ಎಲಿವೇಟೆಡ್‌ ಕಾರಿಡಾರ್‌: ದ್ವಿಚಕ್ರ ವಾಹನ, ಆಟೊಗಳಿಗೆ ಪ್ರವೇಶವಿಲ್ಲ!

ಭಾನುವಾರ, ಮೇ 26, 2019
30 °C
ಜನರ ಮನವೊಲಿಕೆಗೆ ಕೆಆರ್‌ಡಿಸಿಎಲ್‌ ಹರಸಾಹಸ

ಎಲಿವೇಟೆಡ್‌ ಕಾರಿಡಾರ್‌: ದ್ವಿಚಕ್ರ ವಾಹನ, ಆಟೊಗಳಿಗೆ ಪ್ರವೇಶವಿಲ್ಲ!

Published:
Updated:

ಬೆಂಗಳೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್‌ಡಿಸಿಎಲ್‌) ನಗರದಲ್ಲಿ ನಿರ್ಮಿಸಲಿರುವ ಎಲಿವೇಟೆಡ್‌ ಕಾರಿಡಾರ್‌ನಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

‘ಕಾರಿಡಾರ್‌ನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್‌.ಶಿವಕುಮಾರ್‌ ತಿಳಿಸಿದ್ದಾರೆ.

ಕಾರಿಡಾರ್‌ನಲ್ಲಿ ‘ತಡೆರಹಿತ ಸಂಚಾರ ವ್ಯವಸ್ಥೆ’ ಕಲ್ಪಿಸುವುದಾಗಿ ನಿಗಮ ಈ ಹಿಂದೆ ಹೇಳಿಕೊಂಡಿತ್ತು. ಅದರರ್ಥ ಈ ಕಾರಿಡಾರ್‌ನಲ್ಲಿ ‘ಸಂಚಾರ ಸಿಗ್ನಲ್‌’ ವ್ಯವಸ್ಥೆ ಇರುವುದಿಲ್ಲ ಎಂದು ಭಾವಿಸಿದರೆ ತಪ್ಪಾದೀತು. ಏಕೆಂದರೆ, ಇದರಲ್ಲೂ ವಾಹನಗಳು ಸಿಗ್ನಲ್‌ಗಳನ್ನು ದಾಟಿಕೊಂಡು ಮುಂದೆ ಹೋಗಬೇಕು.

‘ಕಾರಿಡಾರ್‌ನಲ್ಲಿ ಸಿಗ್ನಲ್‍ಗಳ ಸಂಖ್ಯೆ ಕಡಿಮೆ ಇರಲಿವೆ. ಅಡೆತಡೆಗಳು ಕಡಿಮೆ ಇರುವುದರಿಂದ ವಾಹನಗಳು ದಟ್ಟಣೆಯಲ್ಲಿ ಸಿಲುಕುವುದು ತಪ್ಪುತ್ತದೆ. ಸಂಚಾರದ ಅವಧಿಯೂ ಕಡಿಮೆ ಆಗಲಿದೆ. ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥ ಇರಲಿದೆ. ವಾಯುಮಾಲಿನ್ಯ ಕಡಿಮೆಗೊಳಿಸಲು ಇದು ನೆರವಾಗಲಿದೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಸಂಚಾರ ದಟ್ಟಣೆ ನಿವಾರಣೆ ಹಾಗೂ ಪ್ರಯಾಣ ಸಮಯವನ್ನು ಕಡಿಮೆ ಮಾಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಅನುಷ್ಠಾನಗೊಳಿಸಲಿದ್ದೇವೆ. ಸಬ್‌ಅರ್ಬನ್‌ ರೈಲು, ನಮ್ಮ ಮೆಟ್ರೊ ಜಾಲ, ಮೇಲ್ಸೇತುವೆಗಳು, ರೈಲ್ವೆ ಮೇಲ್ಸೇತುವೆ ಮತ್ತು ವರ್ತುಲ ರಸ್ತೆಗಳನ್ನು ಗಣನೆಗೆ ತೆಗೆದುಕೊಂಡೇ ಈ ಯೋಜನೆ ರೂಪಿಸಲಾಗಿದೆ’ ಎಂದರು.  

ಕಾರುಗಳಿಗೆ ಹೆಚ್ಚು ಅನುಕೂಲ: ‘ನಗರದಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳದೇ ಇರಲು ಸಾಧ್ಯವಿಲ್ಲ. ಪ್ರಸ್ತುತ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ ತಲುಪಲು ಸರಾಸರಿ 100 ನಿಮಿಷ ಹಾಗೂ ಹೆಬ್ಬಾಳದಿಂದ ಲಾಲ್‍ಬಾಗ್ ನಡುವಿನ 15 ಕಿ.ಮೀ ದೂರ ಕ್ರಮಿಸಲು ಸರಾಸರಿ 1 ಗಂಟೆ ಬೇಕಾಗುತ್ತದೆ. ದಟ್ಟಣೆ ಅವಧಿಯಲ್ಲಿ ಇದು ಇನ್ನೂ ಹೆಚ್ಚಾಗುತ್ತದೆ. ಆದರೆ, ಕಾರಿಡಾರ್‌ನಲ್ಲಿ ಬಹುಪಥಗಳ ವ್ಯವಸ್ಥೆ ಇರುವುದರಿಂದ ದಟ್ಟಣೆ ಕಡಿಮೆ ಆಗಲಿದೆ’ ಎಂದು ತಿಳಿಸಿದರು.

‘ಈ ಕಾರಿಡಾರ್‌ ಪೂರ್ಣಗೊಂಡ ಬಳಿಕ ನಗರದ ಯಾವುದೇ ಭಾಗವನ್ನು ತಲುಪಲು ಕೇವಲ 45 ನಿಮಿಷ ಸಾಕು. ಕಾಮಗಾರಿ ಪೂರ್ಣಗೊಂಡ ಬಳಿಕ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್  ತಲುಪಲು 35 ನಿಮಿಷ ಸಾಕು. ಕೆ.ಆರ್.ಪುರದಿಂದ ಯಶವಂತಪುರಕ್ಕೆ 30 ನಿಮಿಷದಲ್ಲಿ ಮತ್ತು ವರ್ತೂರು ಕೋಡಿಯಿಂದ ಲಾಲ್‍ಬಾಗ್‍ಗೆ 20 ನಿಮಿಷದಲ್ಲಿ ಪ್ರಯಾಣಿಸಬಹುದು’ ಎಂದು ವಿವರಿಸಿದರು.

‘ಕಾರಿಡಾರ್‌ನಲ್ಲಿ ಬಸ್ ಸಂಚಾರಕ್ಕೆ ಪ್ರತ್ಯೇಕ ಪಥ ಮತ್ತು ಪ್ರತಿ 3 ಕಿ.ಮೀ ದೂರಕ್ಕೆ ಒಂದರಂತೆ ಬಸ್‌ ನಿಲ್ದಾಣ ಇರುತ್ತದೆ. ಇದು ಸಮಯ ಉಳಿತಾಯದ ಜತೆಗೆ ಜೀವರಕ್ಷಕ ಕಾರಿಡಾರ್‌ ಆಗಲಿದೆ’ ಎಂದರು.  ಈ ಯೋಜನೆಗೆ ಹೈಕೋರ್ಟ್‌ ತಡೆ ನೀಡಿದೆ. ಈ ನಡುವೆ ನಿಗಮವು ಈ ಯೋಜನೆ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡುವ ಕಸರತ್ತು ಆರಂಭಿಸಿದೆ.

‘ತಡೆಯಾಜ್ಞೆ ತೆರವುಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಜನರೂ ಈ ಯೋಜನೆಯನ್ನು ಒಪ್ಪುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಪ್ರಯಾಣದ ಅವಧಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಕಾರಿಡಾರ್‌’

ಎಲಿವೇಟೆಡ್‌ ಕಾರಿಡಾರ್‌ ವಾಹನ ಸಂಚಾರದ ಅವಧಿಯನ್ನು ಕಡಿಮೆಗೊಳಿಸಲಿದೆ ಎಂಬ ಕೆಆರ್‌ಡಿಸಿಎಲ್‌ ವಾದವನ್ನು ಸಾರಿಗೆ ತಜ್ಞರು ಸಾರಾಸಗಟಾಗಿ ತಿರಸ್ಕರಿಸುತ್ತಾರೆ.

‘ಇದು ಸಂಚಾರದ ಅವಧಿಯನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚಿಸಲಿದೆ’ ಎಂದು ಐಐಎಸ್ಸಿಯ ಸಾರಿಗೆ ವ್ಯವಸ್ಥೆ ಎಂಜಿನಿಯರಿಂಗ್‌ ವಿಭಾಗದ ಸಹಪ್ರಾಧ್ಯಾಪಕ ಪ್ರೊ.ಆಶಿಶ್‌ ವರ್ಮ ಅಭಿಪ್ರಾಯಪಟ್ಟರು.

ರ‍್ಯಾಂಪ್‌ ಬಳಿ ವಾಹನ ಸಾಲು: ‘ಬೇಗ ತಲುಪಬಹುದು ಎಂಬ ಭ್ರಮೆಯಿಂದ ಹೆಚ್ಚಿನವರು ಎಲಿವೇಟೆಡ್‌ ಕಾರಿಡಾರ್‌ ಬಳಸಲು ಮುಂದಾಗುತ್ತಾರೆ. ಇದರ ಪರಿಣಾಮವಾಗಿ ಈ ಕಾರಿಡಾರ್‌ನ ರ‍್ಯಾಂಪ್‌ಗಳ ಬಳಿಯೇ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಲಿದೆ. ಇದರಿಂದ ಪ್ರಯಾಣದ ಅವಧಿ ಮತ್ತಷ್ಟು ಹೆಚ್ಚಲಿದೆ’ ಎಂದು ಅವರು ವಿಶ್ಲೇಷಿಸಿದರು.

‘ಎಲಿವೇಟೆಡ್‌ ಕಾರಿಡಾರ್‌ ಎಂಬುದೇ ಒಂದು ಹುಚ್ಚು ಪರಿಕಲ್ಪನೆ. ಇದರಲ್ಲಿ ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಪಥವನ್ನು ಕಾಯ್ದಿರಿಸುವುದಾಗಿ ಹಾಗೂ ಪ್ರತಿ ಮೂರು ಕಿಲೊ ಮೀಟರ್‌ಗೆ ಒಂದರಂತೆ ಬಸ್‌ನಿಲ್ದಾಣ ನಿರ್ಮಿಸುವುದಾಗಿ ಕೆಆರ್‌ಡಿಸಿಎಲ್ ಹೇಳುತ್ತಿದೆ. ಇಷ್ಟು ದೂರಕ್ಕೆ ಒಂದು ಬಸ್‌ನಿಲ್ದಾಣ ಕಾರ್ಯಸಾಧುವಲ್ಲ. ಪ್ರಯಾಣಿಕರು ಕಾರಿಡಾರ್‌ ಮೇಲೆ ಹತ್ತಲಿಕ್ಕೆ ಹಾಗೂ ಇಳಿಯಲಿಕ್ಕೆ ಏನು ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಪ್ರಶ್ನಿಸುತ್ತಾರೆ ಅವರು.

‘ಕಾರಿಡಾರ್‌ನಲ್ಲಿ ಬಸ್‌ಗಳಿಗೆ ಪ್ರತ್ಯೇಕ ಪಥವೂ ಕಣ್ಣೊರೆಸುವ ತಂತ್ರ. ಜನರು ಬಳಸುವುದಿಲ್ಲ ಎಂಬ ನೆಪ ಹೇಳಿ ಇದನ್ನೂ ನಿಗಮದವರು ರದ್ದುಪಡಿಸಲಿದ್ದಾರೆ’ ಎಂದರು.

‘ಇಂತಹ ಯೋಜನೆಗಳನ್ನು ರೂಪಿಸುವವರು ನಗರ ಸಾರಿಗೆ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಳ್ಳುವ ಪ್ರಯತ್ನವನ್ನೇ ನಡೆಸಿಲ್ಲ. ಈ ಯೋಜನೆಯಿಂದ ವಾಹನ ದಟ್ಟಣೆ ಕಡಿಮೆ ಆಗುತ್ತದೆ, ಪ್ರಯಾಣದ ಅವಧಿಯಲ್ಲಿ ಇಳಿಕೆಯಾಗುತ್ತದೆ, ವಾಯು ಮಾಲಿನ್ಯ ಕ್ಷೀಣಿಸುತ್ತದೆ ಎಂಬುದೆಲ್ಲ ವಾಸ್ತವಕ್ಕೆ ದೂರವಾದವು’ ಎಂದರು. 

‘2 ಮೀಟರ್‌ಗೆ ಒಂದು ಕಾರು’

‘ವಿಶ್ವದ ಪ್ರಮುಖ ನಗರಗಳ ವಾರ್ಷಿಕ ಅಭಿವೃದ್ಧಿ ದರದ ಸರಾಸರಿ ಶೇ 2.8ರಷ್ಟಿದ್ದರೆ, ಬೆಂಗಳೂರು ಶೇ 8.5 ರಷ್ಟು ಬೆಳವಣಿಗೆ ಕಾಣುತ್ತಿದೆ. ಪ್ರತಿ ಕಿ.ಮೀ ರಸ್ತೆಯಲ್ಲಿ 500ಕ್ಕೂ ಹೆಚ್ಚು ಕಾರುಗಳಿವೆ. ಅಂದರೆ ಪ್ರತಿ 2 ಮೀಟರ್‌ಗೆ ಒಂದು ಕಾರು ಇರುತ್ತದೆ. ಇದು ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ದೈತ್ಯ ಸಮಸ್ಯೆ ಬಗೆಹರಿಸಲು ಎಲಿವೇಟೆಡ್‌ ಕಾರಿಡಾರ್‌ನಂತಹ ಯೋಜನೆ ಅಗತ್ಯವಿದೆ’ ಎಂದು ಶಿವಕುಮಾರ್‌ ಪ್ರತಿಪಾದಿಸಿದರು.

* ಕಾರಿಡಾರ್‌ ಯೋಜನೆ ಬಗ್ಗೆ ಜನಾಭಿಪ್ರಾಯ ಪಡೆಯುವ ಉದ್ದೇಶ ಸದ್ಯಕ್ಕಿಲ್ಲ. ಈ ಯೋಜನೆಯ ಅಗತ್ಯದ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಿದ್ದೇವೆ

- ಬಿ.ಎಸ್.ಶಿವಕುಮಾರ್‌, ವ್ಯವಸ್ಥಾಪಕ ನಿರ್ದೇಶಕ, ಕೆಆರ್‌ಡಿಸಿಎಲ್‌

* ಇಷ್ಟೆಲ್ಲ ಮೇಲ್ಸೇತುವೆಗಳನ್ನು ನಿರ್ಮಿಸಿದ ಬಳಿಕವೂ ಸಂಚಾರ ಸಮಸ್ಯೆಗಳು ಬಗೆಹರಿದಿವೆಯೇ ಎಂದು ಪರಾಮರ್ಶಿಸಿದರೆ ಸಾಕು. ನಿಗಮದವರು ಹೊಸ ಕತೆ ಹೆಣೆಯುವುದರಲ್ಲಿ ಅರ್ಥವಿಲ್ಲ

- ಪ್ರೊ.ಆಶಿಶ್‌ ವರ್ಮ, ಸಾರಿಗೆ ತಜ್ಞ, ಐಐಎಸ್ಸಿ

ಅಂಕಿ ಅಂಶ

87.87 ಕಿ.ಮೀ

ಎಲಿವೇಟೆಡ್‍ ಕಾರಿಡಾರ್‌ನ ಉದ್ದ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !