ಅವೈಜ್ಞಾನಿಕ ಹೇಳಿಕೆ ಖಂಡಿಸಿ ಮೌನ ಪ್ರತಿಭಟನೆ

7
ಕುಲಪತಿ ನಾಗೇಶ್ವರ್ ರಾವ್, ವಿಜ್ಞಾನಿ ಕಣ್ಣನ್ ವಿರುದ್ಧ ಆಕ್ರೋಶ

ಅವೈಜ್ಞಾನಿಕ ಹೇಳಿಕೆ ಖಂಡಿಸಿ ಮೌನ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ‘ವಿಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಕುಲಪತಿ ಜಿ.ನಾಗೇಶ್ವರ್ ರಾವ್ ಹಾಗೂ ತಮಿಳುನಾಡಿನ ವಿಜ್ಞಾನಿ ಕಣ್ಣನ್ ಜಗತಾಳ್ ಕೃಷ್ಣನ್‌ ಅವೈಜ್ಞಾನಿಕವಾಗಿ ಹೇಳಿಕೆ ನೀಡಿದ್ದಾರೆ’ ಎಂದು ದೂರಿ ಬ್ರೇಕ್‌ಥ್ರೂ ಸೈನ್ಸ್ ಸೊಸೈಟಿ (ಬಿಎಸ್ಎಸ್‌) ವತಿಯಿಂದ ಭಾನುವಾರ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರವೇಶ ದ್ವಾರದ ಬಳಿ ಸೇರಿದ್ದ ವಿಜ್ಞಾನಿಗಳು, ಸಂಶೋ ಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಖಾಸಗಿ ಕಂಪನಿ ಉದ್ಯೋಗಿಗಳು, ‘ನಾಗೇಶ್ವರ್‌ ರಾವ್ ಹಾಗೂ ಕಣ್ಣನ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

‘ಜಲಂಧರ್‌ನಲ್ಲಿ ನಡೆಯುತ್ತಿರುವ 106ನೇ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕುಲಪತಿ ಜಿ.ನಾಗೇಶ್ವರ್ ರಾವ್, ಒಬ್ಬ ತಾಯಿಯಿಂದ ನೂರು ಜನ ಕೌರವರು ಜನಿಸಿದ್ದರು. ಕೌರವರೇ ಮೊಟ್ಟಮೊದಲ ಟೆಸ್ಟ್ ಟ್ಯೂಬ್ ಬೇಬಿಗಳು. ನೂರು ಮಣ್ಣಿನ ಮಡಿಕೆಯಲ್ಲಿ ನೂರು ತತ್ತಿಗಳನ್ನು ಫಲ ನೀಡುವಂತೆ ಮಾಡಿದ್ದು ಆಗಿನ ಸಾಧನೆ’ ಎಂಬ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದರು.

‘ಕ್ಷಿಪಣಿ ತಂತ್ರಜ್ಞಾನ ಕೂಡಾ ರಾಮಾಯಣ ಕಾಲದಲ್ಲೇ ಗೊತ್ತಿತ್ತು. ವೈರಿಯನ್ನು ಬಡಿದು ವಾಪಸ್ ಬರುವ ಅಸ್ತ್ರಗಳನ್ನು ರಾಮ ಪ್ರಯೋಗಿಸಿದ್ದನ್ನು ಗಮನಿಸಬಹುದು. ರಾವಣ ಸುಮಾರು 24 ಬಗೆಯ ವಿಮಾನ ಆಕೃತಿಯನ್ನು ನಿರ್ಮಿಸಿದ್ದರು. ಶ್ರೀಲಂಕಾದಲ್ಲಿ ವಿಮಾನ ನಿಲ್ದಾಣಗಳ ಕುರುಹುಗಳು ಸಿಕ್ಕಿವೆ’ ಎಂದು ಸಹ ನಾಗೇಶ್ವರರಾವ್‌ ಹೇಳಿದ್ದರು. ಅವರು ತಮ್ಮ ಹೇಳಿಕೆಗಳಿಗೆ  ಯಾವುದೇ ಆಧಾರಗಳನ್ನು ಒದಗಿಸಿಲ್ಲ. ಜನರ ದಾರಿ ತಪ್ಪಿಸುವುದಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಸಮಾವೇಶದಲ್ಲಿ ಕಣ್ಣನ್ ಜಗತಾಳ್ ಕೃಷ್ಣನ್‌, ‘ಐನ್‌ಸ್ಟೀನ್ ಮತ್ತು ನ್ಯೂಟನ್‌ ಮಾಡಿದ್ದ ಆವಿಷ್ಕಾರಗಳೆಲ್ಲ ಸುಳ್ಳು. ಆ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಅವರಿಬ್ಬರ ವಾದಗಳು ಸುಳ್ಳು ಎಂಬುದು ಗೊತ್ತಾದರೆ, ಗುರುತ್ವಾಕರ್ಷಣೆ ಅಲೆಗಳಿಗೆ ನರೇಂದ್ರ ಮೋದಿ ಅಲೆಗಳು ಹಾಗೂ ಗುರುತ್ವಾಕರ್ಷಣೆಯ ಲೆನ್ಸಿಂಗ್ ಎಫೆಕ್ಟ್‌ಗೆ ಹರ್ಷವರ್ಧನ್ (ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ) ಎಫೆಕ್ಟ್ ಎಂದು ಮರುನಾಮಕರಣ ಮಾಡಬೇಕು’ ಎಂದು ಅಸಂಬದ್ಧ ಹೇಳಿಕೆ ನೀಡಿದ್ದಾರೆ’ ಎಂದು ದೂರಿದರು.  

ಬಿಎಸ್‌ಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಕುಮಾರ್, ಐಐಎಸ್ಸಿಯ ಪ್ರಾಧ್ಯಾಪಕ ಜಯಂತ್‌ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !