ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಕೊವಿಚ್‌, ನಡಾಲ್‌ ಮೇಲೆ ಎಲ್ಲರ ಗಮನ

ಇಂದಿನಿಂದ ವಿಂಬಲ್ಡನ್‌ ಟೆನಿಸ್‌ ಹಬ್ಬ: ದಿಗ್ಗಜರ ಪೈಪೋಟಿಗೆ ವೇದಿಕೆ ಸಜ್ಜು
Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಲಂಡನ್‌ : ಋತುವಿನ ಮೂರನೇ ಗ್ರ್ಯಾನ್‌ಸ್ಲಾಮ್‌, ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಹುಲ್ಲಿನಂಕಣದಲ್ಲಿ ನಡೆಯುವ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವತ್ತ ದಿಗ್ಗಜ ಕ್ರೀಡಾಪಟುಗಳು ಚಿತ್ತ ನೆಟ್ಟಿದ್ದು, ಅವರ ಆಟದ ಸೊಬಗು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಜುಲೈ 1ರಿಂದ 14ರವರೆಗೆ ಟೂರ್ನಿ ನಡೆಯಲಿದೆ.
ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌, ಪ್ರಶಸ್ತಿ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅವರು ಐದನೇ ಟ್ರೋಫಿಯ ನಿರೀಕ್ಷೆಯಲ್ಲಿದ್ದಾರೆ. ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಕೂಡಾ ಟೂರ್ನಿಯ ಆಕರ್ಷಣೆಯಾಗಿದ್ದಾರೆ.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ನಡಾಲ್‌, ಟೂರ್ನಿಯ ಶ್ರೇಯಾಂಕ ಪದ್ಧತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮೂರನೇ ಶ್ರೇಯಾಂಕ ಗಳಿಸಿರುವ ಅವರು ಮೂರನೇ ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ. ಈ ಋತುವಿನಲ್ಲಿ ಸತತ ಎರಡು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಅವಕಾಶವೂ ಅವರಿಗಿದೆ. ಇತ್ತೀಚೆಗೆ ನಡೆದಿದ್ದ ಫ್ರೆಂಚ್‌ ಓಪನ್‌ನಲ್ಲಿ ‘ರಫಾ’ 12ನೇ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದ್ದರು.

37ರ ಹರೆಯದ ‘ಚಿರ ಯುವಕ’ ಫೆಡರರ್‌ ಕೂಡಾ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಟೂರ್ನಿಯಲ್ಲಿ ಅವರು ಈಗಾಗಲೇ ಎಂಟು ಟ್ರೋಫಿಗಳನ್ನು ಗೆದ್ದಿದ್ದಾರೆ.ಎರಡನೇ ಶ್ರೇಯಾಂಕದ ಆಟಗಾರ ರೋಜರ್‌, 21ನೇ ಗ್ರ್ಯಾನ್‌ಸ್ಲಾಮ್‌ ಗರಿ ಮುಡಿಗೇರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಈ ಬಾರಿ ಚಾಂಪಿಯನ್‌ ಆದರೆ ಗ್ರ್ಯಾನ್‌ಸ್ಲಾನ್‌ನಲ್ಲಿ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರ ಎಂಬ ಹಿರಿಮೆ ಅವರದ್ದಾಗಲಿದೆ. 1999ರಲ್ಲಿ ಅವರು ಮೊದಲ ಸಲ ವಿಂಬಲ್ಡನ್‌ನಲ್ಲಿ ಕಣಕ್ಕಿಳಿದಿದ್ದರು.

