ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಜ್ವಾನ್ ವಿರುದ್ಧ ಜೈ ಶ್ರೀರಾಮ್ ಕೂಗಿದ ಅಭಿಮಾನಿಗಳು;ರಾಜಕೀಯ ತಿರುವು ಪಡೆದ ವಿವಾದ

Published 15 ಅಕ್ಟೋಬರ್ 2023, 13:07 IST
Last Updated 15 ಅಕ್ಟೋಬರ್ 2023, 13:07 IST
ಅಕ್ಷರ ಗಾತ್ರ

ಬೆಂಗಳೂರು: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ ವಿರುದ್ಧ ಅಭಿಮಾನಿಗಳು 'ಜೈ ಶ್ರೀರಾಮ್' ಘೋಷಣೆ ಕೂಗಿದ್ದಾರೆ. ಪ್ರಸ್ತುತ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಏಳು ವಿಕೆಟ್ ಅಂತರದ ಜಯ ಗಳಿಸಿತ್ತು. ಪಾಕ್ ಇನಿಂಗ್ಸ್ ವೇಳೆಯಲ್ಲಿ ಘಟನೆ ನಡೆದಿತ್ತು.

ಅತ್ಯುತ್ತಮವಾಗಿ ಆಡುತ್ತಿದ್ದ ರಿಜ್ವಾನ್ 49 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್‌ಗೆ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಗಳು 'ಜೈ ಶ್ರೀರಾಮ್' ಘೋಷಣೆ ಕೂಗಿದ್ದಾರೆ. ರಿಜ್ವಾನ್ ಸ್ಟೇಡಿಯಂ ಮೆಟ್ಟಿಲು ಹತ್ತುತ್ತಿದ್ದಂತೆಯೇ ಅಭಿಮಾನಿಗಳು ಜೋರಾಗಿ ಕಿರುಚಾಡಿದ್ದಾರೆ.

ಈ ಸಂಬಂಧ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಇದನ್ನು ಸಮರ್ಥಿಸಿಕೊಂಡಿರುವ ಕೆಲವು ಅಭಿಮಾನಿಗಳು, ಮೈದಾನದಲ್ಲಿ ಪಾಕ್ ಆಟಗಾರರು ನಮಾಜ್ ಮಾಡಬಹುದಾದರೆ, ಜೈಶ್ರೀರಾಮ್ ಘೋಷಣೆ ಏಕೆ ಕೂಗಬಾರದು ಎಂದು ಪ್ರಶ್ನಿಸಿದ್ದಾರೆ.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಸೋತಾಗ ಪಾಕ್ ಅಭಿಮಾನಿಗಳು ಭಾರತೀಯ ಆಟಗಾರರ ವಿರುದ್ಧ ಕೆಟ್ಟದಾಗಿ ವರ್ತಿಸಿದ್ದರು. ಇದಕ್ಕೀಗ ತಿರುಗೇಟು ನೀಡಲಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದೇ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದ ರಿಜ್ವಾನ್, ತಮ್ಮ ಶತಕವನ್ನು ಯುದ್ಧಪೀಡಿತ ಗಾಜಾದ ಜನರಿಗೆ ಅರ್ಪಿಸುವ ಮೂಲಕ ವಿವಾದಕ್ಕೊಳಗಾಗಿದ್ದರು.

ಉದಯನಿಧಿ ಸ್ಟಾಲಿನ್ ಖಂಡನೆ...

ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ಕೊಟ್ಟು ವಿವಾದಕ್ಕೆ ಒಳಗಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಭಾರತವು ತನ್ನ ಕ್ರೀಡಾಸ್ಫೂರ್ತಿ ಹಾಗೂ ಅತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ಆಟಗಾರರಿಗೆ ನೀಡಿದ ಅತಿಥ್ಯವು ಸ್ವೀಕಾರಾರ್ಹವಲ್ಲ. ಇದು ಅತ್ಯಂತ ಕೀಳುಮಟ್ಟದಲ್ಲಿತ್ತು. ಕ್ರೀಡೆಯು ದೇಶಗಳ ನಡುವೆ ಒಗ್ಗೂಡಿಸುವ ಚೈತನ್ಯವಾಗಬೇಕು. ನೈಜ ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು. ದ್ವೇಷವನ್ನು ಹರಡುವ ಸಾಧನವಾಗಿ ಬಳಕೆ ಮಾಡುತ್ತಿರುವುದು ಖಂಡನೀಯ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಬರ್‌ಗೂ ಕಹಿ ಅನುಭವ...

ಟಾಸ್ ವೇಳೆ ಪಾಕಿಸ್ತಾನ ನಾಯಕ ಬಾಬರ್ ಆಜಂ ಅವರ ವಿರುದ್ಧವೂ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಕಿರುಚಾಡಿದ್ದಾರೆ ಎಂಬ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಇದನ್ನು ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಖಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT