ಶುಕ್ರವಾರ, ಸೆಪ್ಟೆಂಬರ್ 25, 2020
28 °C
ಮಡಿಕೇರಿಯಲ್ಲಿ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ, ಸಾಮರಸ್ಯ ನಡಿಗೆ, ವಿವಿಧ ಮುಖಂಡರು ಭಾಗಿ

ಜಾತಿ ವಿಜೃಂಭಣೆ: ಸ್ವಾಮೀಜಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ನಾವೆಲ್ಲರೂ ಒಂದೇ ಎನ್ನುವ ಭಾವನೆ ಸಮಾಜದಲ್ಲಿ ದೂರವಾಗಿ ಜಾತೀಯತೆ ವಿಜೃಂಭಿಸುತ್ತಿದೆ’ ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ನಗರದ ಕಾವೇರಿ ಹಾಲ್‌ನಲ್ಲಿ ಸೋಮವಾರ ಸಹಮತ ವೇದಿಕೆ ಆಶ್ರಯದಲ್ಲಿ ನಡೆದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾತು ಮತ್ತು ವಿವೇಕ ಯಾವಾಗಲೂ ಎಚ್ಚರವಿರಬೇಕು. ಮಾತಿಗೆ ಮೌಲ್ಯ ತಂದುಕೊಡಬೇಕು. ನುಡಿದಂತೆ ನಡೆಯಬೇಕು; ಮಾತು ಮತ್ತು ಕೃತಿಯ ಮಧ್ಯೆ ಹೊಂದಾಣಿಕೆ ಇರಬೇಕು’ ಎಂದು ಪ್ರತಿಪಾದಿಸಿದರು.

‘ಮಾತು ಮತ್ತು ಕೃತಿಯ ನಡುವೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಸಮಸ್ಯೆಗಳು ಸೃಷ್ಟಿ ಆಗಲಿವೆ. 12ನೇ ಶತಮಾನದಲ್ಲಿ ಶರಣರು ಬುದ್ಧಿಯನ್ನು ವಿವೇಕವನ್ನಾಗಿ ಮಾಡಿ ಸಮಾಜ ಕಟ್ಟಿದ್ದರು. ಎಲ್ಲರನ್ನು ತಮ್ಮವರೆಂದು ಅಪ್ಪಿಕೊಳ್ಳಬೇಕು. ಸಮಸ್ಯೆಗಳನ್ನು ವಿವೇಕದಿಂದ ಪರಿಹಾರ ಮಾಡಿಕೊಳ್ಳಬೇಕು. ಆದರೆ, ಅದ್ಯಾವುದೂ ಆಗುತ್ತಿಲ್ಲ. ಜಾತಿ ವಿಜೃಂಭಿಸುತ್ತಿದೆ’ ಎಂದು ನುಡಿದರು.

‘ಆಸೆಗೆ ಮಿತಿ ಇರಬೇಕು. ಹಣದಿಂದ ನೆಮ್ಮದಿ, ಶಾಂತಿ ಸಿಗುವುದಿಲ್ಲ. ಸಂಪತ್ತಿನ ಹಿಂದೆ ಓಡುತ್ತಿದ್ದೇವೆ. ಸಂಪತ್ತು ಬೇಕು. ಆದರೆ, ಅತಿಯಾಗಿ ಗಳಿಸಬಾರದು. ವೈಜ್ಞಾನಿಕ ವಿಚಾರಗಳನ್ನು ಬಿತ್ತಬೇಕು’ ಎಂದು ಸ್ವಾಮೀಜಿ ನುಡಿದರು.

ಉಪನ್ಯಾಸ: ‘ವಚನ ಚಳವಳಿ ವೈಶಿಷ್ಟ್ಯ’ ಕುರಿತು ಚಿಂತಕ ಜಿ.ಎನ್‌.ನಾಗರಾಜ್‌ ಮಾತನಾಡಿ, ‘ಮತ್ತೆ ಕಲ್ಯಾಣ ದೇಶಕ್ಕೆ ಮಹತ್ವದ್ದು. ಜಾತಿ ವ್ಯವಸ್ಥೆಯ ಅಸಮಾನತೆ ತೊಡೆದು ಹಾಕುವುದೇ ಇದರ ಆಶಯ’ ಎಂದು ನುಡಿದರು.

‘ಕಾಯ ಮತ್ತು ಕಾಯಕದ ನಡುವಿನ ತತ್ವವನ್ನೇ ವಚನಕಾರರು ವಚನಗಳಲ್ಲಿ ನುಡಿದಿದ್ದಲ್ಲದೇ ನಡೆದು ತೋರಿದರು. ತಾವು ಮಾಡುವ ಕಾಯಕವನ್ನೇ ಆಧಾರವಾಗಿ ಇಟ್ಟುಕೊಂಡು ಬಿಡಿ ಬಿಡಿಯಾಗಿ ವರ್ಣಿಸಿದ್ದಾರೆ. ಇಂಥ ವರ್ಣನೆ ಆಧ್ಯಾತ್ಮಿಕ ಸಂಗತಿ ಜೊತೆ ಬೆಸೆದಿದ್ದಾರೆ. ಜಗತ್ತಿನಲ್ಲಿ ಇಂತಹ ವೈಚಾರಿಕ ನಡೆ, ನುಡಿ ಎಲ್ಲೂ ಸಿಗಲು ಸಾಧ್ಯವಿಲ್ಲ’ ಎಂದರು.

‘ಇಂದಿನ ಅಗತ್ಯ– ಬಸವ ತತ್ವ’ ಕುರಿತು ಚಿಂತಕಿ ಡಾ.ಕೆ.ಷರೀಫಾ ಮಾತನಾಡಿ, ‘ವಚನ ಚಳವಳಿ ಕಟ್ಟಿದವರು ಸೂಫಿಗಳು ಮತ್ತು ಸಂತರು. 900 ವರ್ಷಗಳಾದರೂ ಅವರ ಆಶಯ ಈಡೇರಿಲ್ಲ. ಮೌಢ್ಯಗಳು ಇನ್ನೂ ವಿಜೃಂಭಿಸುತ್ತಿವೆ’ ಎಂದು ವಿಷಾದಿಸಿದರು.

ಮಾನವೀಯ ಮೌಲ್ಯ ಮರು ಸ್ಥಾಪನೆ ಆಗಲಿ: ‘ದಲಿತರು, ಮಹಿಳೆಯರು ಹಾಗೂ ಮುಸ್ಲಿಮರನ್ನು ಅಪರಾಧಿಗಳಂತೆ ಕಾಣಲಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ಮರುಸ್ಥಾಪನೆ ಮಾಡುವುದು ತುರ್ತು ಅಗತ್ಯ’ ಎಂದು ಚಿಂತಕಿ ಪ್ರತಿಪಾದಿಸಿದರು. 

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಇದೊಂದು ಅದ್ಭುತ ಕಾರ್ಯ. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು, ಶರಣರ ವಿಚಾರ ಅರಿಯುತ್ತಿರುವುದು ಸಂತೋಷದ ಸಂಗತಿ. ರಾಜಕೀಯೇತರವಾಗಿ ಆಡಳಿತ ನಡೆಯಬೇಕು. ಮತದಾರರನ್ನು ವೋಟ್‌ಬ್ಯಾಂಕ್‌ ಆಗಿ ಮಾತ್ರ ನೋಡಬಾರದು’ ಎಂದು ಎಚ್ಚರಿಸಿದರು. 

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಸದಾಶಿವ ಸ್ವಾಮೀಜಿ, ಮಹಮ್ಮದ್ ರಫಿ, ಮೌಲಾನ ಅಬ್ದುಲ್ ಹಕೀಂ, ಮಹಾಂತ ಸ್ವಾಮೀಜಿ,  ಜೋಸೆಫ್, ಶಿವಪ್ಪ, ಯಾಕೂಬ್, ಬೇಬಿ ಮ್ಯಾಥ್ಯು, ಟಿ.ಪಿ.ರಮೇಶ್‌, ಮುನೀರ್‌ ಅಹಮದ್‌, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಮಹೇಶ್‌ ಹಾಜರಿದ್ದರು. ಶಿವಸಂಚಾರದ ಕಲಾವಿದರು ವಚನಗೀತೆ ಹಾಡಿದರು. ಕೊಡಗಿನ ಅಕ್ಕನ ಬಳಗದ ಸದಸ್ಯರು ವಚನ ಪ್ರಾರ್ಥನೆ ನಡೆಸಿಕೊಟ್ಟರು.

ನಡಿಗೆ: ಸಾಮರಸ್ಯ ನಡಿಗೆ ಮಹದೇವಪೇಟೆ ಬಸವೇಶ್ವರ ದೇವಾಲಯದಿಂದ ಆರಂಭವಾಗಿ ಕಾವೇರಿ ಹಾಲ್‌ಗೆ ಬಂದು ತಲುಪಿತು, ಮಳೆಯ ನಡುವೆಯೂ ಸ್ತಬ್ಧಚಿತ್ರಗಳೊಂದಿಗೆ ವಿವಿಧ ಧರ್ಮದ ಗುರುಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಸಾಗಿ ಬಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು