ಮಂಗಳವಾರ, ಸೆಪ್ಟೆಂಬರ್ 28, 2021
24 °C
ಮಳೆ ನೀರು ಇಂಗಿಸಲು ತೋಟಗಾರಿಕೆ ಇಲಾಖೆ ಕ್ರಮ

ಕಬ್ಬನ್‌ ಉದ್ಯಾನದಲ್ಲಿ 65 ಇಂಗು ಬಾವಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿರುವ ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿ ಯಶಸ್ಸು ಕಂಡಿರುವ ತೋಟಗಾರಿಕೆ ಇಲಾಖೆ ಈ ಬಾವಿಗಳ ನೀರಿನ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 65 ಕಡೆ ಇಂಗುಬಾವಿಗಳನ್ನು ನಿರ್ಮಿಸುತ್ತಿದೆ.

ನಿರುಪಯುಕ್ತವಾಗಿದ್ದ ಏಳು ಬಾವಿಗಳನ್ನು ಇಲಾಖೆ ಎರಡು ವರ್ಷಗಳ ಹಿಂದೆ ಪುನಶ್ಚೇತನಗೊಳಿಸಿತ್ತು. ಈ ಬಾರಿ ಉದ್ಯಾನದಲ್ಲಿ ಅಲ್ಲಲ್ಲಿ 13ರಿಂದ 16 ಅಡಿಗಳಷ್ಟು ಆಳದ ಇಂಗುಬಾವಿಗಳನ್ನು ನಿರ್ಮಿಸಲಾಗುತ್ತದೆ.

ಬಾವಿಗಳಿಗೆ ನೀರುಪೊಟರೆಗಳ (ಅಕ್ವಿಫರ್‌) ಮೂಲಕವೂ ನೀರು ಪೂರೈಕೆಯಾಗುತ್ತದೆ. ಇಂಗು ಬಾವಿಗಳು ಮಳೆ ನೀರನ್ನು ಭೂಮಿಯೊಳಗೆ ಇಳಿಸುವ ಮೂಲಕ ನೀರುಪೊಟರೆಗಳ ಒರತೆಯನ್ನು ಹೆಚ್ಚಿಸುತ್ತವೆ. ಪರೋಕ್ಷವಾಗಿ ಇವು ಬಾವಿಗಳ ನೀರಿನ ಪ್ರಮಾಣ ಹೆಚ್ಚಲು ನೆರವಾಗಲಿವೆ.

ಇಂಡಿಯಾ ಕೇರ್ಸ್‌ ಫೌಂಡೇಷನ್‌ ವತಿಯಿಂದ ನೀರಿನ ಸುಸ್ಥಿರತೆಗಾಗಿ ಮತ್ತು ಜಲಭದ್ರತೆಗಾಗಿ ನಗರದಲ್ಲಿ ಹಮ್ಮಿಕೊಂಡಿರುವ ‘ಮಿಲಿಯನ್‌ ವೆಲ್ಸ್‌’ ಅಭಿಯಾನದಡಿ ಈ ಕಾರ್ಯಕ್ಕೆ ನೆರವು ಒದಗಿಸಲಾಗುತ್ತಿದೆ. 

‘ಉದ್ಯಾನದಲ್ಲಿ ನೀರಿನ ನಿರ್ವಹಣೆ ವ್ಯವಸ್ಥೆ ಸಮರ್ಪಕವಾಗಿಲ್ಲ. ತೋಟಗಾರಿಕೆ ಇಲಾಖೆಯು ಉದ್ಯಾನದ ಮರಗಳಿಗೆ ನೀರುಣಿಸಲು ಶುದ್ಧೀಕರಣಗೊಂಡ ನೀರನ್ನು ಬಳಸುತ್ತಿದೆ. ದಿನವೊಂದಕ್ಕೆ 1.5 ಎಂಎಲ್‌ಡಿಯಷ್ಟು ನೀರು ಪೂರೈಸಿದರೂ ಉದ್ಯಾನಕ್ಕೆ ಸಾಲುತ್ತಿಲ್ಲ. ಈ ಕೊರತೆ ನೀಗಿಸಲು ಇಂಗು ಬಾವಿಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದು ಈ ಅಭಿಯಾನದ ಭಾಗವಾಗಿರುವ ಬಯೋಮ್‌ ಎನ್‌ವಿರಾನ್‌ಮೆಂಟಲ್‌ ಟ್ರಸ್ಟ್‌ನ ಮುಖ್ಯಸ್ಥೆ ಶುಭಾ ರಾಮಚಂದ್ರನ್‌ ಹೇಳಿದರು.

ಫ್ರೆಂಡ್ಸ್‌ ಆಫ್‌ ಲೇಕ್ಸ್‌ ಸಂಸ್ಥೆಯ ಸಹಯೋಗದಲ್ಲಿ ಬಯೋಮ್‌ ಟ್ರಸ್ಟ್‌ ನಗರದ ಬಾವಿಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿದೆ. 

‘ಈ ಇಂಗು ಬಾವಿಗಳು ಭವಿಷ್ಯದಲ್ಲಿ ದಿನವೊಂದಕ್ಕೆ ಸರಾಸರಿ 80,000 ಲೀಟರ್‌ ನೀರು ಸಂಗ್ರಹಿಸಲಿವೆ.  ಉದ್ಯಾನದ ನೀರಿನ ಬೇಡಿಕೆಯನ್ನು ಈಡೇರಿಸಲಿವೆ’ ಎಂದು ಜಲತಜ್ಞರೊಬ್ಬರು ಅಭಿಪ್ರಾಯಪಟ್ಟರು.

ಕೊಳಗಳ ಅಭಿವೃದ್ಧಿ: ಕರಗದ ಕುಂಟೆ, ತಾವರೆ ಕೊಳ ಹಾಗೂ ಒಡೆಯರ್‌ ಪ್ರತಿಮೆ ಹಿಂಭಾಗದ ಕೊಳಗಳು ಕಬ್ಬನ್‌ ಉದ್ಯಾನದಲ್ಲಿವೆ. ಈ ಮೂರು ಕೊಳಗಳ ಹೂಳು ತೆಗೆದು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಉದ್ಯಾನದಲ್ಲಿ ಹೊಸದಾಗಿ ನಿರ್ಮಿಸಿರುವ ನಡಿಗೆ ಪಥಗಳು ಮಳೆ ನೀರಿನ ಹರಿವಿಗೆ ಅಡ್ಡಿಯಾಗಿವೆ. ಹಾಗಾಗಿ ಅವುಗಳ ವಿನ್ಯಾಸವನ್ನು ಬದಲಿಸಲು ಇಲಾಖೆ ನಿರ್ಧರಿಸಿದೆ.  

 **

ಲಾಲ್‌ಬಾಗ್‌ನಲ್ಲೂ ಮಳೆಗಾಲಕ್ಕೆ ತಯಾರಿ

ಮಳೆಗಾಲದಲ್ಲಿ ಜಯನಗರ ಹಾಗೂ ಅಶೋಕ ಪಿಲ್ಲರ್‌ ಕಡೆಯಿಂದ ನೀರು ಲಾಲ್‌ಬಾಗ್‌ ಕೆರೆಗೆ ಹರಿದು ಬರುತ್ತದೆ. ಈ ಮಳೆನೀರಿನ ಜೊತೆ ಬರುವ ಕಸ ಕಶ್ಮಲಗಳನ್ನು ಸೋಸುವುದಕ್ಕೆ ‘ಪರದೆ ಶೋಧಕ’ ಅಳವಡಿಸಲು ತೋಟಗಾರಿಕಾ ಇಲಾಖೆ ತಯಾರಿ ನಡೆಸಿದೆ.

ಪರದೆ ಶೋಧಕವು ನೀರನ್ನು ಮಾತ್ರ ಒಳಬಿಟ್ಟು, ತ್ಯಾಜ್ಯವನ್ನು ತಡೆಯುತ್ತದೆ. ಉದ್ಯಾನದ ಸಿಬ್ಬಂದಿ ತ್ಯಾಜ್ಯವನ್ನು ತೆರವುಗೊಳಿಸಲಿದ್ದಾರೆ. 

ಮಳೆ ನೀರಿಗಾಗಿ ಕಾಲುವೆ: ಮಳೆ ಬಂದಾಗ ನೀರು ಎಲ್ಲೆಂದರಲ್ಲಿ ಹರಿದು ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪ್ರತ್ಯೇಕ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಆ ನೀರನ್ನೇ ಸಂಗ್ರಹಿಸಿ ತೋಟದ ಗಿಡ–ಮರಗಳಿಗೆ ಉಣಿಸಲು ಬಳಸಿಕೊಳ್ಳಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.