ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಂಗಳದಲ್ಲಿ ಅಂದು ಬಾಲ್ ಬಾಯ್; ಇಂದು ಆಟಗಾರ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ: `ತವರಿನ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯ ಆಡಬೇಕು ಎಂಬ ನನ್ನ ಹಲವು ವರ್ಷಗಳ ಕನಸು ನನಸಾಗಲು ಕಾಲ ಕೂಡಿ ಬಂದಿದೆ. ಈ ಅಂಗಳದಲ್ಲಿ ನಾನು ಒಮ್ಮೆ ಬಾಲ್ ಬಾಯ್ ಆಗಿದ್ದೆ. ಈಗ ಆಡಲು ಸಜ್ಜಾಗುತ್ತಿದ್ದೇನೆ. ಇದೊಂದು ಅಪೂರ್ವ ಕ್ಷಣ. ಜೊತೆಗೆ ಕೊಂಚ ಒತ್ತಡವೂ ಇದೆ~ ಎಂದು ಅಜಿಂಕ್ಯ ರಹಾನೆ ನುಡಿದರು.

ವಿಶೇಷವೆಂದರೆ ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಮುಂಬೈನ ಏಕೈಕ ಆಟಗಾರ ರಹಾನೆ. 23 ವರ್ಷ ವಯಸ್ಸಿನ ಈ ಆಟಗಾರ ಇಂಗ್ಲೆಂಡ್ ಪ್ರವಾಸ ಹಾಗೂ ಈಗ ಸ್ವದೇಶದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿ ಭರವಸೆ ಮೂಡಿಸಿದ್ದಾರೆ.

ರಹಾನೆ 11 ವರ್ಷಗಳ ಹಿಂದೆ ಈ ಕ್ರೀಡಾಂಗಣದಲ್ಲಿ `ಬಾಲ್ ಬಾಯ್~ ಆಗಿದ್ದರು. ಅವರೀಗ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮುಂಬೈನ 68ನೇ ಆಟಗಾರ ಕೂಡ. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ 91 ರನ್ ಗಳಿಸಿ `ಪಂದ್ಯ ಶ್ರೇಷ್ಠ~ ಗೌರವಕ್ಕೆ ಭಾಜನರಾಗಿದ್ದರು.

ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯಕ್ಕೆ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ಅಭ್ಯಾಸ ನಡೆಸಿದ ಬಳಿಕ ರಹಾನೆ ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.

ತವರಿನ ಪಿಚ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಿದು. ನಿಮ್ಮ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ?

ಇದೊಂದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಭಾರತ ಇದೇ ಕ್ರೀಡಾಂಗಣದಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಗಿದೆ. ಹಾಗಾಗಿ ನನ್ನ ಮೇಲೆ ಮಾತ್ರವಲ್ಲ; ಪ್ರತಿಯೊಬ್ಬ ಆಟಗಾರನಿಂದಲೂ ಅಭಿಮಾನಿಗಳು ಉತ್ತಮ ಆಟದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ನಾನು ವಿಶ್ವ ಚಾಂಪಿಯನ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದು ಮತ್ತೊಂದು ಖುಷಿಯ ವಿಚಾರ.

ಭಾರತ 3-0ರಲ್ಲಿ ಸರಣಿ ಗೆದ್ದಾಗಿದೆ. ಹಾಗಾಗಿ ಈ ಪಂದ್ಯ ಮಹತ್ವ ಕಳೆದುಕೊಂಡಿದೆಯೇ?

ಪ್ರತಿ ಅಂತರರಾಷ್ಟ್ರೀಯ ಪಂದ್ಯಕ್ಕೂ ತನ್ನದೇ ಆದ ಮಹತ್ವವಿದೆ. ಸರಣಿ ಗೆದ್ದ ಮಾತ್ರಕ್ಕೆ ಉಳಿದ ಪಂದ್ಯಗಳು ಅರ್ಥ ಕಳೆದುಕೊಳ್ಳುತ್ತವೆ ಎಂಬ ಮಾತಿಗೇ ಅರ್ಥವಿಲ್ಲ. ಸರಣಿ ಗೆದ್ದಿರುವುದನ್ನು ಸಮರ್ಥಿಸಿಕೊಳ್ಳಲು ಈ ಪಂದ್ಯ ನಮ್ಮ ಪಾಲಿಗೆ ಅತೀ ಮಹತ್ವದ್ದಾಗಿದೆ.

5-0ರಲ್ಲಿ ಸರಣಿ ಗೆಲ್ಲಲು ತಂಡ ಎದುರು ನೋಡುತ್ತಿದೆಯೇ?

ಆ ಬಗ್ಗೆ ನಾವು ಇನ್ನೂ ಚಿಂತಿಸಿಲ್ಲ. ಈಗ ನಮ್ಮ ಚಿತ್ತ ಏನಿದ್ದರೂ ಭಾನುವಾರದ ಪಂದ್ಯದತ್ತ ಮಾತ್ರ. ಬಳಿಕ ಕೊನೆಯ ಪಂದ್ಯದ ಬಗ್ಗೆ ಯೋಚಿಸುತ್ತೇವೆ.

ಮೊಹಾಲಿ ಪಂದ್ಯದಲ್ಲಿ ಶತಕ ತಪ್ಪಿಸಿಕೊಂಡಿದ್ದೀರಾ. ಆ ಬಗ್ಗೆ ನಿರಾಶೆಯಾಯಿತೇ?

ಹೌದು, ನನಗೆ ತುಂಬಾ ನಿರಾಶೆಯಾಯಿತು. ಆದರೆ ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಹಾಗಾಗಿ ಆ ನಿರಾಶೆ ತುಂಬಾ ಹೊತ್ತು ಉಳಿಯಲಿಲ್ಲ.

ಸಚಿನ್, ಸೆಹ್ವಾಗ್ ತಂಡಕ್ಕೆ ಹಿಂತಿರುಗಿದಾಗ ಸ್ಥಾನ ಕಳೆದುಕೊಳ್ಳುವ ಆತಂಕವಿದೆಯೇ?

ಸಚಿನ್, ವೀರೂ ಶ್ರೇಷ್ಠ ಆಟಗಾರರು. ಆದರೆ ನಾನು ತಂಡದಲ್ಲಿರುವ ವಿಚಾರ ಆಯ್ಕೆದಾರರಿಗೆ ಬಿಟ್ಟಿದ್ದು. ಸ್ಥಾನ ಸಿಕ್ಕಿದಾಗ ಉತ್ತಮ ಪ್ರದರ್ಶನ ನೀಡುವುದು ನನ್ನ ಕೆಲಸ ಅಷ್ಟೆ.

ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ನೀವು ವಿಫಲವಾಗಿದ್ದೀರಿ. ಈ ಬಗ್ಗೆ?

ಆ ಪಂದ್ಯಗಳಲ್ಲಿ ಕೆಲ ಎಡವಟ್ಟು ಮಾಡಿಕೊಂಡೆ. ಅದು ನನ್ನಲ್ಲಿ ನಿರಾಶೆ ಉಂಟು ಮಾಡಿದ್ದು ನಿಜ. ಆದರೆ ಆ ತಪ್ಪುಗಳನ್ನು ಮತ್ತೆ ಮಾಡಬಾರದು ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿದ್ದೆ. ಬಳಿಕದ ಪಂದ್ಯದಲ್ಲಿ 91 ರನ್ ಗಳಿಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ತಂಡ ಪೂರ್ಣ ವೈಫಲ್ಯ ಅನುಭವಿಸಿತ್ತು. ಆದರೆ ಇಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ. ತಂಡದಲ್ಲಿ ಆಗಿರುವ ವ್ಯತ್ಯಾಸವೇನು?

ಕೆಲ ಆಟಗಾರರು ಈಗ ತಂಡದಲ್ಲಿ ಇಲ್ಲ ಅಷ್ಟೇ. ಡ್ರೆಸ್ಸಿಂಗ್ ಕೊಠಡಿಯ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರತಿಯೊಬ್ಬರ ಯಶಸ್ಸನ್ನು ನಾವು ಪರಸ್ಪರ ಆನಂದಿಸುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT