ಶನಿವಾರ, ಸೆಪ್ಟೆಂಬರ್ 25, 2021
24 °C
ತುರಹಳ್ಳಿ ಸಂರಕ್ಷಿತ ಅರಣ್ಯ: ಹೆಚ್ಚುತ್ತಿವೆ ಬೀದಿ ನಾಯಿ ಹಾವಳಿ

ನಾಯಿ ಅಟ್ಟಿಸಿಕೊಂಡು ಬಂದ ಜಿಂಕೆಮರಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಎರಡು ಜಿಂಕೆಗಳು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ, ವನ್ಯಜೀವಿ ಮೇಲೆ ನಾಯಿಗಳ ದಾಳಿ ಮತ್ತೆ ಮರುಕಳಿಸಿದೆ.

ಬೀದಿನಾಯಿಗಳ ಗುಂಪೊಂದು ಜಿಂಕೆ ಮರಿಯೊಂದನ್ನು ಭಾನುವಾರ ಕಾಡಿನಿಂದ ನಾಡಿಗೆ ಅಟ್ಟಿಸಿಕೊಂಡು ಬಂದಿದ್ದು ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಜಿಂಕೆಮರಿಗೆ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ.

‘ಮೂರು ಬೀದಿನಾಯಿಗಳು ಸೇರಿ ಜಿಂಕೆ ಮರಿಯೊಂದನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬನಶಂಕರಿ 6ನೇ ಹಂತದ ಸೋಂಪುರ ಪ್ರದೇಶಕ್ಕೆ ಅಟ್ಟಿಸಿಕೊಂಡು ಬಂದಿದ್ದವು. ಸ್ಥಳೀಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಮೊದಲು ನಾಯಿಗಳ ಬಾಯಿಯಿಂದ ಜಿಂಕೆ ಮರಿಯನ್ನು ರಕ್ಷಿಸುವಂತೆ ಸಲಹೆ ನೀಡಿದೆ. ನಾನು ಸ್ಥಳಕ್ಕೆ ಧಾವಿಸಿದಾಗ ಜಿಂಕೆ ಮರಿ ಗಾಬರಿಗೊಂಡಿತ್ತು. ಸುಮಾರು 5 ತಿಂಗಳ ಗಂಡು ಮರಿ ಅದು. ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಅರಣ್ಯ ರಕ್ಷಕ ಸಿಬ್ಬಂದಿ ಸಹಾಯದಿಂದ ತುರಹಳ್ಳಿ ಮೀಸಲು ಅರಣದೊಳಗೆ ಬಿಟ್ಟುಬಂದೆವು’ ಎಂದು ವೈಲ್ಡ್‌ಲೈಫ್‌ ವಾರ್ಡನ್‌ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರೀಕರಣ ತಂದ ತಲೆನೋವು: ತುರಹಳ್ಳಿಯಲ್ಲಿ ಕಿರು ಮೀಸಲು ಅರಣ್ಯ ಹಾಗೂ ರಾಜ್ಯ ಮೀಸಲು ಅರಣ್ಯ ಸೇರಿ ಸುಮಾರು 1,100 ಎಕರೆಗಳಷ್ಟು ವಿಸ್ತೀರ್ಣದ ಸಂರಕ್ಷಿತ ಕಾಡು ಇದೆ. ಇಲ್ಲಿ ಸುಮಾರು 150ಕ್ಕೂ ಅಧಿಕ ಜಿಂಕೆಗಳಿವೆ. ಈ ಕಾಡಿನ ಸುತ್ತಮುತ್ತಲಿನ ಪ್ರದೇಶ ತ್ವರಿತಗತಿಯಲ್ಲಿ ನಗರೀಕರಣಗೊಳ್ಳುತ್ತಿರುವುದು ವನ್ಯಜೀವಿಗಳ ಪಾಲಿಗೆ ಆತಂಕ ತಂದೊಡ್ಡಿದೆ.

ಮೂರು ತಿಂಗಳಿನಿಂದೀಚೆಗೆ ಇಲ್ಲಿನ ಎರಡು ಜಿಂಕೆಗಳು ಬೀದಿನಾಯಿಗಳ ದಾಳಿಗೆ ಬಲಿಯಾಗಿವೆ. ತಿಂಗಳ ಹಿಂದೆ ಒಂದು 3 ವರ್ಷದ ಗಂಡು ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು. ಆವರಣ ಗೋಡೆಯೊಂದನ್ನು ಜಿಗಿಯುವಾಗ ಆ ಜಿಂಕೆಯ ಕಾಲು ಮುರಿದಿತ್ತು. ಬಳಿಕ ಅದು ಕೊನೆಯುಸಿರೆಳೆದಿತ್ತು.

‘ತುರಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗುತ್ತಿರುವುದು ನಿಜ. ಬೀದಿನಾಯಿಗಳು ಕಾಡಿನೊಳಗೆ ನುಗ್ಗದಂತೆ ತಡೆಯುವ ವಿಚಾರದಲ್ಲಿ ನಿಸ್ಸಹಾಯಕರು. ನಾಯಿಗಳನ್ನು ಸ್ಥಳಾಂತರಿಸಲು ಅವಕಾಶ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರಹಳ್ಳಿ ಅರಣ್ಯ ಪ್ರದೇಶವು ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ಬೀದಿನಾಯಿಗಳ ಸಮಸ್ಯೆಗೆ ಬಿಬಿಎಂಪಿಯವರೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಸಂರಕ್ಷಿತ ಅರಣ್ಯದ ಸೆರಗಿನಲ್ಲೇ ಬನಶಂಕರಿ 6ನೇ ಹಂತದ ಬಡಾವಣೆ ನಿರ್ಮಾಣವಾಗಿದ್ದು ಇಲ್ಲಿನ ಕಾಡುಪ್ರಾಣಿಗಳ ಪಾಲಿಕೆ ಆತಂಕ ತಂದೊಡ್ಡಿದೆ. ನೈಸ್‌ ರಸ್ತೆಯೂ ಸೇರಿದಂತೆ ಒಟ್ಟು ಮೂರು ರಸ್ತೆಗಳು ತುರಹಳ್ಳಿ ಅರಣ್ಯವನ್ನು ಛಿದ್ರಗೊಳಿಸಿವೆ.

‘ಇಲ್ಲಿನ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಕಾಡುಪ್ರಾಣಿಗಳು ರಸ್ತೆ ದಾಟಲು ಭಯಪಡುತ್ತವೆ. ಈ ಹಿಂದೆ, ಇಲ್ಲಿನ ಕಾಡುಪ್ರಾಣಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶ ಹಾಗೂ ಸಾವನದುರ್ಗ ಕಾಡು ಪ್ರದೇಶಗಳಿಗೆ ನಿರಾತಂಕವಾಗಿ ಓಡಾಡಲು ಅವಕಾಶ ಇತ್ತು. ಈಗ ಅವುಗಳ ಚಟುವಟಿಕೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಸನ್ನ ಕುಮಾರ್‌.

‘ಕಾಡು ಪ್ರಾಣಿಗಳ ವಲಸೆಗೆ ಅವಕಾಶ ಇಲ್ಲದಿರುವುದು ಸಂತಾನೋತ್ಪಾದನಾ ಚಟುವಟಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದರು. 

***

ಒಮ್ಮೆ ಕಾಡುಪ್ರಾಣಿಗಳ ಮಾಂಸದ ರುಚಿ ಸಿಕ್ಕರೆ ಸಾಕು ಬೀದಿನಾಯಿಗಳು ಮತ್ತೆ ಮತ್ತೆ ಅದಕ್ಕೆ ಹಾತೊರೆಯುತ್ತವೆ. ತುರಹಳ್ಳಿ ಆಸುಪಾಸಿನಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮಕೈಗೊಳ್ಳಬೇಕು
–ಪ್ರಸನ್ನ ಕುಮಾರ್‌, ವೈಲ್ಡ್‌ಲೈಫ್‌ ವಾರ್ಡನ್‌

ತುರಹಳ್ಳಿ ಸಂರಕ್ಷಿತ ಅರಣ್ಯವು ನಗರದ ಸೆರಗಿನಲ್ಲೇ ಇರುವುದರಿಂದ ವನ್ಯಜೀವಿಗಳ ಸಂರಕ್ಷಣೆ ಕಠಿಣ ಸವಾಲು. ಆದರೂ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ
-ಪ್ರಾಣೇಶ ದೇಶಪಾಂಡೆ, ವಲಯ ಅರಣ್ಯ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು