ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಥಕ್ಕೆ ಕಟ್ಟುಬೀಳದ ಜಿಎಸ್‌ಎಸ್‌’

Last Updated 20 ಡಿಸೆಂಬರ್ 2018, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಎಸ್‌ಎಸ್‌ ಅವರು ಸೆಂಟ್ರಲ್‌ ಕಾಲೇಜಿನಲ್ಲಿದ್ದಾಗ, ಕನ್ನಡ ಸಂಘ, ಕನ್ನಡ ಅಧ್ಯಯನ ವಿಭಾಗವನ್ನು ಯಾವುದೇ ಪಂಥಕ್ಕೆ ಕಟ್ಟುಬೀಳದೆಕ್ರಿಯಾಶೀಲವಾಗಿ ಕಟ್ಟಿ ಬೆಳೆಸಿದವರು’‌ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ‌ ಆಯೋಜಿಸಿದ್ದ ಜಿ.ಎಸ್.ಶಿವರುದ್ರಪ್ಪ ಅವರ ಬರಹಗಳ ಹೊಸ ಓದು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಜಿಎಸ್‌ಎಸ್‌ ಕುರಿತು ನಾಡಿನಾದ್ಯಂತ ಪ್ರಚಾರೋಪನ್ಯಾಸಗಳನ್ನು ಮಾಡುವುದಷ್ಟೆ ಅಲ್ಲದೇ, ಜಾಲತಾಣ ಆರಂಭಿಸಿ, ಲೇಖನಗಳನ್ನು ಬಿತ್ತರಿಸಲಿದ್ದೇವೆ’ ಎಂದು ಅವರು ಹೇಳಿದರು.‘ವೈಜ್ಞಾನಿಕ ದೃಷ್ಟಿಕೋನ, ವೈಚಾರಿಕತೆಯ ಎಚ್ಚರದಿಂದ ಪರಂಪರೆಯನ್ನು ಬೆಳೆಸಿದ ಕೀರ್ತಿ ಅವರದ್ದು.ಅವರ ಕಾವ್ಯಗಳ ನಿಲುವು ಬದುಕಿನ ನಿಲುವೂ ಆಗಿತ್ತು. ಶ್ರದ್ಧೆ, ಶ್ರಮ, ಗುಣಗ್ರಾಹಿತ್ವದ ಶಿಷ್ಯರನ್ನೇ ಬೆಳೆಸಿದವರು. ವಿಚಾರ, ವಾಗ್ವಾದಗಳಿಗೆ ಮುಕ್ತ ಅವಕಾಶ ನೀಡಿದವರು.ಅವರ ಆಶಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿವೆ. ಅವರ ಹೆಸರಿನಲ್ಲಿ ಕಾವ್ಯ ಮೀಮಾಂಸೆ, ವಿಮರ್ಶೆಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡುವ ಉದ್ದೇಶವೂ ಇದೆ’ ಎಂದು ಅವರು ತಿಳಿಸಿದರು.

‘ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಜಿ.ಎಸ್‌.ಶಿವರುದ್ರಪ್ಪ ಅವರ ಕಾಲಮಾನದಲ್ಲಿದ್ದಂತೆ ಪುನಃ ಕಟ್ಟಬೇಕಿದೆ. ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘ ಶತಮಾನೋತ್ಸವ ಸಂಭ್ರಮದಲ್ಲಿದೆ. ಈ ಸವಿನೆನಪಿಗಾಗಿ ರಾಷ್ಟ್ರದ ಎಲ್ಲ ಭಾಷೆಗಳನ್ನೊಳಗೊಂಡ ಚಟುವಟಿಕೆಗಳನ್ನು ನಡೆಸಲು ‘ಕರ್ನಾಟಕ ಭಾಷಾ ಭವನ’ ನಿರ್ಮಾಣ ಮಾಡಲಾಗುವುದು’ ಎಂದು ವಿ.ವಿ ಕುಲಪತಿ ಪ್ರೊ.ಜಾಫೆಟ್‌ ಹೇಳಿದರು.

ಪ್ರತಿಷ್ಠಾನದ ಹಿರಿಯ ಸದಸ್ಯ ಎಚ್.ಎಸ್.ರಾಘವೇಂದ್ರರಾವ್, ‘ಜಿಎಸ್‌ಎಸ್‌ ಪದೇಪದೆ ಹಣತೆ ಪದ್ಯವನ್ನೇ ಬೋಧಿಸುತ್ತಿದ್ದರು. ಸತ್ಯದೆಡೆಗಿನ ತೋರು ಬೆರಳಾಗಿಯೇ ಅವರು ಉಳಿದವರು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT