ಬುಧವಾರ, ಡಿಸೆಂಬರ್ 2, 2020
23 °C
ಕೆಐಎಡಿಬಿ: ತಲಾ ₹ 46 ಕೋಟಿಗಳ ಎರಡು ಕಾಮಗಾರಿ ವಿಲೀನ; ಮರು ಟೆಂಡರ್‌ ಪ್ರಕ್ರಿಯೆ ಶುರು

‘ಹಿತೈಷಿ’ಗಳಿಗಾಗಿ ಗುತ್ತಿಗೆ ಷರತ್ತು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಿತೈಷಿ’ಗಳಿಗೇ ಕಾಮಗಾರಿ ಗುತ್ತಿಗೆ ನೀಡಬೇಕು ಎಂಬ ಕಾರಣಕ್ಕೆ ಷರತ್ತುಗಳನ್ನೇ ಬದಲಾವಣೆ ಮಾಡಿ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಿದ ಪ್ರಕರಣ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿದೆ. 

ತುಮಕೂರು ಜಿಲ್ಲೆಯ ಶಿರಾದ ನಿರ್ಮಾಣ ಹಂತದಲ್ಲಿರುವ ಕೈಗಾರಿಕಾ ವಸಾಹತುವಿನ ರಸ್ತೆಗಳು, ಒಳಚರಂಡಿ, ನೀರು ಹರಿವಿನ ಕಾಲುವೆಗಳ ನಿರ್ಮಾಣ, ನೀರು ಪೂರೈಕೆ ಯೋಜನೆ ಸೇರಿದಂತೆ ಒಟ್ಟು 158 ಕಾಮಗಾರಿಗಳನ್ನು
ಅನುಷ್ಠಾನಗೊಳಿಸಲು ತಲಾ ₹46.50 ಕೋಟಿ ಮೊತ್ತದ ಎರಡು ಟೆಂಡರ್‌ಗಳನ್ನು ಸಿದ್ಧಪಡಿಸಿ, ಅರ್ಜಿ ಆಹ್ವಾನಿಸಲಾಗಿತ್ತು. ಅದನ್ನು ಏಕಾಏಕಿ ರದ್ದುಪಡಿಸಿ, ಎರಡು ಟೆಂಡರ್‌ಗಳನ್ನು ವಿಲೀನಗೊಳಿಸಿ ₹93 ಕೋಟಿ ಮೊತ್ತದ ಬೃಹತ್‌ ಟೆಂಡರ್ ಕರೆಯಲು ಮುಂದಾಗಿರುವುದು ಸಂಶಯಗಳಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳಿಂದಲೇ ವ್ಯಕ್ತವಾಗಿದೆ.

‘ತ್ವರಿತವಾಗಿ ಕೆಲಸ ಮುಗಿಯಬೇಕು ಎಂಬ ಕಾರಣಕ್ಕೆ ಎರಡು ಟೆಂಡರ್‌ಗಳನ್ನು ಕರೆಯಲಾಗಿತ್ತು. ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಹಾಗೂ ಮುಖ್ಯ ಎಂಜಿನಿಯರ್‌ ಹುದ್ದೆ ವಹಿಸಿಕೊಂಡ ಎಂ. ರಾಮ ಅವರು ಹಳೆಯ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಹೊಸ ಟೆಂಡರ್ ಕರೆಯಲು ಸೂಚಿಸಿದರು. ನಿರ್ದಿಷ್ಟ ಕಂಪನಿಗೆ ಗುತ್ತಿಗೆ ನೀಡುವ ಉದ್ದೇಶದಿಂದ ಈ ಬದಲಾವಣೆ ಮಾಡಿದ್ದಾರೆ ಎಂಬ ಅನುಮಾನ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿಗಳನ್ನು ವಿಭಜಿಸಿ ಮೂವರು ಅಥವಾ ನಾಲ್ವರಿಗೆ ನೀಡಿದರೆ ‘ಲಾಭಾಂಶ ವ್ಯವಹಾರ’ ಕಷ್ಟ. ಹೀಗಾಗಿ ದೊಡ್ಡ ಮೊತ್ತದ ಒಂದೇ ಟೆಂಡರ್‌ ಕರೆಯಲು ನಿರ್ಧರಿಸಿರುವ ಸಾಧ್ಯತೆ ಹೆಚ್ಚಿದೆ’ ಎಂದೂ ಅವರು ಸಂಶಯ
ವ್ಯಕ್ತಪಡಿಸಿದರು. 

ಹೊಸ ಷರತ್ತುಗಳ ಹೇರಿಕೆ:  ‘ಲಾಭ’ ನೀಡುವ ಆಪ್ತರಿಗೆ ಟೆಂಡರ್‌ ನೀಡಲು ನಿರ್ದಿಷ್ಟ ಷರತ್ತುಗಳನ್ನು ವಿಧಿಸುವ ಪದ್ಧತಿ ಲೋಕೋಪಯೋಗಿ ಇಲಾಖೆಯಲ್ಲಿದೆ.

ಕೆಐಎಡಿಬಿ ಟೆಂಡರ್‌ನಲ್ಲೂ ಇದನ್ನೇ ಅನುಸರಿಸಿದಂತೆ ಕಾಣುತ್ತಿದೆ. ಹಿಂದಿನ ವರ್ಷಗಳಲ್ಲಿ ಕನಿಷ್ಠ ಪ್ರಮಾಣದ ಕಾಮಗಾರಿ ನಿರ್ವಹಿಸಿರಬೇಕು ಎಂಬ ಷರತ್ತು ವಿಧಿಸುವುದು ಮಾಮೂಲು. ಆದರೆ, ಈ ಟೆಂಡರ್ ಕರೆಯುವಾಗ, ಹಿಂದೆ ನಿರ್ವಹಿಸಿದ ಕಾಮಗಾರಿಯ ಶೇ 60 ರಷ್ಟನ್ನು ಮೊತ್ತವನ್ನು ನಿರ್ಮಾಣ ಕಾಮಗಾರಿಗೆ ಅನಿವಾರ್ಯವಾದ ಮೂರ್ನಾಲ್ಕು ಸಾಮಗ್ರಿಗಳಿಗೇ ಬಳಸಿರ
ಬೇಕು ಎಂಬುದನ್ನು ಸೇರಿಸಿರುವುದು ಅನುಮಾನಕ್ಕೆ ಕಾರಣ.

ಹಿಂದಿನ ವರ್ಷಗಳಲ್ಲಿ ನಿರ್ವಹಿಸಿದ ಕಾಮಗಾರಿಗಳ ಪೈಕಿ 15 ವಿವಿಧ ಮಾದರಿಯ ಕಾಮಗಾರಿಗಳು ಶೇ 80 ರಷ್ಟಿರಬೇಕು ಎಂಬ ಹೆಚ್ಚುವರಿ ಷರತ್ತು ವಿಧಿಸಲಾಗಿದೆ. ಆಸ್ಪಾಟ್‌, ಎಚ್‌ಡಿಪಿಇ ಪೈಪ್‌, ಎಂ.ಎಸ್. ಪೈಪ್‌, ವಾಲ್ವ್, ಆರ್‌ಸಿಸಿ ರಿಂಗ್‌ಗಳ ಕಾಮಗಾರಿಗಳನ್ನು ನಿರ್ವಹಿಸಿರಬೇಕು ಎಂದು ಷರತ್ತುಗಳಲ್ಲಿ ಸೇರಿಸುವ ಮೂಲಕ ನಿರ್ದಿಷ್ಟ ಗುತ್ತಿಗೆದಾರರನ್ನು ಆಯ್ಕೆ ಮಾಡುವ ದಾರಿ ಹೆಣೆಯಲಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್‌ ಅವರಿಗೆ ಕರೆ ಮಾಡಿದರೂ, ಸಂದೇಶ ಕಳುಹಿಸಿದರೂ ಅವರು ಸಂಪರ್ಕಕ್ಕೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು