ಭಾನುವಾರ, ಸೆಪ್ಟೆಂಬರ್ 19, 2021
23 °C
ಲೆಕ್ಕಕ್ಕೆ 2,580 ಆಟೊ ಟಿಪ್ಪರ್‌– ಕಸ ಸಂಗ್ರಹಿಸುವುದು 1,273 ಮಾತ್ರ

ಶೇ 50ರಷ್ಟು ಟಿಪ್ಪರ್‌ಗಳೇ ನಾಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳ ಪೈಕಿ ಶೇ 50ರಷ್ಟು ಟಿಪ್ಪರ್‌ಗಳು ನಿತ್ಯ ಕಾರ್ಯನಿರ್ವಹಿಸುತ್ತಲೇ ಇಲ್ಲ.

ನಗರದಲ್ಲಿ ಕಾರ್ಯನಿರ್ವಹಿಸಬೇಕಿದ್ದ 2,580 ಆಟೊ ಟಿಪ್ಪರ್‌ಗಳಲ್ಲಿ ಕಸ ಸಂಗ್ರಹಿಸಲು ಬಳಕೆಯಾಗುತ್ತಿರುವುದು 1,273 ಮಾತ್ರ ಎಂದು ಪಾಲಿಕೆಯ ಇತ್ತೀಚಿನ ವಾಹನ ಹಾಜರಾತಿ ದಾಖಲೆಗಳು ಬಹಿರಂಗಪಡಿಸಿವೆ. ಆಟೊ ಟಿಪ್ಪರ್‌ ನೋಂದಣಿ ವ್ಯವಸ್ಥೆ (ಎಟಿಆರ್‌) ಹಾಗೂ ಟಿಪ್ಪರ್‌ ತಂತ್ರಾಂಶ ಬಳಕೆಯನ್ನು ಪಾಲಿಕೆ ಮೇ 1ರಿಂದ ಜಾರಿಗೊಳಿಸಿತ್ತು. ಬಳಿಕ ಈ ಆಘಾತಕರ ಅಂಶ ಬೆಳಕಿಗೆ ಬಂದಿದೆ.

ವಾರ್ಡ್‌ ಮಟ್ಟದ 27 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು (ಎಇಇ) ನೋಂದಾಯಿತ ಟಿಪ್ಪರ್‌ಗಳ ಕಾರ್ಯಚಟುವಟಿಕೆಯನ್ನು ಈ ತಂತ್ರಾಂಶದಲ್ಲಿ ದಾಖಲಿಸಬೇಕು. ಈ ಪೈಕಿ ಶೇ 50ರಷ್ಟು ಟಿಪ್ಪರ್‌ಗಳು ಮಾತ್ರ ರೇಡಿಯೊ ಫ್ರೀಕ್ವೆನ್ಸಿ ಪತ್ತೆ ಸಾಧನ (ಆರ್‌ಎಫ್‌ಐಡಿ) ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸಿವೆ.

‘ಟಿಪ್ಪರ್‌ಗಳಿಂದ ಎರಡು ಹಂತಗಳಲ್ಲಿ ಹಾಜರಾತಿ ದಾಖಲೆಗಳನ್ನು ಪಡೆಯಲಾಗುತ್ತದೆ. ಅವುಗಳು, ಬೆಳಿಗ್ಗೆ ಕಸ ಸಂಗ್ರಹ ಆರಂಭಿಸಿದಾಗ ಒಮ್ಮೆ ಹಾಗೂ ಕಸವನ್ನು ಕಾಂಪ್ಯಾಕ್ಟರ್‌ಗಳಿಗೆ ವರ್ಗಾವಣೆ ಮಾಡಿದ ಬಳಿಕ ಮತ್ತೊಮ್ಮೆ ಹಾಜರಾತಿಯನ್ನು ದಾಖಲಿಸಬೇಕು. ಒಟ್ಟು 1,307 ಟಿಪ್ಪರ್‌ಗಳು ಹಾಜರಾತಿ ದಾಖಲಿಸಿಲ್ಲ.ಕೆಲವು ವಾರ್ಡ್‌ಗಳಲ್ಲಿ ಟಿಪ್ಪರ್‌ಗಳು ಒಮ್ಮೆಯೂ ಹಾಜರಾತಿ ದಾಖಲಿಸಿಲ್ಲ. ಇದು ನಮಗೆಲ್ಲ ನಾಚಿಕೆಗೇಡಿನ ಸಂಗತಿ. ಈ ಟಿಪ್ಪರ್‌ಗಳ ಪಾವತಿಯನ್ನು ಪಾಲಿಕೆ ತಡೆಹಿಡಿಯಬಹುದು. ಆದರೆ, ಅವು ಕಸ ಸಂಗ್ರಹಿಸಬೇಕಾದ ಪ್ರದೇಶದ ಸ್ವಚ್ಛತೆ ಕಾಪಾಡುವವರು ಯಾರು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಒಬ್ಬರು ಪ್ರಶ್ನಿಸಿದರು.

‘ಆರಂಭದಲ್ಲಿ ಪಾಲಿಕೆ ದಾಖಲೆಗಳಲ್ಲಿ ನೋಂದಣಿ ಮಾಡಿಸಿದ್ದ ಟಿಪ್ಪರ್‌ಗಳೆಲ್ಲವೂ ನಕಲಿ. ಆ ಬಳಿಕ ಹೊಸತಾಗಿ ಟಿಪ್ಪರ್‌ಗಳ ದಾಖಲೆ ಅಪ್‌ಲೋಡ್‌ ಮಾಡುವಂತೆ ಸೂಚನೆ ನೀಡಿದ್ದೆವು. ಆ ಬಳಿಕ 2,580 ಟಿಪ್ಪರ್‌ಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಮೊದಲೇ ಅಗತ್ಯವಿರುವಷ್ಟು ಟಿಪ್ಪರ್‌ಗಳು ನಗರದಲ್ಲಿಲ್ಲ. ಅವುಗಳಲ್ಲೂ ಅರ್ಧದಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಪರಿಸ್ಥಿತಿ ಹೀಗಿದ್ದರೆ ನಗರ ಸ್ವಚ್ಛವಾಗಿರುವುದಾದರೂ ಹೇಗೆ. ನಾವು ಇವುಗಳಿಗೆ ಪ್ರತಿ ತಿಂಗಳು ₹ 57 ಸಾವಿರ ಪಾವತಿಸುತ್ತಿದ್ದೇವೆ’ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ದಾಖಲೆಗಳಲ್ಲಿ ನೋಂದಣಿಯಾಗಿದ್ದ 139 ಕಾಂಪ್ಯಾಕ್ಟರ್‌ಗಳು ಹಾಗೂ 1300ಕ್ಕೂ ಅಧಿಕ ಆಟೊಟಿಪ್ಪರ್‌ಗಳು ನಕಲಿ ಎಂಬುದು ಬೆಳಕಿಗೆ ಬಂದ ಬಳಿಕ ಪಾಲಿಕೆಯು ಟಿಪ್ಪರ್‌ಗಳ ಆನ್‌ಲೈನ್‌ ಹಾಜರಾತಿ ಪಡೆಯಲು ಮುಂದಾಗಿತ್ತು. ಅಸಲಿ ನೋಂದಣಿ ಸಂಖ್ಯೆಯನ್ನು ಹೊಂದಿರುವ ಟಿಪ್ಪರ್‌ಗಳಿಗೆ ಮಾತ್ರ ಹಣ ಪಾವತಿ ಮಾಡುವುದಾಗಿ ಪಾಲಿಕೆ ಅಧಿಕಾರಿಗಳು ಹೇಳಿಕೊಳ್ಳುತ್ತಾರೆ. ಆದರೆ, ಈಗ ನೋಂದಣಿ ಆಗಿರುವ ಟಿಪ್ಪರ್‌ಗಳೂ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಜಾಹೀರಾಗಿದೆ.

ಕಸ ಸಂಗ್ರಹಿಸಲು ಬೇಕಿವೆ 4,466 ಟಿಪ್ಪರ್‌

ಘನತ್ಯಾಜ್ಯ ನಿರ್ವಹಣೆ ನಿಯಮ 2016ರ ವಾರ್ಡ್‌ಮಟ್ಟದ ಯೋಜನೆ ಪ್ರಕಾರ ಪ್ರತಿ 750 ಮನೆಗೆ ಒಂದು ಆಟೊಟಿಪ್ಪರ್‌ಗಳನ್ನು ಒದಗಿಸಲಾಗಿದೆ. ಈ ಪ್ರಕಾರ ನಗರಕ್ಕೆ ಒಟ್ಟು 4,466 ಟಿಪ್ಪರ್‌ಗಳ ಅಗತ್ಯವಿದೆ. ಹೆಚ್ಚೂ ಕಡಿಮೆ, ಇದರ ಕಾಲು ಭಾಗದಷ್ಟು (1,273) ಟಿಪ್ಪರ್‌ಗಳು ಮಾತ್ರ ಕಸ ಸಂಗ್ರಹಣೆಗೆ ಲಭ್ಯವಾದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು