ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಆಟ ಸುಧಾರಿಸುತ್ತಲೇ ಇದೆ: ಎದುರಾಳಿ ತಂಡಗಳಿಗೆ ಕೇನ್ ವಿಲಿಯಮ್ಸನ್ ಎಚ್ಚರಿಕೆ

Published 16 ನವೆಂಬರ್ 2023, 3:30 IST
Last Updated 16 ನವೆಂಬರ್ 2023, 3:30 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್‌ ರನ್‌ ಮಷಿನ್‌ ಖ್ಯಾತಿಯ 'ವಿರಾಟ್‌ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟರ್‌' ಎಂದಿರುವ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌, 'ಅವರ ಆಟ ಇನ್ನಷ್ಟು ಸುಧಾರಿಸುತ್ತಲೇ ಇದೆ' ಎನ್ನುವ ಮೂಲಕ  ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 70 ರನ್‌ ಅಂತರದ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ತಂಡವನ್ನು 'ಬ್ಲೂ ಮಷಿನ್‌' (ನೀಲಿ ಯಂತ್ರ) ಎಂದಿರುವ ಕೇನ್‌, 'ಅದು ಉರುಳುತ್ತಲೇ ಇದೆ. ನಮ್ಮ ವಿರುದ್ಧವೂ ಚೆನ್ನಾಗಿ ಆಡಿದರು. ಈ ಗೆಲುವಿಗೆ ಭಾರತ ತಂಡ ಅರ್ಹವಾಗಿತ್ತು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಂದ್ಯದಲ್ಲಿ ವಿಶ್ವದಾಖಲೆಯ 50ನೇ ಶತಕ ಸಿಡಿಸಿದ ಕೊಹ್ಲಿ ಆಟವನ್ನು ಶ್ಲಾಘಿಸಿರುವ ಕೇನ್‌, 'ಅದೊಂದು ವಿಶೇಷ ಸಂಗತಿ. ನನ್ನ ಪ್ರಕಾರ ನೀವು 50 ಪಂದ್ಯ ಆಡಿದರೆ, ಅದೇ ದೊಡ್ಡ ಸಾಧನೆ ಎಂದು ಕೆಲವರು ಹೇಳುತ್ತಾರೆ. ಆದರೆ, 50 ಶತಕ ಸಿಡಿಸುವುದು ಸಾಮಾನ್ಯವಲ್ಲ. ವಾಸ್ತವವಾಗಿ ಕೊಹ್ಲಿ ಶತಕ ಗಳಿಸುವ ಹಾದಿಯಲ್ಲಿ ತಮ್ಮ ತಂಡಕ್ಕೆ ಗೆಲುವುಗಳನ್ನು ತಂದುಕೊಟ್ಟಿದ್ದಾರೆ' ಎಂದಿದ್ದಾರೆ.

'ನನ್ನ ಪ್ರಕಾರ ಅವರು ಅತ್ಯುತ್ತಮ ಆಟಗಾರ. ಅಲ್ಲವೇ? ಕೊಹ್ಲಿ ಆಟ ಸುಧಾರಣೆಗೊಳ್ಳುತ್ತಲೇ ಇರುವಂತೆ ತೋರುತ್ತಿದೆ. ಇದು ವಿಶ್ವದ ಇತರ ತಂಡಗಳಿಗೆ ಚಿಂತೆಯಾಗಿದೆ' ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ ಜಯ
ಮುಂಬೈನಲ್ಲಿ ಬುಧವಾರ (ನ.15) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ 397 ರನ್‌ ಕಲೆಹಾಕಿತ್ತು. ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ (47) ಮತ್ತು ಶುಭಮನ್‌ ಗಿಲ್‌ (ಅಜೇಯ 80) ಬಿರುಸಿನ ಬ್ಯಾಟಿಂಗ್‌ ಮೂಲಕ ಉತ್ತಮ ಆರಂಭ ಒದಗಿಸಿದರು. ಬಳಿಕ ಕೊಹ್ಲಿ (117) ಹಾಗೂ ಶ್ರೇಯಸ್‌ ಅಯ್ಯರ್‌ (105) ಶತಕ ಸಿಡಿಸಿ ತಂಡದ ಮೊತ್ತವನ್ನು 400ರ ಸನಿಹಕ್ಕೆ ಕೊಂಡೊಯ್ದರು.

ಈ ಬೃಹತ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, 48.5 ಓವರ್‌ಗಳಲ್ಲಿ 327 ರನ್‌ ಗಳಿಸಿ ಆಲೌಟ್‌ ಆಯಿತು. ಡೆರಿಲ್‌ ಮಿಚೆಲ್ (134) ಹಾಗೂ ವಿಲಿಯಮ್ಸನ್‌ (69) ಹೋರಾಟ ನಡೆಸಿದರೂ, ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ವೇಗಿ ಮೊಹಮ್ಮದ್‌ ಶಮಿ 57 ರನ್‌ ನೀಡಿ 7 ವಿಕೆಟ್‌ ಪಡೆಯುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು.

ಶಮಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಕೇನ್‌, 'ಅವರು ಅಸಾಧಾರಣ ಆಟಗಾರ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದಾರೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT