ಸೋಮವಾರ, ಮಾರ್ಚ್ 8, 2021
24 °C
2 ವಾಹನ ಹೊಂದಿದವರು ಹೊಸ ವಾಹನ ಖರೀದಿಸುವುದಕ್ಕೆ ಕಡಿವಾಣ l ಬಸ್‌ ಸಂಚಾರಕ್ಕೆ ಆದ್ಯತಾ ಪಥ

ಸಿಬಿಡಿ: ಖಾಸಗಿ ವಾಹನಕ್ಕೆ ನಿರ್ಬಂಧ – ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಖಾಸಗಿ ವಾಹನ ಸಂಚಾರ ನಿರ್ಬಂಧಿಸುವ ಹಾಗೂ ಈಗಾಗಲೇ ಒಂದೆರಡು ವಾಹನ ಹೊಂದಿರುವವರು ಹೊಸ ವಾಹನ ಖರೀದಿಸುವುದಕ್ಕೆ ನಿರ್ಬಂಧ ವಿಧಿಸುವ ಚಿಂತನೆ ಸರ್ಕಾರದ ಮುಂದಿದೆ’ ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ.ಬಸವರಾಜು ತಿಳಿಸಿದರು.

ನಗರದ ವಾಹನ ದಟ್ಟಣೆ ಸಮಸ್ಯೆ ನೀಗಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲು ‘ಡೆಕ್ಕನ್ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ’ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಸಂಚಾರ ದಟ್ಟಣೆ ಸಮಸ್ಯೆ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಸರ್ಕಾರವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಜನ ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸುವಂತಾಗಬೇಕು ಎಂಬ ಉದ್ದೇಶ ನಮ್ಮದು. ಈ ಸಲುವಾಗಿ ಬಸ್‌ಗಳಿಗಾಗಿಯೇ ಪ್ರತ್ಯೇಕ ಆದ್ಯತಾ ಪಥವನ್ನು ಹೊಂದುವ ಕುರಿತೂ ಚಿಂತನೆ ನಡೆದಿದೆ. ಇದರಿಂದ ಬಸ್‌ಗಳ ಸುಗಮ ಹಾಗೂ ಕ್ಷಿಪ್ರ ಸಂಚಾರಕ್ಕೆ ಅವಕಾಶ ಸಿಗಲಿದೆ’ ಎಂದು ವಿವರಿಸಿದರು. 

‘ದಟ್ಟಣೆ ಸಮಸ್ಯೆ ನಿವಾರಣೆಗೆ ದೀರ್ಘಾವಧಿ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ, ನಮ್ಮ ಮೆಟ್ರೊ ಜಾಲ ವಿಸ್ತರಣೆ, ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣದಿಂದ ಈ ಸಮಸ್ಯೆ ನೀಗಲಿದೆ. ಚತುರ ಸಾರಿಗೆ ನಿರ್ವಹಣೆ ವ್ಯವಸ್ಥೆಯಿಂದಲೂ ದಟ್ಟಣೆ ಕಡಿಮೆ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸ್‌ ಸಾರಿಗೆ ಬಲವರ್ಧನೆಯ ಅಗತ್ಯದ ಬಗ್ಗೆ ಬಸ್‌ ಪ್ರಯಾಣಿಕರ ವೇದಿಕೆ ಸಂಚಾಲಕ ವಿನಯ್‌ ಶ್ರೀನಿವಾಸ್‌ ಎಳೆ ಎಳೆಯಾಗಿ ಬಿಡಿಸಿಟ್ಟರು.

‘ನಗರದಲ್ಲಿ 2013ರಲ್ಲಿ 50 ಲಕ್ಷ ಖಾಸಗಿ ವಾಹನಗಳಿದ್ದವು. ಈಗ ಇವುಗಳ ಸಂಖ್ಯೆ 75.06ಲಕ್ಷಕ್ಕೆ ಹೆಚ್ಚಳವಾಗಿದೆ. ಐದು ವರ್ಷಗಳ ಹಿಂದೆ 6,587 ಬಸ್‌ಗಳಿದ್ದವು. ಈಗ 6,632 ಬಸ್‌ಗಳಿವೆ. ದೇಶದ ಏಳು ಮಹಾನಗರಗಳ ಪೈಕಿ ಬಸ್‌ ಪ್ರಯಾಣ ದರ ಅತಿ ಹೆಚ್ಚು ಇರುವುದು ಬೆಂಗಳೂರಿನಲ್ಲಿ. ಹಾಗಾಗಿಯೇ ಇಲ್ಲಿ ಬಸ್‌ನಲ್ಲಿ ಪ್ರಯಾಣಿಸುವುದಕ್ಕಿಂತ ದ್ವಿಚಕ್ರ ವಾಹನ ಬಳಕೆ ಅಗ್ಗ’ ಎಂದು ವಿಶ್ಲೇಷಿಸಿದರು.

‘ಸರ್ಕಾರ ಮೆಟ್ರೊ ಯೋಜನೆಯ ಮೊದಲ ಹಂತಕ್ಕೆ ₹ 14 ಸಾವಿರ ಕೋಟಿ ಹಾಗೂ ಎರಡನೇ ಹಂತಕ್ಕೆ ₹ 32 ಸಾವಿರ ಕೋಟಿ ವ್ಯಯಿಸುತ್ತಿದೆ. ಎರಡನೇ ಹಂತ ಪೂಣಗೊಂಡ ಬಳಿಕವೂ ಮೆಟ್ರೊದಲ್ಲಿ ನಿತ್ಯ ಹೆಚ್ಚೆಂದರೆ 20 ಲಕ್ಷ ಮಂದಿ ಪ್ರಯಾಣಿಸಬಹುದು. ನಿತ್ಯ 50 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವ ಬಿಎಂಟಿಸಿಗೆ ಅನುದಾನ ನೀಡಲು ಸರ್ಕಾರ ಸಿದ್ಧವಿಲ್ಲ. ಬಸ್‌ ಟಿಕೆಟ್‌ ಹಣದಿಂದಲೇ ಕಾರ್ಯನಿರ್ವಹಿಸುವ ಸಂಸ್ಥೆ ಬಿಎಂಟಿಸಿ. ಲಾಭ ನಷ್ಟದ ಬಗ್ಗೆ ವಿಶ್ಲೇಷಿಸದೆ ಈ ಸಂಸ್ಥೆಗೆ ಸರ್ಕಾರ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.  

‘ನಗರದ 1.2 ಕೋಟಿ ಜನಸಂಖ್ಯೆಗೆ 14 ಸಾವಿರ ಬಸ್‌ಗಳಾದರೂ ಬೇಕು. ಹೆಚ್ಚುವರಿ 8 ಸಾವಿರ ಬಸ್‌ಗಳ ಖರೀದಿಗೆ ₹2,400 ಕೋಟಿ ಸಾಕು. ಬಸ್‌ಗಳಿಗೆ ಪ್ರತ್ಯೇಕ ಪಥ ನಿಗದಿ ಪಡಿಸಿದರೆ ಜನ ತನ್ನಿಂದ ತಾನೆ ಕಾರು ಬೈಕ್‌ಗಳ ಬಳಕೆ ತ್ಯಜಿಸಲಿದ್ದಾರೆ. ಇದರಿಂದ ವಾಹನ ದಟ್ಟಣೆ ಸಮಸ್ಯೆ ನೀಗಲಿದೆ’ ಎಂದು ಸಲಹೆ ನೀಡಿದರು. 

ಎಲಿವೇಟೆಡ್‌ ಕಾರಿಡಾರ್‌ ಬದಲು ನಮ್ಮ ಮೆಟ್ರೊ ಮಾರ್ಗ ನಿರ್ಮಿಸಿದರೆ 2020ರಲ್ಲಿ ಹಾಗೂ 2030ರಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ, ಈಗಿನ ಪರಿಸ್ಥಿತಿಯೇ ಮುಂದುವರಿದರೆ ಏನಾಗಲಿದೆ ಎಂಬುದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ತಜ್ಞ ಆಶಿಶ್‌ ವರ್ಮ ವಿಶ್ಲೇಷಿಸಿದರು. ‘ಎಲಿವೇಟೆಡ್‌ ಕಾರಿಡಾರ್‌ ಬದಲು ಮೆಟ್ರೊ ಮಾರ್ಗ ನಿರ್ಮಿಸುವುದರಿಂದಲೇ ಹೆಚ್ಚು ಅನುಕೂಲ’ ಎಂದು ಅವರು ಅಭಿಪ್ರಾಯಪಟ್ಟರು.

‘ನಗರದ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಾಹನಗಳನ್ನು ತಡೆದು ತಪಾಸಣೆ ನಡೆಸಿ, ಬಳಿಕ ಅವುಗಳನ್ನು ಪ್ರಾಂಗಣದೊಳಗೆ ಬಿಟ್ಟುಕೊಳ್ಳುತ್ತಿದ್ದು, ಇದರಿಂದ ದಟ್ಟಣೆ ಉಂಟಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಹರಿಶೇಖರನ್‌ ತಿಳಿಸಿದರು.

‘ಮಾಹಿತಿ ತಂತ್ರಜ್ಞಾನ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಈ ಕಂಪನಿಗಳ ಸಿಬ್ಬಂದಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ’ ಎಂದು ಬಿ.ಬಸವರಾಜು ತಿಳಿಸಿದರು.

**

‘ಬಸ್‌ ಬೇ’ ಕೊರತೆ ಸಮಸ್ಯೆ – ಬೈಗುಳ ಪೊಲೀಸರಿಗೆ

ನಗರದ ರಸ್ತೆಗಳಲ್ಲಿ  ’ಬಸ್‌ ಬೇ’ಗಳ ಕೊರತೆಯಿಂದಾಗಿ ಏನೆಲ್ಲ ಸಮಸ್ಯೆ ಆಗುತ್ತಿದೆ ಎಂಬುದನ್ನು ವಿ.ಹರಿಶೇಖರನ್‌ ಸ್ವಾರಸ್ಯಕರವಾಗಿ ವಿವರಿಸಿದರು.

‘ಬಸ್‌ ನಿಲ್ದಾಣದ ಬಳಿ ಎರಡು ಮೂರು ಬಸ್‌ಗಳನ್ನು ಅಕ್ಕಪಕ್ಕ ನಿಲ್ಲಿಸಿದರೆ 500 ಮೀಟರ್‌ ಉದ್ದಕ್ಕೆ ದಟ್ಟಣೆ ಉಂಟಾಗುತ್ತದೆ. ಇದಕ್ಕೂ ಸಂಚಾರ ಪೊಲೀಸರಿಗೇ ಜನರು ಬೈಯುತ್ತಾರೆ. ನಾವೇನು ಮಾಡುವುದು ಹೇಳಿ’ ಎಂದು ಅಳಲು ತೋಡಿಕೊಂಡರು.

‘ಎಲ್ಲೆಲ್ಲಿ ಬಸ್‌ ಬೇಗಳಿದ್ದವು, ಅವುಗಳಲ್ಲಿ ಎಷ್ಟು ಕಣ್ಮರೆಯಾಗಿವೆ, ಎಲ್ಲೆಲ್ಲಿ ಅವುಗಳ ಅವಶ್ಯಕತೆ ಇದೆ ಎಂಬ ಬಗ್ಗೆ ಪೊಲೀಸ್‌ ಸಿಬ್ಬಂದಿಯಿಂದಲೇ ಮಾಹಿತಿ ಪಡೆದು ವರದಿ ತಯಾರಿಸಿದ್ದೇವೆ’ ಎಂದರು.

‘ಬಿಎಂಟಿಸಿ ವತಿಯಿಂದಲೂ ಬಸ್‌ ಬೇಗಳ ಬಗ್ಗೆ ಸರ್ವೆ ನಡೆದಿದೆ. ಈ ಸಮಸ್ಯೆ ನೀಗಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿ.ಬಸವರಾಜು ತಿಳಿಸಿದರು.

**

ದಟ್ಟಣೆ ಚಕ್ರವ್ಯೂಹ ಭೇದಿಸುವ ಬಗೆ ಹೇಗೆ?

ಜನ ಸಂತೋಷದಿಂದ ದಿನ ಕಳೆಯಲು ಬಯಸುವ ಈ ಮಹಾನಗರದಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರ ದಟ್ಟಣೆಯ ವಿಷವರ್ತುಲ ಹೇಗೆ ಬೆಳೆಯುತ್ತಿದೆ. ಈ ಚಕ್ರವ್ಯೂಹದೊಳಗೆ ಸಿಲುಕಿ ಜನ ಹೇಗೆ ನಲುಗುತ್ತಿದ್ದಾರೆ. ಒಬ್ಬರ ಮೇಲೊಬ್ಬರು ದೂರು ಹೇಳುತ್ತಾ ಜವಾಬ್ದಾರಿ ಮರೆಯುತ್ತಿದ್ದಾರೆ ಎಂಬುದನ್ನು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ವಿ.ಹರಿಶೇಖರನ್‌ ಸೊಗಸಾಗಿ ವಿವರಿಸಿದರು.

ಜನರ ಜವಾಬ್ದಾರಿಗಳೇನು, ನೀತಿ ನಿರೂಪಣೆಯ ವಿಚಾರದಲ್ಲಿ ಎಡವಿದ್ದೆಲ್ಲಿ, ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಸಮಸ್ಯೆ ಹೇಗೆ ಬೃಹದಾಕಾರವಾಗಿ ಬೆಳೆಯುತ್ತಿದೆ ಎಂದು ಬೆಳಕು ಚೆಲ್ಲಿದರು.

‘ಈ ನಗರವು ವರ್ತುಲಾಕಾರದಲ್ಲಿ ಬೆಳೆಯುತ್ತಿದೆ. ಎಲ್ಲ ದಿಕ್ಕುಗಳಿಂದ ವಾಹನಗಳು ನಗರವನ್ನು ಸೇರಿಕೊಳ್ಳುತ್ತಿದ್ದು, ದಟ್ಟಣೆ ಹೆಚ್ಚುತ್ತಿದೆ. ಇದನ್ನು ನಿವಾರಿಸಲು ಸಮಗ್ರ ನೀತಿಯ ಅಗತ್ಯವಿದೆ’ ಎಂದರು.

**

ಪಾಡ್‌ ಟ್ಯಾಕ್ಸಿಗೆ ಬೆಂಗಳೂರಿನಲ್ಲಿ ಜಾಗ ಇದೆ. ಆದರೆ, ಬಸ್‌ಗೆ ಪ್ರತ್ಯೇಕ ಪಥ ನಿರ್ಮಾಣ ಮಾಡಲು ಜಾಗ ಇಲ್ಲ. ಇದೆಂಥ ವಿಪರ್ಯಾಸ.

–ವಿನಯ ಶ್ರೀನಿವಾಸ್‌, ಬಸ್‌ ಪ್ರಯಾಣಿಕರ ವೇದಿಕೆ

**

ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವ ಮ್ಯಾಜಿಕ್‌ ಬುಲೆಟ್‌ ಯಾವುದೂ ಇಲ್ಲ. ವಿವಿಧ ಸಾರಿಗೆ ವ್ಯವಸ್ಥೆಗಳ ನಡುವೆ ಸಮನ್ವಯ ಸಾಧಿಸುವುದೊಂದೇ ಇದಕ್ಕೆ ಪರಿಹಾರ.

–ಆಶಿಶ್‌ ವರ್ಮ, ಸಾರಿಗೆ ತಜ್ಞ, ಭಾರತೀಯ ವಿಜ್ಞಾನ ಸಂಸ್ಥೆ

**

ಇಲ್ಲಿ ವಾಹನ ನಿಲ್ಲಿಸಬೇಡಿ ಎಂದು ಹೇಳುವುದು ಸುಲಭ. ಹಾಗಾದರೆ, ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆಗೆ ಉತ್ತರವಿಲ್ಲ. ವಾಹನ ನಿಲುಗಡೆ ಕುರಿತು ಸಮಗ್ರ ನೀತಿ ಅಗತ್ಯ.

–ವಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ)

**

ಜನರ ಪ್ರಶ್ನೆ- ಅಧಿಕಾರಿಗಳ ಉತ್ತರ

ರಾಜ್‌ಕುಮಾರ್‌: ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿ ಬಸ್‌ ಬೇ ಇದೆ. ಆದರೆ, ಅಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಟ್ಯಾಕ್ಸಿ, ಆಟೊರಿಕ್ಷಾಗಳೇ ನಿಂತಿರುತ್ತವೆ

ವಿ.ಹರಿಶೇಖರನ್‌: ಈ ಬಗ್ಗೆ ಪರಿಶೀಲಿಸುತ್ತೇನೆ. ಬಸ್‌ ಬೇನಲ್ಲಿ ಬೇರೆ ವಾಹನ ನಿಲ್ಲಿಸುವುದಕ್ಕೆ ಅವಕಾಶ ನೀಡುವುದಿಲ್ಲ

ಇ.ಪಿ.ಮೆನನ್‌: ನಗರದ ಒಳಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತದೆ.

ಬಿ.ಬಸವರಾಜು: ಕೈಗಾರಿಕಾ ವಲಯವನ್ನು ನಗರದ ಹೊರಭಾಗದಲ್ಲೇ ನಿರ್ಮಿಸಲಾಗುತ್ತದೆ. ನಗರ ಬೆಳೆದಂತೆ ಅವು ನಗರದ ಒಳಗೆ ಸೇರಿಕೊಳ್ಳುತ್ತವೆ. ಅಂತಹ ಕೈಗಾರಿಕೆಗಳನ್ನು ಮತ್ತೆ ಹೊರವಲಯಕ್ಕೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ

ಪ್ರಸಾದ್‌ ಗುಪ್ತ: ಶಾಲೆಗಳ ಬಳಿ ಮಕ್ಕಳ ಪೋಷಕರು ಕಾರು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ. ಪೋಷಕರ ವಾಹನ ನಿಲ್ಲಿಸುವುದಕ್ಕೇ 10 ಕಡೆ ಪ್ರತ್ಯೇಕ ಜಾಗ ಗುರುತಿಸಬಾರದೇಕೆ?

ಹರಿಶೇಖರನ್‌: ಈ ಬಗ್ಗೆ ಸಾಧಕ–ಬಾಧಕ ಅಧ್ಯಯನ ಮಾಡಿ ಕ್ರಮ ಕೈಗೊಳ್ಳುತ್ತೇವೆ

ರಾಧಾ: ವಾಹನಗಳು ಉಂಟು ಮಾಡುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇದಕ್ಕೆ ಕಡಿವಾಣ ಹಾಕುವುದು ಯಾವಾಗ?

ಹರಿಶೇಖರನ್‌: ನನ್ನ ಚಾಲಕನೂ ಬೇಕಾಬಿಟ್ಟಿ ಹಾರ್ನ್‌ ಹಾಕುತ್ತಾನೆ. ಈ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಅಗತ್ಯ ಇದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಈ ಬಗ್ಗೆ ಅಭಿಯಾನ ಹಮ್ಮಿಕೊಳ್ಳಲಾಗುವುದು

**

ಎಲಿವೇಟೆಡ್‌ ಕಾರಿಡಾರ್‌: ಜನ ಏನನ್ನುತ್ತಾರೆ?

‘ಸುತ್ತಿ ಬಳಸಿ ಸಂಚರಿಸುವುದು ತಪ್ಪಲಿದೆ’

‘ಎಲಿವೇಟೆಡ್ ಕಾರಿಡಾರ್‌ ಒಂದು ಉತ್ತಮ ಯೋಜನೆ. ಇದನ್ನು ಸರ್ಕಾರ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಇದರಿಂದ ನಗರದೊಳಗಿನ ಸಂಚಾರ ದಟ್ಟಣೆ ಸಮಸ್ಯೆ ನೀಗಲಿದೆ. ನಗರದಲ್ಲಿ ಈಗ ಕೆಲವು ಜಂಕ್ಷನ್‌ಗಳನ್ನು ಹಾದು ಹೋಗಬೇಕಾದರೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ’

–ಎಚ್‌.ಕೆಂಪಣ್ಣ, ಶ್ರೀನಗರ ನಿವಾಸಿ

**

‘ಈಗಿನ ಸಂಚಾರ ವ್ಯವಸ್ಥೆ ಸರಿಯಾಗಲಿ’

ಎಲಿವೇಟೆಡ್‌ ಕಾರಿಡಾರ್‌ ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂಬ ವಿಶ್ವಾಸ ಇಲ್ಲ. ಮೊದಲು ಸರ್ಕಾರ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಿ. ಆ ಬಳಿಕವೂ ಸಮಸ್ಯೆ ನೀಗದಿದ್ದರೆ ಬೇಕಿದ್ದರೆ ಈ ಯೋಜನೆ ಜಾರಿಗೊಳಿಸಲಿ. ನಮ್ಮಲ್ಲಿ ಪಾದಚಾರಿ ಮಾರ್ಗಗಳನ್ನು ಲಾರಿ ನಿಲ್ಲಿಸಲು ಬಳಸುತ್ತಾರೆ. ಒಂದು ಕುಟುಂಬದ ಬಳಿ ನಾಲ್ಕೈದು ಕಾರುಗಳಿರುತ್ತವೆ. ಅವೆಲ್ಲ ರಸ್ತೆಗಿಳಿಯುವುದನ್ನು ಮೊದಲು ತಡೆಯಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸಬೇಕು’

–ನಾರಾಯಣ ಶೆಟ್ಟಿ, ವೈಟ್‌ಫೀಲ್ಡ್‌

**

‘ಅನುಷ್ಠಾನವೇ ದೊಡ್ಡ ಸವಾಲು’

‘ಈ ಯೋಜನೆಯೇನೋ ಚೆನ್ನಾಗಿದೆ. ಆದರೆ, ಅದನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದು ದೊಡ್ಡ ಸವಾಲು. ಪ್ರಮುಖ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಆದಷ್ಟು ಕಡಿಮೆಗೊಳಿಸಲು ಸೂಕ್ತ ಲೂಪ್‌ಗಳನ್ನು ಒದಗಿಸಬೇಕು. ನಗರದಲ್ಲಿ ಕೆಲವೊಂದು ಮೇಲ್ಸೇತುವೆಗಳಿಂದ ನಿರೀಕ್ಷಿತ ಪ್ರಯೋಜನ ಸಿಕ್ಕಿಲ್ಲ. ಇದಕ್ಕೆ ಮುಂದಾಲೋಚನೆಯ ಕೊರತೆಯೂ ಕಾರಣ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವುದಾದರೆ, ಅದರ ಸಂಪೂರ್ಣ ಪ್ರಯೋಜನ ಜನರಿಗೆ ಸಿಗುವಂತೆ ಯೋಜನೆ ರೂಪಿಸಬೇಕು’

–ಎ.ಎಸ್‌.ಸೂರ್ಯಕಿರಣ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿ

‘ಮೊದಲು ಮೆಟ್ರೊ ಜಾಲ ಬಲಪಡಿಸಲಿ’

‘ಸರ್ಕಾರ ಮೊದಲು ಸಬ್‌ಅರ್ಬನ್‌ ರೈಲು ಹಾಗೂ ನಮ್ಮ ಮೆಟ್ರೊ ಜಾಲವನ್ನು ಒಂದಕ್ಕೊಂದು ಪೂರಕವಾಗಿ ರೂಪಿಸುವ ಮೂಲಕ ಸಾರ್ವಜನಿಕ ಸಾರಿಗೆ ಜಾಲವನ್ನು ಬಲಪಡಿಸಬೇಕು. ನಮ್ಮಲ್ಲಿ ರೈಲು ಸಂಪರ್ಕ ಜಾಲ ಚೆನ್ನಾಗಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ.  ಐ.ಟಿ  ಕಾರಿಡಾರ್‌ ಹಾಗೂ ಟೆಕ್‌ ಪಾರ್ಕ್‌ಗಳ ಮೂಲಕವೇ ಇದು ಹಾದುಹೋಗುತ್ತಿದೆ. ಪ್ರಮುಖ ಮೆಟ್ರೊ ನಿಲ್ದಾಣಗಳೊಂದಿಗೂ ಸಂಪರ್ಕ ಹೊಂದಿದೆ. ರೈಲುಗಳ ಸಂಖ್ಯೆ ಹೆಚ್ಚಿಸಿದರೆ ಸಾಕು, ಇದರಿಂದ ನಗರದ ಸಂಚಾರ ದಟ್ಟಣೆ ಬಹುತೇಕ ಕಡಿಮೆ ಆಗಲಿದೆ’

–ಸುಹಾಸ್‌ ನಾರಾಯಣ ಮೂರ್ತಿ, ರೈಲು ಹೋರಾಟಗಾರ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು