ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಹಾಲಿ ಚಾಂಪಿಯನ್‌ ಮರ್ಕೆತಾಗೆ ಆಘಾತ

ಎರಡನೇ ಸುತ್ತಿಗೆ ಎಲೆನಾ ರಿಬಾಕಿನಾ, ಜೊಕೊವಿಚ್‌
Published 2 ಜುಲೈ 2024, 21:00 IST
Last Updated 2 ಜುಲೈ 2024, 21:00 IST
ಅಕ್ಷರ ಗಾತ್ರ

ಲಂಡನ್‌: ಹಾಲಿ ಚಾಂಪಿಯನ್‌ ಮರ್ಕೆತಾ ವೊಂಡ್ರುಸೊವಾ ಅವರು ಮಂಗಳವಾರ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು.

ಝೆಕ್‌ ರಿಪಬ್ಲಿಕ್‌ನ 25 ವರ್ಷದ ವೊಂಡ್ರುಸೊವಾ, ಕಳೆದ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೊದಲ ಶ್ರೇಯಾಂಕರಹಿತ ಆಟಗಾರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆದರೆ, ಈ ಬಾರಿ ಆರನೇ ಶ್ರೇಯಾಂಕ ಪಡೆದಿರುವ ಅವರು 4–6, 2–6 ಸೆಟ್‌ಗಳಿಂದ ಶ್ರೇಯಾಂಕರಹಿತ ಜೆಸ್ಸಿಕಾ ಬೌಜಾಸ್ ಮನೇರೊ ಅವರಿಗೆ ಶರಣಾದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ವೊಂಡ್ರುಸೊವಾ ಕೇವಲ 66 ನಿಮಿಷಗಳ ಪಂದ್ಯದಲ್ಲಿ 83ನೇ ಕ್ರಮಾಂಕದ ಸ್ಪೇನ್‌ನ ಆಟಗಾರ್ತಿಗೆ ಶರಣಾದರು.

ಟೆನಿಸ್‌ನಲ್ಲಿ ಓಪನ್‌ ಯುಗ ಆರಂಭವಾದ ಮೇಲೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತ ಎರಡನೇ ಹಾಲಿ ಚಾಂಪಿಯನ್ ವೊಂಡ್ರುಸೊವಾ ಆಗಿದ್ದಾರೆ. 30 ವರ್ಷಗಳ ಹಿಂದೆ (1994) ಹಾಲಿ ಚಾಂಪಿಯನ್ ಆಗಿದ್ದ ಸ್ಟೆಫಿ ಗ್ರಾಫ್ ಅವರು ಲೋರಿ ಮೆಕ್‌ನೀಲ್ ಅವರಿಗೆ ಮೊದಲ ಸುತ್ತಿನಲ್ಲೇ ಮಣಿದಿದ್ದರು.

ವೃತ್ತಿಜೀವನದಲ್ಲಿ ಮೂರನೇ ಗ್ರ್ಯಾನ್‌ಸ್ಲಾಮ್ ಟೂರ್ನಿ ಆಡುತ್ತಿರುವ 21 ವರ್ಷ ವಯಸ್ಸಿನ ಜೆಸ್ಸಿಕಾ ಸ್ಫೂರ್ತಿಯುತ ಆಟ ಪ್ರದರ್ಶಿಸಿದರು. ಆದರೆ, ಪಂದ್ಯದುದ್ದಕ್ಕೂ ವೊಂಡ್ರುಸೊವಾ ನಿಖರ ಸರ್ವ್‌ ಕಂಡುಕೊಳ್ಳಲು ಪರದಾಡಿದರು. ಅವರು ಎಸಗಿದ 28 ಸ್ವಯಂಕೃತ ತಪ್ಪುಗಳು ಹಿನ್ನಡೆಗೆ ಕಾರಣವಾದವು.

‘ಕಳೆದ ತಿಂಗಳು ನಡೆದ ಬರ್ಲಿನ್‌ನ ಹುಲ್ಲಿನ ಅಂಗಣದ ಟೂರ್ನಿಯಲ್ಲಿ ಸೊಂಟಕ್ಕೆ ನೋವುಂಟಾದ ನಂತರ ಇಲ್ಲಿ ಮೊದಲ ಪಂದ್ಯದಲ್ಲಿ ಎಚ್ಚರ ವಹಿಸಿ ಆಡಿದೆ. ಅಭ್ಯಾಸದ ವೇಳೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ, ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಪಂದ್ಯದ ಬಳಿಕ ವೊಂದ್ರೊಸೋವಾ ನಿರಾಸೆ ವ್ಯಕ್ತಪಡಿಸಿದರು.

ರಿಬಾಕಿನಾ ಮುನ್ನಡೆ: ಮಾಜಿ ಚಾಂಪಿಯನ್‌ ಎಲೆನಾ ರಿಬಾಕಿನಾ 6-3, 6-1‌ರಿಂದ ಗೇಬ್ರಿಯೆಲಾ ರೂಸ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಮುನ್ನಡೆದರು.

2022ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿರುವ ಕಜಕಸ್ತಾನದ 25 ವರ್ಷ ವಯಸ್ಸಿನ ರಿಬಾಕಿನಾ ಕೇವಲ 49 ನಿಮಿಷದ ಹೋರಾಟದಲ್ಲಿ ನೇರ ಸೆಟ್‌ಗಳಿಂದ ರೊಮೇನಿಯಾದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. ಮೊದಲ ಸೆಟ್‌ನಲ್ಲಿ 3–1ರಿಂದ ಹಿನ್ನಡೆಯಲ್ಲಿದ್ದ ರಿಬಾಕಿನಾ ನಂತರ ಚೇತರಿಸಿಕೊಂಡು ಸತತ ಒಂಬತ್ತು ಗೇಮ್‌ಗಳನ್ನು ಗೆದ್ದರು.

ಜೊಕೊವಿಚ್‌ ಶುಭಾರಂಭ: ಏಳು ಬಾರಿಯ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಅವರು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಝೆಕ್‌ ರಿಪಬ್ಲಿಕ್‌ನ ಕ್ವಾಲಿಫೈಯರ್‌ ಆಟಗಾರ ವಿಟ್ ಕೊಪ್ರಿವಾ ಅವರನ್ನು ಮಣಿಸಿ ಶುಭಾರಂಭ ಮಾಡಿದರು. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ಕಣಕ್ಕೆ ಇಳಿದ ಎರಡನೇ ಶ್ರೇಯಾಂಕದ ಜೊಕೊವಿಚ್‌ 6-1, 6-2, 6-2ರಿಂದ 123ನೇ ಕ್ರಮಾಂಕದ ಕೊಪ್ರಿವಾ ಅವರನ್ನು ಸದೆಬಡಿದರು. ನಾಲ್ಕನೇ ಶ್ರೇಯಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 6-2, 6-4, 6-2ರಿಂದ ರಾಬರ್ಟ್‌ ಕಾರ್ಬಲ್ಸ್ ಬೇನಾ ಅವರನ್ನು ಮಣಿಸಿದರೆ, ಏಳನೇ ಶ್ರೇಯಾಂಕದ ಪೋಲೆಂಡ್‌ನ ಹಬರ್ಟ್ ಹರ್ಕಾಜ್ 5-7, 6-4, 6-3, 6-4ರಿಂದ ರಾಡು ಆಲ್ಬೋಟ್ ಅವರನ್ನು ಸೋಲಿಸಿ ಮುನ್ನಡೆದರು.

ಆದರೆ, ಆರನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಅವರಿಗೆ ಮೊದಲ ಸುತ್ತಿನಲ್ಲೇ ಆಘಾತವಾಯಿತು. ಅರ್ಜೆಂಟೀನಾದ ಫ್ರಾನ್ಸಿಸ್ಕೊ ​​ಕೊಮೆಸಾನಾ 6-4, 5-7, 6-2, 7-6 (7/5) ರಷ್ಯಾದ ಆಟಗಾರನನ್ನು ಹಿಮ್ಮೆಟ್ಟಿಸಿದರು.

37 ವರ್ಷದ ಜೊಕೊವಿಚ್‌ 32ರ ಘಟ್ಟದ ಮುಂದಿನ ಪಂದ್ಯದಲ್ಲಿ ಬ್ರಿಟನ್‌ನ ವೈಲ್ಡ್‌ಕಾರ್ಡ್‌ ಆಟಗಾರ ಜಾಕೋಬ್ ಫಿಯರ್ನ್ಲಿ ಅಥವಾ ಸ್ಪೇನ್‌ನ ಅಲೆಜಾಂಡ್ರೊ ಮೊರೊ ಕ್ಯಾನಸ್ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT