ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023 IND vs NZ: ಸೆಮಿಯಲ್ಲಿಯೂ ಭಾರತಕ್ಕೆ ವಿಜಯ ದೀಪ ಬೆಳಗುವ ಛಲ

ರೋಹಿತ್ ತವರಿನಂಗಳದಲ್ಲಿ ಆತಿಥೇಯರಿಗೆ ನ್ಯೂಜಿಲೆಂಡ್ ಸವಾಲು ನಾಳೆ: ವಿರಾಟ್, ರಾಹುಲ್ ಮೇಲೆ ಕಣ್ಣು
Published 13 ನವೆಂಬರ್ 2023, 15:34 IST
Last Updated 13 ನವೆಂಬರ್ 2023, 15:34 IST
ಅಕ್ಷರ ಗಾತ್ರ

ಮುಂಬೈ: ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೋಹಿತ್ ಶರ್ಮಾ ಅವರಿಗೆ ಅಗ್ನಿಪರೀಕ್ಷೆಯಾಗಿದೆ.

ಈ ಪಂದ್ಯದಲ್ಲಿ ರೋಹಿತ್ ನಾಯಕತ್ವದ ಬಳಗವು ನ್ಯೂಜಿಲೆಂಡ್ ಎದುರು ಆಡಲಿದೆ. 2019ರ ಸೆಮಿಫೈನಲ್‌ನಲ್ಲಿ ಕಿವೀಸ್ ಬಳಗದ ಎದುರು ಸೋತಿದ್ದ ಭಾರತ ತಂಡವು ಪ್ರಶಸ್ತಿ ಗೆಲುವಿನ ಅವಕಾಶ ಕಳೆದುಕೊಂಡಿತ್ತು.  ಆಗ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು.

ಈಗ ಆ ಸೋಲಿನ ಮುಯ್ಯಿ ತೀರಿಸಿಕೊಳ್ಳುವುದರ ಜೊತೆಗೆ 12 ವರ್ಷಗಳ ನಂತರ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಡುವ ಛಲ ಭಾರತ ತಂಡದಲ್ಲಿದೆ. ತಮ್ಮ ತವರೂರಿನ ಅಂಗಳದಲ್ಲಿ ಗೆಲುವಿನ ಸಂಭ್ರಮ ಆಚರಿಸುವ ಆತ್ಮವಿಶ್ವಾಸ 36 ವರ್ಷದ ಶರ್ಮಾಗೂ ಇದೆ.

ಟೂರ್ನಿಯ ಲೀಗ್ ಸುತ್ತಿನಲ್ಲಿ ಎಲ್ಲ ಒಂಬತ್ತು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಆತಿಥೇಯರು ಲಗ್ಗೆ ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಗುರಿ ಬೆನ್ನಟ್ಟಿದ್ದ ಸಂದರ್ಭದಲ್ಲಿ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ಪಂದ್ಯದಲ್ಲಿ ವಿರಾಟ್ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಜೊತೆಯಾಟದಿಂದಾಗಿ ತಂಡ ಗೆದ್ದಿತ್ತು.

ಅದರ ನಂತರದ ಎಲ್ಲ ಪಂದ್ಯಗಳಲ್ಲಿಯೂ ಅಧಿಕಾರಯುತ ಜಯ ಸಾಧಿಸಿದ ತಂಡವು ಎಲ್ಲ ವಿಭಾಗಗಳಲ್ಲಿಯೂ ಪರಿಪೂರ್ಣವಾಗಿದೆ. ಧರ್ಮಶಾಲಾದಲ್ಲಿ ಇದೇ ನ್ಯೂಜಿಲೆಂಡ್ ತಂಡವನ್ನೂ ಭಾರತವು ಮಣಿಸಿತ್ತು. 

ರೋಹಿತ್ ಮತ್ತು ಗಿಲ್ ಅಮೋಘ ಆರಂಭ ನೀಡುತ್ತಿದ್ದಾರೆ. ವಿರಾಟ್, ಶ್ರೇಯಸ್ ಮತ್ತು ಕೆ. ಎಲ್ . ರಾಹುಲ್ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.

ಬೌಲಿಂಗ್ ವಿಭಾಗವಂತೂ ಉತ್ತುಂಗ ಶಿಖರದಲ್ಲಿದೆ. ಬೂಮ್ರಾ, ಶಮಿ ಮತ್ತು ಸಿರಾಜ್ ಅವರ ಬಿರುಗಾಳಿಗೆ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅವರ ಸ್ಪಿನ್ ಮೋಡಿ ಜೋಡಿಯಾಗಿದೆ. ಈ ಬೌಲಿಂಗ್ ಪಡೆಯೇ ಎದುರಾಳಿಗಳಿಗೆ ಇರುವ ಪ್ರಮುಖ ಸವಾಲು.

ಆದರೆ ಶಾಂತಸ್ವಭಾವದ ಮತ್ತು ತಂತ್ರಗಾರಿಕೆಯ ನಿಪುಣ ನಾಯಕ ಕೇನ್ ವಿಲಿಯಮ್ಸನ್ ಕಿವೀಸ್ ಬಳಗದ ಪ್ರಮುಖ ಶಕ್ತಿಯಾಗಿದ್ದಾರೆ. 164 ಏಕದಿನ ಪಂದ್ಯಗಳನ್ನು ಆಡಿರುವ ಅನುಭವಿ ನಾಯಕ ಕೇನ್ ಈ ಬಾರಿ ವಿಶ್ವಕಪ್‌ನೊಂದಿಗೆ ಮರಳುವ ಛಲದಲ್ಲಿದ್ದಾರೆ. ಹೋದ ಸಲ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೂದಲೆಳೆ ಅಂತರದಲ್ಲಿ ಅವರ ಬಳಗ ಸೋತಿತ್ತು. ತಂಡದಲ್ಲಿರುವ ಬೆಂಗಳೂರು ಮೂಲದ ರಚಿನ್ ರವೀಂದ್ರ ಈಗಾಗಲೇ ಮೂರು ಶತಕ ಹೊಡೆದು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಡೆರಿಲ್ ಮಿಚೆಲ್, ಡೆವೊನ್ ಕಾನ್ವೆ ಮತ್ತು ಗ್ಲೆನ್ ಫಿಲಿಪ್ಸ್‌ ಅವರು ದೊಡ್ಡ ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಮರ್ಥರು.

ಬೌಲಿಂಗ್‌ನಲ್ಲಿ ಅನುಭವಿ ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಅಮೋಘ ಬೌಲಿಂಗ್ ಮಾಡುತ್ತಿರುವ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರು ಭಾರತದ ಬಲಿಷ್ಠ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲರು.

ಹೋದವಾರ ವಾಂಖೆಡೆಯಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.  ಆ ಪಂದ್ಯದಲ್ಲಿ ವಿರಾಟ್, ಶ್ರೇಯಸ್ ಮತ್ತು ಗಿಲ್ ಅರ್ಧಶತಕಗಳನ್ನು ದಾಖಲಿಸಿದ್ದರು. ಇಲ್ಲಿ ಪಿಚ್ ರನ್‌ಗಳಿಕೆಗೆ ಸಹಕಾರಿಯಾಗಿದೆ. ಆದರೂ ಆ ಪಂದ್ಯದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್ ಗಳಿಸಿ ಶ್ರೀಲಂಕಾಗೆ ಆಘಾತ ನೀಡಿದ್ದರು. ಕಿವೀಸ್ ಬಳಗವು ಈ ವಿಶ್ವಕಪ್‌ ಟೂರ್ನಿಯಲ್ಲಿ ಇದುವರೆಗೂ ಈ ಅಂಗಳದಲ್ಲಿ ಒಂದೂ ಪಂದ್ಯ ಆಡಿಲ್ಲ.

ಫೀಲ್ಡಿಂಗ್‌ನಲ್ಲಿ ಕಿವೀಸ್ ಬಳಗವು ಅತಿಥೇಯರಿಗಿಂತ ಸ್ವಲ್ಪ ಉತ್ತಮವಿದೆ.  ಕ್ಯಾಚ್ ಕೈಚೆಲ್ಲಿದರೆ, ರನ್‌ಔಟ್‌ಗಳ ಅವಕಾಶಗಳನ್ನು ಬಿಟ್ಟರೆ ದುಬಾರಿ ದಂಡ ತೆರಬೇಕಾಗಬಹುದು ಈ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಭಾರತವು ಈ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು.

ಸಚಿನ್ ತವರಿನಲ್ಲಿ ವಿರಾಟ್ 50ನೇ ಶತಕ ನಿರೀಕ್ಷೆ

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿರುವ 49 ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಈಚೆಗಷ್ಟೇ ಸರಿಗಟ್ಟಿದ್ದಾರೆ. ಇದೀಗ ಆ ದಾಖಲೆಯನ್ನು ಮೀರಿ ನಿಲ್ಲುವ ಛಲ್ಲದಲ್ಲಿದ್ದಾರೆ. ಸಚಿನ್ ಅವರ ತವರೂರಿನ ಅಂಗಳದಲ್ಲಿಯೇ ಈ ಸಾಧನೆ ಮಾಡುವ ನಿರೀಕ್ಷೆಯನ್ನು ವಿರಾಟ್ ಮೂಡಿಸಿದ್ದಾರೆ. ಒಂದೊಮ್ಮೆ ವಿರಾಟ್ ಯಶಸ್ವಿಯಾದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಮೊಟ್ಟಮೊದಲ ಬ್ಯಾಟರ್ ಆಗಲಿದ್ದಾರೆ. ಅಲ್ಲದೇ ಸಚಿನ್ ತವರಿನಲ್ಲಿ ಅವರ ಮುಂದೆಯೇ ಈ ಸಾಧನೆ ಮಾಡಿದ ವಿಶೇಷ ಗೌರವವೂ ಅವರದ್ದಾಗಲಿದೆ.

ರೋಹಿತ್ ಶರ್ಮಾ  ಮತ್ತು ವಿರಾಟ ಕೊಹ್ಲಿ
ರೋಹಿತ್ ಶರ್ಮಾ  ಮತ್ತು ವಿರಾಟ ಕೊಹ್ಲಿ
ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ
ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್
ರಚಿನ್ ರವೀಂದ್ರ
ರಚಿನ್ ರವೀಂದ್ರ
ಕೇನ್ ವಿಲಿಯಮ್ಸನ್ ಮತ್ತು ಟ್ರೆಂಟ್ ಬೌಲ್ಟ್
ಕೇನ್ ವಿಲಿಯಮ್ಸನ್ ಮತ್ತು ಟ್ರೆಂಟ್ ಬೌಲ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT