ಬಾಯಿ ಬಡಿದುಕೊಂಡು, ಮಣ್ಣೆರಚಿ ಆಕ್ರೋಶ

ಭಾನುವಾರ, ಮೇ 26, 2019
26 °C
ಅಥಣಿ ತಾಲ್ಲೂಕು ದರೂರ ಗ್ರಾಮದಲ್ಲಿ ರೈತರಿಂದ ಅಹೋರಾತ್ರಿ ಧರಣಿ

ಬಾಯಿ ಬಡಿದುಕೊಂಡು, ಮಣ್ಣೆರಚಿ ಆಕ್ರೋಶ

Published:
Updated:
Prajavani

ಅಥಣಿ: ‘ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿನ ರೈತರು ತಾಲ್ಲೂಕಿನ ದರೂರ ಬಳಿ ಕೃಷ್ಣಾ ನದಿ ದಂಡೆಯಲ್ಲಿ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿದರು.

ಬತ್ತಿರುವ ಕೃಷ್ಣಾ ನದಿಗಿಳಿದು ಉರುಳುಸೇವೆ ಮಾಡಿ, ಬಾಯಿ ಬಡಿದುಕೊಂಡರು. ಮರಳು ಎರಚಿ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಾನುವಾರುಗಳು ನೀರಿಲ್ಲದೇ ಸಾಯುವ ಸ್ಥಿತಿಯಲ್ಲಿವೆ. ರೈತರು ಕೆಲಸವಿಲ್ಲದೇ ಗುಳೇ ಹೋಗುವಂತಾಗಿದೆ. ಇಷ್ಟಾದರೂ ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಲೋಕಸಭಾ ಚುನಾವಣೆಯಲ್ಲಿ ಮುಳುಗಿದ್ದರು. ಚುನಾವಣೆ ಮುಗಿದ ಬಳಿಕವಾದರೂ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೃಷ್ಣಾ ನದಿಗೆ ನೀರು ಬರುವವರೆಗೂ ಧರಣಿ ಹಿಂಪಡೆಯುವುದಿಲ್ಲ’ ಎಂದು ತಿಳಿಸಿದರು.

‘ಎರಡು ದಿನಗಳವರೆಗೆ ಧರಣಿ ನಡೆಸುತ್ತೇವೆ. ಅಲ್ಲಿವರೆಗೆ ಸ್ಪಂದನೆ ದೊರೆಯದಿದ್ದಲ್ಲಿ ಜತ್ತ– ಜಾಂಬೋಟಿ ರಾಜ್ಯ ಹೆದ್ದಾರಿ ತಡೆದು ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ‘ಈ ವಿಷಯವಾಗಿ ನಾವು ಸರ್ಕಾರಕ್ಕೆ ಮನವಿ ಸಲ್ಲಿಸುವುದಿಲ್ಲ. ಆದರೆ, ನೀರು ದೊರೆಯುವವರೆಗೆ ಹೋರಾಟ ನಿಲ್ಲಿಸುವುದಿಲ್ಲ’ ಎಂದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ‘ಕೃಷ್ಣಾ ನದಿಗೆ ನೀರು ಹರಿಸಬೇಕು ಎಂದು ತಿಂಗಳಿಂದಲೂ ಇಲ್ಲಿನ ಜನರು ಒತ್ತಾಯಿಸುತ್ತಿದ್ದೇವೆ; ಮನವಿಯನ್ನೂ ಸಲ್ಲಿಸಿದ್ದೇವೆ. ಆದರೆ, ಮಹಾರಾಷ್ಟ್ರ ಸರ್ಕಾರವು ಸ್ಪಂದನೆ ನೀಡಿಲ್ಲ. ಸರ್ಕಾರ ಅಥವಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದರೆ, ಈ ವೇಳೆಗಾಗಲೇ ಕೃಷ್ಣಾ ನದಿಯಲ್ಲಿ ನೀರು ಸಿಗುತ್ತಿತ್ತು’ ಎಂದು ಅಸಮಾಧಾನ ವ್ಯಕ್ತಪ‍ಡಿಸಿದರು.

ಮುಖಂಡರಾದ ಸತೀಶ ಕುಲಕರ್ಣಿ, ಸಂಜೀವ ಕಾಂಬಳೆ, ಜಗನಾಥ ಬಾಮನೆ ಮಾತನಾಡಿದರು. ಮುಖಂಡರಾದ ಬಸಪ್ಪ ಮಾಳಿ, ಮಲ್ಲಪ್ಪ ಲಡಗಿ, ಅಶೋಕ ಲಡಗಿ, ಶಿವಯ್ಯ ಹೀರೆಮಠ, ರಾಮು ಗುಮತಾಜ, ಬಸು ಅಂಬಿ, ಶಿವಲಿಂಗ ಹಿರೇಮಠ, ಮೋದಿನ ಮೋಳೆ, ಜಗದೀಶ ಹುದ್ದಾರ, ಪಿಂಟು ಕಬಾಡಗಿ ನೇತೃತ್ವ ವಹಿಸಿದ್ದರು.

ನದಿ ಸುತ್ತಲಿನ ಹಳ್ಳಿಗಳಾದ ಹಳ್ಯಾಳ, ನದಿಇಂಗಳಗಾವ, ಸಪ್ತಸಾಗರ, ದರೂರ, ತೀರ್ಥ, ಅವರಕೋಡದ ರೈತರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !