ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿ: 16ರ ಘಟ್ಟಕ್ಕೆ ಜಪಾನ್‌, ಸ್ಪೇನ್

Published 26 ಜುಲೈ 2023, 19:45 IST
Last Updated 26 ಜುಲೈ 2023, 19:45 IST
ಅಕ್ಷರ ಗಾತ್ರ

ಆಕ್ಲೆಂಡ್‌: ಪ್ರಶಸ್ತಿಗೆ ನೆಚ್ಚಿನ ತಂಡಗಳಾಗಿರುವ ಆಕ್ರಮಣಕಾರಿ ಸ್ಪೇನ್‌ ಮತ್ತು ಮಾಜಿ ಚಾಂಪಿಯನ್‌ ಜಪಾನ್‌, ವಿಶ್ವಕಪ್‌ ಮಹಿಳಾ ಫುಟ್‌ಬಾಲ್‌ ಟೂರ್ನಿಯ ಅಂತಿಮ 16ಕ್ಕೆ ಲಗ್ಗೆಯಿಟ್ಟವು. ಬುಧವಾರ ನಡೆದ ‘ಸಿ’ ಗುಂಪಿನ ಪಂದ್ಯಗಳಲ್ಲಿ ಈ ತಂಡಗಳು ಎದುರಾಳಿಗಳ ವಿರುದ್ಧ ಸುಲಭ ಜಯ ದಾಖಲಿಸಿದವು.

ಎರಡು ಬಾರಿಯ ಬ್ಯಾಲನ್ ಡಿಓರ್ ವಿಜೇತೆ ಅಲೆಕ್ಸಿಯಾ ಪುಟೆಲ್ಲಾಸ್ ಅವರು ಗೋಲು ಹೊಡೆಯದಿದ್ದರೂ ಸ್ಪೇನ್‌ ತಂಡದ ಪರ ಉತ್ತಮ ಪ್ರದರ್ಶನ ನೀಡಿ 5–0 ಗೋಲುಗಳಿಂದ ಜಾಂಬಿಯಾ ತಂಡವನ್ನು ಸೋಲಿಸಲು ನೆರವಾದರು.

ಜಪಾನ್‌ ಇದಕ್ಕೆ ಮೊದಲು 2–0 ಗೋಲುಗಳಿಂದ ಕೋಸ್ಟರಿಕಾ ಮೇಲೆ ಜಯಗಳಿಸಿ ನಾಕೌಟ್‌ ಹಂತದತ್ತ ಕಾಲಿಟ್ಟಿತ್ತು. ಆದರೆ ಸ್ಪೇನ್‌ನ ನಿರೀಕ್ಷಿತ ಗೆಲುವು ಅದರ ಪ್ರವೇಶವನ್ನು ಖಚಿತಪಡಿಸಿತು.

ಸೋಮವಾರ ಜಪಾನ್‌ ಮತ್ತು ಸ್ಪೇನ್‌ ತಂಡಗಳು ಮುಖಾಮುಖಿ ಆಗಲಿದ್ದು, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಯಾವುದೆಂದು ನಿರ್ಧಾರ ಆಗಲಿದೆ. ಎರಡೂ ತಂಡಗಳು ಆಡಿದ ಎರಡೂ ಪಂದ್ಯಗಳಲ್ಲಿ ಜಯಗಳಿಸಿದ್ದು ಆರು ಪಾಯಿಂಟ್ಸ್ ಸಂಗ್ರಹಿಸಿವೆ. ಕೋಸ್ಟರಿಕಾ ಮತ್ತು ಜಾಂಬಿಯಾ ತಂಡಗಳು ಎದುರಾಗಲಿದ್ದು, ಗುಂಪಿನಲ್ಲಿ ಕೊನೆಯ ಸ್ಥಾನ ತಪ್ಪಿಸಲು ಹೋರಾಡಲಿವೆ.

ಪುಟೆಲ್ಲಾಸ್, ಮಧ್ಯಂತರದ ವೇಳೆಗೆ ಮೈದಾನದಿಂದ ನಿರ್ಗಮಿಸಿದರೂ, ಅಷ್ಟರಲ್ಲಿ ಸ್ಪೇನ್ 2–0 ಮುಂದಿದ್ದು, ಜಾಂಬಿಯಾ ತಂಡ ಹಣ್ಣುಗಾಯಿ–ನೀರುಗಾಯಿ ಆಗಿತ್ತು. ಸ್ಪೇನ್‌ ಪರ ಟೆರೆಸಾ ಅಬೆಲಿಯಾರಾ (9ನೇ ನಿಮಿಷ), ಜೆನಿಫರೆ ಹೆರ್ಮೊಸೊ (13 ಮತ್ತು 70ನೇ) ಮತ್ತು ಅಲ್ಬಾ ರೆಡೊಂಡೊ (69 ಮತ್ತು 85ನೇ ನಿಮಿಷ) ಗೋಲುಗಳನ್ನು ಗಳಿಸಿದರು.

2011ರ ಚಾಂಪಿಯನ್‌ ಜಪಾನ್‌, ಹಲವು ಲೋಪಗಳನ್ನು ಎಸಗಿದ ಕೋಸ್ಟರಿಕಾ ತಂಡದ ಮೇಲೆ ಜಯಗಳಿಸಿತು. ಡ್ಯುನೆಡಿನ್‌ನಲ್ಲಿ ಪಂದ್ಯವನ್ನು ಸುಮಾರು 7,000 ಪ್ರೇಕ್ಷಕರು ವೀಕ್ಷಿಸಿದ್ದು, ಇದು ಈ ಟೂರ್ನಿಯಲ್ಲಿ ಇದುವರೆಗಿನ ಅತಿಕಡಿಮೆ ಪ್ರೇಕ್ಷಕರ ಸಂಖ್ಯೆ ಆಗಿದೆ. ಹಿಕಾರು ನಾವೊಮೊಟೊ ಮತ್ತು 19 ವರ್ಷದ ಅವೊಬಾ ಫುಜಿನೊ ಜಪಾನ್ ತಂಡದ ಗೋಲುಗಳನ್ನು ಗಳಿಸಿದರು.

ಗುರುವಾರ: ವೆಲಿಂಗ್ಟನ್‌ನಲ್ಲಿ ಗುರುವಾರ ಪ್ರಬಲ ಅಮೆರಿಕ ಮತ್ತು ನೆದರ್ಲೆಂಡ್ಸ್ ತಂಡಗಳು ಎದುರಾಗಲಿವೆ. 2019ರಲ್ಲಿ ಇವೆರಡು ತಂಡಗಳು ವಿಶ್ವಕಪ್‌ ಫೈನಲ್‌ನಲ್ಲಿ ಎದುರಾಗಿದ್ದು, ಆ ಬಾರಿ ಅಮೆರಿಕ 2–0 ಯಿಂದ ಜಯಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT