ವರ್ಷಾನುಗಟ್ಟಲೆ ಕಡತ ವಿಲೇವಾರಿ ಮಾಡದ ಎಆರ್‌ಒ ಅಮಾನತು

ಶನಿವಾರ, ಮೇ 25, 2019
32 °C

ವರ್ಷಾನುಗಟ್ಟಲೆ ಕಡತ ವಿಲೇವಾರಿ ಮಾಡದ ಎಆರ್‌ಒ ಅಮಾನತು

Published:
Updated:

ಬೆಂಗಳೂರು: ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ಕಡತಗಳನ್ನು ಅಧಿಕಾರಿಯು ‘ಸಕಾಲ’ ಯೋಜನೆ ಪ್ರಕಾರ 30 ದಿನಗಳ ಒಳಗೆ ವಿಲೇವಾರಿ ಮಾಡಬೇಕು. ಆದರೆ, ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿಯೊಬ್ಬರು ವರ್ಷಾನುಗಟ್ಟಲೆ ಕಡತವನ್ನು ತಮ್ಮ ಬಳಿ ಇರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಡತಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡದ ಕಾರಣಕ್ಕಾಗಿ ಬೊಮ್ಮನಹಳ್ಳಿ ವಲಯದ ಅರಕೆರೆ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ರವಿಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ.

ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ವೇಳೆ ರವಿ ಕುಮಾರ್‌ ಅವರು 494 ಕಡತಗಳನ್ನು 2018ರಿಂದಲೂ ಬಾಕಿ ಇರಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಪೈಕಿ 477 ಕಡತಗಳು ಖಾತಾ ವರ್ಗಾವಣೆಗೆ ಸಂಬಂಧಿಸಿದವು. ಇನ್ನುಳಿದ ಒಂಬತ್ತು ಕಡತಗಳು ಖಾತಾ ನೋಂದಣಿಗೆ, ಏಳು ಕಡತಗಳು ಖಾತಾ ವಿಭಜನೆಗೆ ಹಾಗೂ ಒಂದು ಕಡತ ಖಾತಾ ಜೋಡಣೆ ಕುರಿತಾದವು. ಕಡತ ವಿಲೇವಾರಿ ಮಾಡಲು ಲಂಚ ಕೇಳುತ್ತಾರೆ ಎಂಬ ಆರೋಪ ರವಿಕುಮಾರ್‌ ಮೇಲಿದೆ.

‘ಎಆರ್‌ಒ ರವಿಕುಮಾರ್‌ ಸಕಾಲದಲ್ಲಿ ಕಡತಗಳನ್ನು ಮಾಡದ ಬಗ್ಗೆ ದೂರು ಬಂದಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಸಾಬೀತಾಗಿದೆ. ಹಾಗಾಗಿ ಅವರನ್ನು ಅಮಾನತು ಮಾಡಲು ಕ್ರಮಕೈಗೊಂಡಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !