ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಕ್ಷೇತ್ರಗಳಿಗೇ ಕಸದ ಹಣ!

ಪಾಲಿಕೆ ಹೊರಕ್ಕೂ ‘ನವ ಬೆಂಗಳೂರು ಯೋಜನೆ’ ಅನುದಾನ
Last Updated 3 ಫೆಬ್ರುವರಿ 2019, 2:40 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಮುಖ್ಯಮಂತ್ರಿಗಳ ನವ ಬೆಂಗಳೂರು’ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲದ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೂ ಭರ‍ಪೂರ ಅನುದಾನ ನೀಡಲಾಗಿದೆ. ಕಸದ ₹150 ಕೋಟಿ ಹಣವನ್ನು (ಘನತ್ಯಾಜ್ಯ ವಿಲೇವಾರಿ) ನಗರದಾಚೆಯ ಐದು ಕ್ಷೇತ್ರಗಳಿಗೆ ಹಂಚಲಾಗಿದೆ.

2018–19ನೇ ಸಾಲಿನ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ₹2,500 ಕೋಟಿ ನೀಡಲಾಗಿತ್ತು. ಇದಕ್ಕೆ ಹೆಚ್ಚುವರಿಯಾಗಿ ₹5,513 ಕೋಟಿ ಸೇರಿಸಿ ‘ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ’ ಎಂಬ ಹೆಸರು ಇಡಲಾಗಿದೆ. ಈ ಮೊತ್ತವನ್ನು ವೈಟ್‌ಟಾಪಿಂಗ್‌, ರಸ್ತೆಗಳ ಅಭಿವೃದ್ಧಿ, ರಾಜಕಾಲುವೆಗಳ ಅಭಿವೃದ್ಧಿ, ಕಸ ನಿರ್ವಹಣೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸಲು ಉದ್ದೇಶಿಸಲಾಗಿದೆ.

ಈ ಯೋಜನೆಗೆ ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಮತ್ತೆ ಈ ಯೋಜನೆಯನ್ನು ಪರಿಷ್ಕರಣೆ ಮಾಡಿ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಈ ವೇಳೆಗೆ, ಕೆಲವು ಯೋಜನೆಗಳಿಗೆ ಅನುದಾನ ಕತ್ತರಿ ಪ್ರಯೋಗ ಮಾಡಲಾಗಿತ್ತು. ಹಲವು ಹೊಸ ಯೋಜನೆಗಳು ಪ್ರತ್ಯಕ್ಷವಾಗಿದ್ದವು. ಅದರಲ್ಲಿ ಜೆಡಿಎಸ್‌ ಕ್ಷೇತ್ರಗಳ ಅನುದಾನವೂ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಆರಂಭದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ₹643 ಕೋಟಿ ಮೀಸಲಿಡಲಾಗಿತ್ತು. ಪರಿಷ್ಕೃತ ಯೋಜನೆಯಲ್ಲಿ ಅನುದಾನ ಪ್ರಮಾಣ ₹753 ಕೋಟಿಗೆ ಹಿಗ್ಗಿತ್ತು. ಇದರಲ್ಲಿ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಮಾಗಡಿ ಹಾಗೂ ರಾಮನಗರ ತಾಲ್ಲೂಕುಗಳಿಗೆ ₹150 ಕೋಟಿ ಅನುದಾನದ ವಿಷಯ ಸೇರ್ಪಡೆಯಾಗಿದೆ. ಇಲ್ಲಿ ಭವಿಷ್ಯದಲ್ಲಿ ಕಸ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಹೀಗಾಗಿ, ಈ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಣ ನೀಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೊಸಕೋಟೆಯನ್ನು ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಪ್ರತಿನಿಧಿಸುತ್ತಿದ್ದರೆ, ಉಳಿದ ನಾಲ್ಕೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

ನಗರದಲ್ಲಿ ನಿತ್ಯ 4,500 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ನಗರದಲ್ಲಿ 8 ಕಸ ವಿಲೇವಾರಿ ಘಟಕಗಳು ಇವೆ. ಇಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ ಹಾಗೂ ಈ ಪ್ರದೇಶಗಳ ಅಭಿವೃದ್ಧಿಗೆ ಬಿಬಿಎಂಪಿ ಅನುದಾನ ಮೀಸಲು ಇಟ್ಟಿಲ್ಲ ಎಂದು ಆರೋಪಿಸಿ ಸ್ಥಳೀಯರು ಹಲವು ಸಲ ಈ ಘಟಕಗಳನ್ನು ಮುಚ್ಚಿಸಿದ್ದರು. ಈ ಘಟಕಗಳನ್ನು ಮುಚ್ಚಿಸಬೇಕು ಎಂದು ಸ್ಥಳೀಯ ಶಾಸಕರು ಒತ್ತಾಯ ಮಾಡಿದ್ದರು.

ಯಶವಂತಪುರ ಕ್ಷೇತ್ರ ‘ಕಸವಂತಪುರ’ ಆಗಿದೆ ಎಂದು ಕಾಂಗ್ರೆಸ್‌ ಶಾಸಕ ಎಸ್.ಟಿ.ಸೋಮಶೇಖರ್‌ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮೈತ್ರಿ ಸರ್ಕಾರ ಬಂದ ಮೇಲೆ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಕಿಡಿ ಕಾರಿದ್ದರು. ಈ ವಿಷಯ ‘ದೋಸ್ತಿ’ ಪಕ್ಷಗಳ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 350 ಕೋಟಿ ವೆಚ್ಚದಲ್ಲಿ ಏಳು ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಆದರೆ, ಅವು ಇನ್ನೂ ಶೇ 100ರಷ್ಟು ಸಾಧನೆ ಮಾಡಲು ಆಗಿಲ್ಲ. ಶೇ 25ರಷ್ಟು ಮಾತ್ರವೇ ಉಪಯೋಗ ಆಗುತ್ತಿವೆ. ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸಲು ಈ ಘಟಕಗಳ ಸುತ್ತಮುತ್ತಲಿನ ಜನರು ನಮಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸ್ ರಕ್ಷಣೆ ಬೇಕು’ ಎಂದು ಪಾಲಿಕೆ ಅಧಿಕಾರಿಗಳು ಹೈಕೋರ್ಟ್‌ಗೆ ಇತ್ತೀಚೆಗೆ ಮನವಿ ಮಾಡಿದ್ದರು. ಆದರೆ, ಈ ಘಟಕಗಳು ಇರುವ ಪ್ರದೇಶಗಳ ಅಭಿವೃದ್ಧಿಗೆ ₹5 ಕೋಟಿಯಿಂದ ₹10 ಕೋಟಿಗಳಷ್ಟು ನೀಡಲಾಗಿದೆ. ಇಲ್ಲಿಗೆ ಚಿಕ್ಕಾಸು ಅನುದಾನ ನೀಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

‘ನಗರದಲ್ಲಿ ಕಸ ವಿಲೇವಾರಿಗೆ ಹಲವು ಕ್ವಾರಿಗಳನ್ನು ಗುರುತಿಸಲಾಗಿದೆ. ಇಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಹಣ ಮೀಸಲಿಟ್ಟಿಲ್ಲ. ಕಸ ವಿಲೇವಾರಿ ಹೆಸರಿನಲ್ಲಿ ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಇದ್ದಾಗ ಮೂರು ಕ್ಷೇತ್ರಗಳಿಗಷ್ಟೇ (ಯಶವಂತಪುರ, ಕೆ.ಆರ್‌.ಪುರ, ರಾಜರಾಜೇಶ್ವರಿ ನಗರ) ಬಹುಪಾಲು ಅನುದಾನ ಹಂಚಿಕೆಯಾಗಿತ್ತು. ಈಗ ಅದು ಜೆಡಿಎಸ್‌ ಶಾಸಕರ ಸರದಿ’ ಎಂದು ಅಧಿಕಾರಿಯೊಬ್ಬರು ವಿಶ್ಲೇಷಿಸಿದರು.

ಘನತ್ಯಾಜ್ಯ ವಿಲೇವಾರಿ– ಎಲ್ಲಿಗೆ ಎಷ್ಟು ಹಣ

*ಮಂಡೂರು ಭೂಭರ್ತಿ ಘಟಕದ 100 ಎಕರೆ ಜಾಗವನ್ನು ಮುಂಚಿನ ಸ್ಥಿತಿಗೆ ತರುವುದು; ₹40 ಕೋಟಿ

*ಬೆಲ್ಲಹಳ್ಳಿ ಭೂಭರ್ತಿ ಘಟಕದ ಸುತ್ತಲಿನ ಗ್ರಾಮಗಳ ಅಭಿವೃದ್ಧಿ ಕಾರ್ಯ; ₹15 ಕೋಟಿ

*ಮಿಟಿಹಾನಹಳ್ಳಿ ಭೂಭರ್ತಿ ಘಟಕದ ಸುತ್ತಲಿನ ‍ಪ್ರದೇಶದ ಅಭಿವೃದ್ಧಿ; ₹15 ಕೋಟಿ

*ಬಾಗಲೂರು ಭೂಭರ್ತಿ ಘಟಕದ ಸುತ್ತಲಿನ ಪ್ರದೇಶದ ಅಭಿವೃದ್ಧಿ; ₹15 ಕೋಟಿ

*198 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ‌ಗಳ ಸ್ಥಾಪನೆ ಹಾಗೂ ಮೇಲ್ದರ್ಜೆಗೆ; ₹50 ಕೋಟಿ

*ಎರಡು ಪ್ರದೇಶಗಳಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ ಘಟಕಗಳ ಸ್ಥಾಪನೆ; ₹50 ಕೋಟಿ

ಮೂಲಸೌಕರ್ಯಕ್ಕೆ ಹಣ: ಮಹೇಂದ್ರ ಜೈನ್‌

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲದ ಪ್ರದೇಶಗಳಲ್ಲೂ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ‍ಪಾಲಿಕೆಯ ಹೊಣೆ. ಹೀಗಾಗಿ, ಭವಿಷ್ಯದ ಗುರಿಯನ್ನು ಇರಿಸಿಕೊಂಡು ಈ ಕ್ಷೇತ್ರಗಳಿಗೆ ಅನುದಾನ ನೀಡಲಾಗಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ವಿಲೇವಾರಿ ಘಟಕಗಳಿಗೆ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಅನುದಾನ ನೀಡಲಾಗಿತ್ತು. ಹಾಗಾಗಿ, ಈ ವರ್ಷ ಕಡಿಮೆ ಅನುದಾನ ಹಂಚಿಕೆಯಾಗಿರಬಹುದು’ ಎಂದು ಅವರು ವಿಶ್ಲೇಷಿಸಿದರು.

ಶಾಸಕರು ಯಾರು?

*ನಿಸರ್ಗ ನಾರಾಯಣಸ್ವಾಮಿ (ದೇವನಹಳ್ಳಿ)

*ಡಾ.ಕೆ.ಶ್ರೀನಿವಾಸಮೂರ್ತಿ (ನೆಲಮಂಗಲ)

*ಎ. ಮಂಜುನಾಥ್ (ಮಾಗಡಿ)

*ಅನಿತಾ ಕುಮಾರಸ್ವಾಮಿ (ರಾಮನಗರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT