ಶನಿವಾರ, ಜುಲೈ 31, 2021
28 °C
ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯ

‘ಗಾಂಧಿ ಚಿಂತನೆಗಳು ಜನರಿಗೆ ತಲುಪಲಿ’

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಓದು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮದ ಮೂಲಕ ಗಾಂಧೀಜಿಯವರ ಚಿಂತನೆಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ಭಾರತೀಯ ವಿದ್ಯಾಭವನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ನಗರದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಮಹಾತ್ಮ ಗಾಂಧಿ–150’ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಧೀಜಿಯವರಿಗೆ ವೈಯಕ್ತಿವಾಗಿ ಚಲನಚಿತ್ರಗಳಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಚಲನಚಿತ್ರ, ಯಂತ್ರ ಸಂಸ್ಕೃತಿಯ ಪ್ರತಿನಿಧಿ ಹಾಗೂ ಅದೊಂದು ವ್ಯವಹಾರ ಎನ್ನುವ ಚಿಕ್ಕ ನಿರ್ಲಕ್ಷ್ಯ ಇತ್ತು. ವಿಪರ್ಯಾಸವೆಂದರೆ ಅವರು ಇಷ್ಟಪಡದ ಮಾಧ್ಯಮದ ಮೂಲಕವೇ ಜಗತ್ತಿನ ಯುವಜನತೆಯನ್ನು ತಲುಪಿದ್ದಾರೆ’ ಎಂದರು.

‘ಗಾಂಧೀಜಿಯವರ ಕುರಿತಾದ ಸಿನಿಮಾಗಳು ಪ್ರತಿ ಬಾರಿಯೂ ಹೊಸ ಹೊಳಹು ಹಾಗೂ ಅರ್ಥವನ್ನು ಕೊಡುತ್ತವೆ. ಕೆಲವೊಂದು ವಿಷಯದಲ್ಲಿ ಅವರನ್ನು ಒಪ್ಪದಿದ್ದರೂ, ಅವರ ಎದುರು ಮಂಡಿಯೂರಿ ಪ್ರಾರ್ಥಿಸುವಂತೆ ಮಾಡುತ್ತವೆ’ ಎಂದು ಹೇಳಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ,‘ಯುದ್ಧ ಬಯಸುವುದನ್ನೇ ರಾಷ್ಟ್ರಪ್ರೇಮ ಎಂದುಕೊಂಡಿರುವ ಪ್ರಸ್ತುತ ದಿನಮಾನಗಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ತುಂಬಾ ಮುಖ್ಯವಾಗುತ್ತವೆ’ ಎಂದು ಹೇಳಿದರು.

‘ಗಾಂಧಿಯನ್ನು ವ್ಯಕ್ತಿಯಾಗಿ ನೋಡಬಾರದು ಒಂದು ತತ್ವವಾಗಿ ನೋಡಬೇಕು. ಅವರು ನಂಬಿದ ಬಹುತ್ವದ ಮೌಲ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಂಡು ಹೋಗಬೇಕು’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಮಾತನಾಡಿ,‘ಗಾಂಧಿ ಒಬ್ಬ ಶ್ರೇಷ್ಠ ಬರಹಗಾರರಾಗಿದ್ದರು. ಅವರ ಬರಹಗಳನ್ನು 100 ಸಂಪುಟದಲ್ಲಿ ಸಂಪಾದಿಸಲಾಗಿದೆ’ ಎಂದು ತಿಳಿಸಿದರು. ರಿಚರ್ಡ್‌ ಅಟೆನ್‌ಬರೊ ನಿರ್ದೇಶನದ ‘ಗಾಂಧಿ’ ಚಿತ್ರ ಪ್ರದರ್ಶನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು