ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ರೋಹಿತ್ ಪಡೆಗೆ ‘ಮಿನಿ ಭಾರತ’ ಸವಾಲು, ಕನ್ನಡಿಗ ನಾಸ್ತುಷ್ ಮೇಲೆ ಚಿತ್ತ

ಭಾರತ–ಅಮೆರಿಕ ಹಣಾಹಣಿ ಇಂದು
Published 11 ಜೂನ್ 2024, 23:30 IST
Last Updated 11 ಜೂನ್ 2024, 23:30 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಭಾರತೀಯ ಅಭಿಮಾನಿಗಳಿಗೆ ಬುಧವಾರ ಹಬ್ಬವೋ ಹಬ್ಬ.  ನಾಸೌ ಕೌಂಟಿ ಕ್ರೀಡಾಂಗಣದಲ್ಲಿ ಭಾರತದ 17 ಕ್ರಿಕೆಟಿಗರು ಅಭಿಮಾನಿಗಳನ್ನು ಮನರಂಜಿಸಲು ಸಿದ್ಧರಾಗಿದ್ದಾರೆ. 

ಹೌದು; ಇಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ಅಮೆರಿಕ ತಂಡಗಳು ಮುಖಾಮುಖಿಯಾಗಲಿವೆ. ಆತಿಥೇಯ ತಂಡದಲ್ಲಿ ಆರು ಮಂದಿ ಭಾರತೀಯ ಆಟಗಾರರೇ ಇದ್ದಾರೆ. 

ಲಕ್ಷಗಟ್ಟಲೇ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಆದರೆ ಇದರಲ್ಲಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಗಿಟ್ಟಿಸುವವರು 11 ಮಂದಿ ಮಾತ್ರ. ಈ ಪ್ರಕ್ರಿಯೆಯಲ್ಲಿ ಅವಕಾಶವಂಚಿತರಾದವರು ಕ್ರಿಕೆಟಿಗರಾಗಿ ಬೆಳೆಯುವ ಛಲವನ್ನು ಬಿಟ್ಟಿಲ್ಲ. ಅಂತಹ ಪ್ರತಿಭಾವಂತರು ಬೇರೆ ಬೇರೆ ದೇಶಗಳ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅದರಲ್ಲಿ ಅಮೆರಿಕವೂ ಪ್ರಧಾನವಾದದ್ದು. ಅದರಿಂದಾಗಿ ಭಾರತ ಮತ್ತು ಮಿನಿಭಾರತ ತಂಡಗಳ ಹಣಾಹಣಿ ಎಂದೇ ಈ ಪಂದ್ಯ ಬಿಂಬಿತವಾಗಿದೆ. 

ಉಭಯ ತಂಡಗಳು ಎ ಗುಂಪಿನಲ್ಲಿ ತಲಾ 4 ಅಂಕಗಳೊಂದಿಗೆ ಮೊದಲೆರಡು ಸ್ಥಾನಗಳಲ್ಲಿವೆ. ತನಗಿಂತ ಬಲಿಷ್ಠ ಹಾಗೂ ಅನುಭವಿ ಪಾಕಿಸ್ತಾನ ತಂಡವನ್ನು ಹಣಿದಿರುವ ಹುಮ್ಮಸ್ಸಿನಲ್ಲಿರುವ ಅಮೆರಿಕ ತಂಡವು ರೋಹಿತ್ ಶರ್ಮಾ ಬಳಗಕ್ಕೆ ಕಠಿಣ ಸವಾಲೊಡ್ಡಲು ಸಿದ್ಧವಾಗಿದೆ.

ಭಾರತ ತಂಡವು ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತ್ತು. ಆದರೆ ಆ ಪಂದ್ಯದಲ್ಲಿ ಬ್ಯಾಟಿಂಗ್ ಪಡೆ ಪರದಾಡಿತ್ತು.  ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್ ಅವರು ಮಧ್ಯಮ ಕ್ರಮಾಂಕದಲ್ಲಿ ತುಂಬಿದ ಬಲದಿಂದಾಗಿ ತಂಡವು 119 ರನ್‌ ಗಳಿಸಲು ಸಾಧ್ಯವಾಗಿತ್ತು. ಪಂತ್ ವಿಕೆಟ್‌ಕೀಪಿಂಗ್‌ನಲ್ಲಿಯೂ ಅಮೋಘ ಆಟವಾಡಿದ್ದರು. 

ಆದರೆ ಅಮೆರಿಕದ ಪಿಚ್‌ಗಳಲ್ಲಿ ಏನು ಬೇಕಾದರೂ ಆಗಬಹುದು. ಅದರಿಂದಾಗಿ ಭಾರತ ತಂಡವು ಯಾವುದನ್ನೂ ಹಗುರವಾಗಿ ಪರಿಗಣಿಸುವಂತಿಲ್ಲ. ಅಮೆರಿಕ ತಂಡದ ಪ್ರತಿಭಾನ್ವಿತ ಆಟಗಾರರು ಯಾವುದೇ ಹಂತದಲ್ಲಿಯೂ ತಿರುಗೇಟು ನೀಡಬಲ್ಲರು ಎಂಬುದಕ್ಕೆ ಪಾಕಿಸ್ತಾನದ ಎದುರಿನ ಪಂದ್ಯವೇ ಸಾಕ್ಷಿಯಾಗಿತ್ತು. 

ಭಾರತ ತಂಡದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಉತ್ತಮ ಆರಂಭ ನೀಡುವ ಅವಶ್ಯಕತೆ ಇದೆ. ಸೂರ್ಯಕುಮಾರ್ ಯಾದವ್ ತಮ್ಮ ನೈಜ ಲಯಕ್ಕೆ ಮರಳಬೇಕಿದೆ. ಹಾರ್ದಿಕ್, ಶಿವಂ ದುಬೆ ಹಾಗೂ ಜಡೇಜ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ತಂಡಕ್ಕೆ ಅನುಕೂಲ. 

ಕಳೆದೆರಡೂ ಪಂದ್ಯಗಳನ್ನು ಭಾರತಕ್ಕೆ ಜಯಿಸಿಕೊಟ್ಟಿದ್ದು ಬೌಲರ್‌ಗಳು. ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್, ಅಕ್ಷರ್ ಪಟೇಲ್, ಆರ್ಷದೀಪ್ ಸಿಂಗ್  ಹಾಗೂ ಸಿರಾಜ್ ಅವರನ್ನು ಎದುರಿಸುವುದು ಅಮೆರಿಕ ತಂಡಕ್ಕೆ ಕಠಿಣ ಸವಾಲಾಗಬಹುದು. ಆತಿಥೇಯ ತಂಡದ ಸ್ಪಿನ್ನರ್, ಕನ್ನಡಿಗ ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರಾವಳ್ಕರ್ ಅವರೂ ಭಾರತದ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ.

ಮಳೆ ಸಾಧ್ಯತೆ?

ಬುಧವಾರ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮೂಲಗಳು ಹೇಳಿವೆ. 

ಮೂರು ದಿನಗಳ ಹಿಂದೆ ಇಲ್ಲಿಯೇ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ಸಂದರ್ಭದಲ್ಲಿಯೂ ಮಳೆಯಾಗಿತ್ತು. ಅದರಿಂದಾಗಿ ಪಂದ್ಯವು ಸುಮಾರು ಒಂದು ಗಂಟೆ ತಡವಾಗಿ ಆರಂಭವಾಗಿತ್ತು. 

ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ 
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ 
ಅಮೆರಿಕ ತಂಡದಲ್ಲಿರುವ ಕನ್ನಡಿಗ ನಾಸ್ತುಷ್ ಕೆಂಜಿಗೆ  –ಎಎಫ್‌ಪಿ ಚಿತ್ರ
ಅಮೆರಿಕ ತಂಡದಲ್ಲಿರುವ ಕನ್ನಡಿಗ ನಾಸ್ತುಷ್ ಕೆಂಜಿಗೆ  –ಎಎಫ್‌ಪಿ ಚಿತ್ರ
ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ 
ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್ 

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಹಾರ್ದಿಕ್ ಪಾಂಡ್ಯ ಯಶಸ್ವಿ ಜೈಸ್ವಾಲ್ ವಿರಾಟ್ ಕೊಹ್ಲಿ ಸೂರ್ಯಕುಮಾರ್ ಯಾದವ್ ರಿಷಭ್ ಪಂತ್ (ವಿಕೆಟ್‌ಕೀಪರ್) ಸಂಜು ಸ್ಯಾಮ್ಸನ್ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಯಜುವೇಂದ್ರ ಚಾಹಲ್ ಅರ್ಷದೀಪ್ ಸಿಂಗ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್. 

ಅಮೆರಿಕ: ಮೊನಾಂಕ್ ಪಟೇಲ್ (ನಾಯಕ) ಆ್ಯರನ್ ಜೋನ್ಸ್ ಆ್ಯಂಡ್ರಿಸ್ ಗೌಸ್ ಕೋರಿ ಆ್ಯಂಡರ್ಸನ್ ಅಲಿ ಖಾನ್ ಹರ್ಮೀತ್ ಸಿಂಗ್ ಜೆಸಿ ಸಿಂಗ್ ಮಿಲಿಂದ್ ಕುಮಾರ್ ನಿಸರ್ಗ್ ಪಟೇಲ್ ನಿತೀಶ್ ಕುಮಾರ್ ನಾಸ್ತುಷ್ ಕೆಂಜಿಗೆ ಸೌರಭ್ ನೇತ್ರಾವಳ್ಕರ್ ಶ್ಯಾಡ್ಲಿ ವ್ಯಾನ್ ಶಲೈವಕ್ ಸ್ಟೀವನ್ ಟೇಲರ್ ಶಯಾನ್ ಜಹಾಂಗಿರ್.  ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT