಟಿ ಅವರನ್ನು ಮಣಿಸಿದ ದಿಶಾ ಪ್ರಶಸ್ತಿ ಮುಡಿಗೇರಿಸಿಕೊಂಡರು. 

ಕಳೆದ ತಿಂಗಳು ನಡೆದ ಕೆಎಸ್‌ಎಲ್‌ಟಿಎ–ಎಐಟಿಎ 14 ವರ್ಷದೊಳಗಿನವರ ವಿಭಾಗದ ಟೂರ್ನಿಯಲ್ಲಿ ರನ್ನರ್ ಅಪ್‌ ಆಗಿದ್ದ ದಿಶಾ ಶುಕ್ರವಾರ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್ ಮುರಿದು ಭರವಸೆ ಮೂಡಿಸಿದರು. ಆದರೆ ಮುಂದಿನ ಮೂರು ಗೇಮ್‌ಗಳಲ್ಲಿ ನಿರಾಸೆ ಅನುಭವಿಸಿದರು. ಚೇತರಿಸಿಕೊಂಡು ಹಿನ್ನಡೆಯನ್ನು 3–4ಕ್ಕೆ ಇಳಿಸಿದ ಅವರು ನಂತರ ಸತತ ಮೂರು ಗೇಮ್‌ ಗೆದ್ದು ಖುಷಿಪಟ್ಟರು. 

ಎರಡನೇ ಸೆಟ್‌ನಲ್ಲೂ ಆರಂಭದಲ್ಲಿ ಹಿನ್ನಡೆ ಅನುಭವಿಸಿದ 13 ವರ್ಷದ ದಿಶಾ ನಂತರ 4–2ರಲ್ಲಿ ಮುನ್ನಡೆದರು. 5–4ರ ಮುನ್ನಡೆಯೊಂದಿಗೆ ಚಾಂಪಿಯನ್‌ಷಿಪ್‌ಗಾಗಿ ಸರ್ವ್ ಮಾಡಿದ ಅವರು ಒಂದು ಹಂತದಲ್ಲಿ 15–40ರ ಹಿನ್ನಡೆಯಲ್ಲಿದ್ದರು. ಆದರೆ ಪಟ್ಟು ಬಿಡದೆ ಕಾದಾಡಿ ಪಂದ್ಯ ಗೆದ್ದು ಸಂಭ್ರಮಿಸಿದರು. 

ಬಾಲಕರ ವಿಭಾಗದ ಫೈನಲ್‌ನಲ್ಲಿ ಇಬ್ಬರೂ ಜಿದ್ದಾಜಿದ್ದಿಯ ಹೋರಾಟ ನಡೆಸಿದರು. ಮೊದಲ ಸೆಟ್‌ನ ಏಳನೇ ಗೇಮ್‌ ವರೆಗೂ ರೋಚಕ ಹೋರಾಟ ಕಂಡುಬಂತು. ವೈಭವ್‌ 4–3ರ ಮುನ್ನಡೆ ಸಾಧಿಸಿ ಮುಂದಿನ ಎರಡು ಗೇಮ್‌ಗಳನ್ನು ಸುಲಭವಾಗಿ ಗೆದ್ದು ಶುಭಾರಂಭ ಮಾಡಿದರು. ಎರಡನೇ ಸೆಟ್‌ನಲ್ಲಿ 5–4ರ ಮುನ್ನಡೆ ಸಾಧಿಸಿದ್ದರೂ ನಂತರ ಎದುರಾಳಿ ತಿರುಗೇಟು ನೀಡಿ 7–5ರಲ್ಲಿ ಜಯ ಗಳಿಸಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ವೈಭವ್ 4–2ರ ಮುನ್ನಡೆ ಸಾಧಿಸಿ ನಿರೀಕ್ಷೆ ಮೂಡಿಸಿದರು. ಮುಂದಿನ ಎರಡು ಗೇಮ್‌ಗಳನ್ನು ಕೂಡ ಗೆದ್ದು ಪಂದ್ಯ ಹಾಗೂ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

ಫಲಿತಾಂಶ: ಬಾಲಕರ ಫೈನಲ್‌: ವೈಭವ್ ಕೃಷ್ಣಗೆ ಸುಚಿರ್ ಚೇತನ್ ಶೇಷಾದ್ರಿ ವಿರುದ್ಧ 6-3, 5-7, 6-2ರಲ್ಲಿ ಜಯ. ಬಾಲಕಿಯರ ಫೈನಲ್‌: ದಿಶಾ ಸಂತೋಷ್ ಖಂಡೋಜಿಗೆ ಕಾಜಲ್ ರಮಿಸೆಟ್ಟಿ ವಿರುದ್ಧ 6-4, 6-4ರಲ್ಲಿ ಗೆಲುವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು