ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಬಾರಿ ಟೆಂಡರ್‌ ಕರೆದ ಬಿಎಸ್‌ಸಿಎಲ್‌

ಕೆ.ಆರ್‌.ಮಾರುಕಟ್ಟೆ ನವೀಕರಣ ಕಾಮಗಾರಿ
Last Updated 14 ಜುಲೈ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ನವೀಕರಣಕ್ಕೆ ಎರಡು ಬಾರಿ ಟೆಂಡರ್‌ ಕರೆದಾಗಲೂ ಯಾವುದೇ ಗುತ್ತಿಗೆದಾರರು ಭಾಗವಹಿಸದ ಕಾರಣ ಬಿಬಿಎಂಪಿಯ ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ (ಬಿಎಸ್‌ಸಿಎಲ್‌) ಮೂರನೇ ಬಾರಿ ಟೆಂಡರ್‌ ಆಹ್ವಾನಿಸಿದೆ.

₹ 59 ಕೋಟಿ ವೆಚ್ಚದಲ್ಲಿ ಕೆ.ಆರ್‌.ಮಾರುಕಟ್ಟೆ ಕಟ್ಟಡ ನವೀಕರಿಸುವ ಸಲುವಾಗಿ ಬಿಎಸ್‌ಸಿಎಲ್‌ 2019ರ ಮಾರ್ಚ್‌ 7ರಂದು ಟೆಂಡರ್‌ ಕರೆದಿತ್ತು. ಯಾವುದೇ ಗುತ್ತಿಗೆದಾರರು ಭಾಗವಹಿಸದ ಕಾರಣ ಮೇನಲ್ಲಿ ಮರುಟೆಂಡರ್‌ ಕರೆದಿತ್ತು.

‘ಈ ಕಾಮಗಾರಿಗೆ ಎರಡು ಬಾರಿ ಟೆಂಡರ್‌ ಕರೆದಾಗಲೂ ಯಾರೂ ಭಾಗವಹಿಸಿಲ್ಲ. ಹಾಗಾಗಿ ಮತ್ತೊಮ್ಮೆ ಟೆಂಡರ್‌ ಆಹ್ವಾನಿಸಿದ್ದೇವೆ’ ಎಂದು ಬಿಎಸ್‌ಸಿಎಲ್‌ನ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್‌ ತಿಳಿಸಿದರು.

‘ಬಿಡ್‌ ಪೂರ್ವ ಸಭೆಯಲ್ಲಿ ಕೆಲವು ಗುತ್ತಿಗೆದಾರರು ಈ ಕಾಮಗಾರಿ ಬಗ್ಗೆ ಆಸಕ್ತಿ ತೋರಿಸಿದ್ದರು. ಆದರೂ, ಯಾರೂ ಟೆಂಡರ್‌ನಲ್ಲಿ ಭಾಗವಹಿಸಿಲ್ಲ. ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿ ಕಾಮಗಾರಿ ನಿರ್ವಹಿಸುವುದು ಅಷ್ಟೊಂದು ಸುರಕ್ಷಿತವಲ್ಲ ಎಂಬ ಭಾವನೆ ಬಹುತೇಕ ಗುತ್ತಿಗೆದಾರರಲ್ಲಿದೆ. ಸೀಮಿತ ಅವಧಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಆದರೆ, ನಿರೀಕ್ಷಿತ ವೇಗದಲ್ಲಿ ಇಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಈ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಇಟ್ಟರೆ ಅವು ಕಳವಾಗುವ ಅಪಾಯವೂ ಇದೆ ಎಂಬ ಆತಂಕ ಕೆಲವು ಗುತ್ತಿಗೆದಾರರಲ್ಲಿದೆ’ ಎಂದು ಅವರು ವಿವರಿಸಿದರು.

ಕೆ.ಆರ್‌.ಮಾರುಕಟ್ಟೆ ನವೀಕರಣ ಯೋಜನೆ ಅಡಿ ವೇಳೆ ಮಾರುಕಟ್ಟೆಯ ಮುಖ್ಯ ಕಟ್ಟಡವನ್ನು ಮೇಲ್ದರ್ಜೆಗೇರಿಸುವುದು, ಮಾಂಸ ಮಾರುಕಟ್ಟೆಯ ನಿರ್ಮಾಣ, ಚಿಕ್ಕಪೇಟೆ ಮೆಟ್ರೊ ನಿಲ್ದಾಣ ಮತ್ತು ಕೆ.ಆರ್‌.ಮಾರುಕಟ್ಟೆ ಬಸ್‌ ನಿಲ್ದಾಣಗಳ ನಡುವೆ 365 ಮೀ ಉದ್ದದ ಪಾದಚಾರಿ ಮಾರ್ಗ ನಿರ್ಮಾಣ, ಸರಕುಗಳನ್ನು ಲಾರಿಯಿಂದ ಇಳಿಸುವುದಕ್ಕೆ ಹಾಗೂ ತುಂಬಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ (ಲಾರಿ ಬೇ) ನಿರ್ಮಿಸುವುದು, ವ್ಯಾಪಾರಿ ಮಳಿಗೆಗಳ (ವೆಂಡಿಂಗ್ ಪ್ಲಾಜಾ) ನಿರ್ಮಾಣ ಹಾಗೂ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಮಾರುಕಟ್ಟೆಯ ಸೌಂದರ್ಯವರ್ಧನೆ ಮುಂತಾದ ಕಾಮಗಾರಿಗಳನ್ನು ಬಿಎಸ್‌ಸಿಎಲ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT