ಭಾನುವಾರ, ಸೆಪ್ಟೆಂಬರ್ 26, 2021
28 °C

ಮಳೆ ಅನಾಹುತ; ಮನೆಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಬೇಗೂರು ವಾರ್ಡ್‌ನ ಹಲವು ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟ ಅನುಭವಿಸಿದರು.

ಕ್ಲಾಸಿಕ್ ಪ್ಯಾರಡೈಸ್, ಶಾಂತಿಪ್ರಿಯ, ನಂಜುಂಡಯ್ಯ ಹಾಗೂ ಪಟೇಲ್ ಬಡಾವಣೆಯ ಮನೆಗಳಿಗೆ ನೀರು ನುಗ್ಗಿತು. ಕೊಳಚೆ ನೀರು ಸಂಪ್‌ಗೆ ಸೇರಿದ ಕಾರಣ ಕುಡಿಯಲು ನೀರಿಲ್ಲದೆ ಜನರು ಪರಿತಪಿಸಿದರು. ಕ್ಲಾಸಿಕ್ ಪ್ಯಾರಡೈಸ್ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮಳೆಯಿಂದ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಅದೇ ರಸ್ತೆಯಲ್ಲಿ ಟ್ಯಾಂಕರ್‌ ಮಗುಚಿ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು.

ಪಾಲಿಕೆ ಸದಸ್ಯ ಆಂಜನಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ್ ಕುಮಾರ್, ಜಲಮಂಡಳಿ ಎಂಜಿನಿಯರ್ ಮೋಹನ್ ಕುಮಾರ್ ಬಡಾವಣೆಗಳಿಗೆ ಭೇಟಿ ನೀಡಿ, ನೆರೆಪೀಡಿತರ ಆಹವಾಲು ಆಲಿಸಿದರು.

‘ಕ್ಲಾಸಿಕ್ ಪ್ಯಾರಡೈಸ್ ಬಡಾವಣೆ ಸದ್ಯ ಕೊಳಚೆ ಬಡಾವಣೆಯಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ರಸ್ತೆ ಅಗೆಯುತ್ತಾರೆ. ಅದನ್ನು ಮತ್ತೆ ಸರಿಪಡಿಸುವುದಿಲ್ಲ. ಶಾಸಕರ ದರ್ಶನವಾಗಿ ವರ್ಷ ಕಳೆದಿದೆ. ಪಾಲಿಕೆ ಸದಸ್ಯರ ಸುಳಿವು ಇಲ್ಲ. ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು’ ಎಂದು ಇಲ್ಲಿನ ನಿವಾಸಿ ಪದ್ಮನಾಭನ್ ಪ್ರಶ್ನಿಸಿದರು.

‘ರಾಜಕಾಲುವೆಗಳ ಒತ್ತುವರಿಯ ಕಾರಣ ನೆರೆ ಉಂಟಾಗುತ್ತಿದೆ. ಒತ್ತುವರಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ. ಒತ್ತುವರಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಪಾಲಿಕೆ ಸದಸ್ಯ ಆಂಜನಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.