ಮಂಗಳವಾರ ನಡೆಯುವ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಫೆಡರರ್‌, ದಕ್ಷಿಣ ಆಫ್ರಿಕಾದ ಲಾಯ್ಡ್‌ ಹ್ಯಾರಿಸ್‌ ಎದುರು ಸೆಣಸಲಿದ್ದಾರೆ. 2008 ಮತ್ತು 2010ರಲ್ಲಿ ಚಾಂಪಿಯನ್‌ ಆಗಿದ್ದ ನಡಾಲ್‌, ಪ್ರಥಮ ಸುತ್ತಿನಲ್ಲಿ ಜಪಾನ್‌ನ ಯೂಚಿ ಸುಗಿಟೊ ವಿರುದ್ಧ ಆಡುವರು. ಸರ್ಬಿಯಾದ ಜೊಕೊವಿಚ್‌ಗೆ ಮೊದಲ ಸುತ್ತಿನಲ್ಲಿ ಫಿಲಿಪ್‌ ಕೊಹ್ಲ್‌ಶ್ರಿಬರ್‌ ಸವಾಲು ಎದುರಾಗಲಿದೆ.

ಡಾಮಿನಿಕ್‌ ಥೀಮ್‌, ಅಲೆಕ್ಸಾಂಡರ್‌ ಜ್ವೆರೆವ್‌, ಸ್ಟೆಫಾನೊಸ್‌ ಸಿಸಿಪಸ್‌ ಮತ್ತು ಸ್ಟಾನಿಸ್ಲಾಸ್‌ ವಾವ್ರಿಂಕ ಅವರೂ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಜಪಾನ್‌ನ ಕೀ ನಿಶಿಕೋರಿ, ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್‌ಸನ್‌ ಅವರ ಮೇಲೂ ಹೆಚ್ಚಿನ ಭರವಸೆ ಇಡಲಾಗಿದೆ. ಹೋದ ವರ್ಷದ ಟೂರ್ನಿಯಲ್ಲಿ ಕೆವಿನ್‌, ರನ್ನರ್‌ ಅಪ್‌ ಆಗಿದ್ದರು.

ಕೆರ್ಬರ್‌ ಮೇಲೆ ಕಣ್ಣು: ಜರ್ಮನಿಯ ಆಟಗಾರ್ತಿ, ಹಾಲಿ ಚಾಂಪಿಯನ್‌ ಏಂಜಲಿಕ್‌ ಕೆರ್ಬರ್‌, ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಾರೆಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಅವರು ತತಜಾನ ಮರಿಯಾ ಎದುರು ಹೋರಾಡಲಿದ್ದಾರೆ.ಅಮೆರಿಕಾದ ಸೆರೆನಾ ವಿಲಿಯಮ್ಸ್‌ಗೆ ಗ್ಯಾಟ್ಟೊ ಮೊಂಟಿಕೋನ್‌ ಸವಾಲು ಎದುರಾಗಲಿದೆ.

ಪೆಟ್ರಾ ಕ್ವಿಟೋವಾ, ಒನ್ಸ್‌ ಜಬೆವುರ್‌ ಎದುರೂ; ಮರಿಯಾ ಶರಪೋವಾ, ಪೌಲಿನ್‌ ಪಾರ್ಮೆಂಟೀರ್‌ ಮೇಲೂ; ಗಾರ್ಬೈನ್‌ ಮುಗುರುಜಾ, ಬೀಟ್ರಿಜ್‌ ಹಡಾದ ವಿರುದ್ಧವೂ ಸೆಣಸಲಿದ್ದಾರೆ.ಕ್ಯಾರೋಲಿನಾ ಪ್ಲಿಸ್ಕೋವಾ, ಎಲಿನಾ ಸ್ವಿಟೋಲಿನಾ, ಮ್ಯಾಡಿಸನ್‌ ಕೀಸ್‌, ಸಿಮೊನಾ ಹಲೆಪ್‌, ನವೊಮಿ ಒಸಾಕ, ವಿಕ್ಟೋರಿಯಾ ಅಜರೆಂಕಾ, ಕ್ಯಾರೋಲಿನಾ ವೋಜ್ನಿಯಾಕಿ, ಜಾಂಗ್‌ ಶೂಯಿ ಮತ್ತು ಜೆಲೆನಾ ಒಸ್ತಾಪೆಂಕೊ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT