ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಗೆ ಸಂಯೋಜಕರ ನೇಮಕ

ಕುಂದಗೋಳ ಉಪ ಚುನಾವಣೆ ಗೆಲ್ಲಲು ಡಿ.ಕೆ. ಶಿವಕುಮಾರ್ ತಂತ್ರ
Last Updated 8 ಮೇ 2019, 15:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಹೊರವಲಯದ ರೆಸಾರ್ಟ್‌ನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಬುಧವಾರ ಸುಧೀರ್ಘ ಸಭೆ ನಡೆಸಿದ ಸಚಿವ ಡಿ.ಕೆ. ಶಿವಕುಮಾರ್ ಕುಂದಗೋಳ ಉಪ ಚುನಾವಣೆಯ ಗೆಲುವಿಗೆ ರಣತಂತ್ರ ರೂಪಿಸಿದರು.

ಬೂತ್‌ ಮಟ್ಟದಲ್ಲಿ ಲೀಡ್‌ (ಹೆಚ್ಚಿನ ಮತ) ತಂದವರೇ ಲೀಡರ್ ಎಂದು ಮಂಗಳವಾರವಷ್ಟೇ ಕಾರ್ಯಕರ್ತರನ್ನು ಹುರಿದುಂಬಿಸಿದ್ದ ಅವರು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಸಂಯೋಜಕರನ್ನು ನೇಮಕ ಮಾಡಿದ್ದಾರೆ. ಸಂಯೋಜಕರ ಉಸ್ತುವಾರಿಯನ್ನು ಶಾಸಕರು ಹಾಗೂ ಮಾಜಿ ಶಾಸಕರಿಗೆ ವಹಿಸಲಾಗಿದೆ.

ಸಂಯೋಜಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ಕೊಡಿಸಿದರೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಸಹ ಘೋಷಿಸಿದರು. ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಅವರು ಸೂಚನೆ ನೀಡಿದರು.

‘ಚುನಾವಣೆ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರಿಗೆ ಎಲ್ಲ ಜವಾಬ್ದಾರಿ ವಹಿಸಲಾಗಿದೆ. ಈ ಸಭೆಗೆ ಕೆಲವು ಮುಖಂಡರು ಬಂದಿಲ್ಲ. ಬಂದವರಿಗೆ ಜವಾಬ್ದಾರಿ ವಹಿಸಿ ಪ್ರಚಾರಕ್ಕೆ ಕಳುಹಿಸಲಾಗಿದೆ. ಕಾರ್ತಕರ್ತರನ್ನು ಇಟ್ಟುಕೊಂಡೇ ಈ ಚುನಾವಣೆ ಮಾಡಲಾಗುತ್ತದೆ. ಕುಂದಗೋಳದಲ್ಲಿ ಒಳ್ಳೆಯ ಜನರಿದ್ದಾರೆ. ಪರಿಶ್ರಮಪಟ್ಟರೆ ಪ್ರತಿಫಲ ಸಿಗುತ್ತದೆ’ ಎಂದು ಶಿವಕುಮಾರ್ ತಿಳಿಸಿದರು.

6 ಜಿಲ್ಲಾ ಪಂಚಾಯತಿ 22 ತಾಲ್ಲೂಕು ಪಂಚಾಯ್ತಿ, 40 ಗ್ರಾಮ ಪಂಚಾಯಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಉಸ್ತುವಾರಿಗಳಾದ ಸಚಿವರಾದ ಯು.ಟಿ ಖಾದರ್, ಆರ್.ಬಿ ತಿಮ್ಮಾಪುರ, ಜಮೀರ್ ಅಹ್ಮದ್‌ ಖಾನ್, ಶಿವಾನಂದ ಪಾಟೀಲ್, ಶಿವಶಂಕರ್ ರೆಡ್ಡಿ, ಎಮ್.ಟಿ.ಬಿ ನಾಗರಾಜ್ ಈಗಾಗಲೇ ಪ್ರಚಾರ ನಡೆಸುತ್ತಿದ್ದಾರೆ.

ಸುದೀರ್ಘ ಸಭೆ: ಸುದೀರ್ಘ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು ಮಧ್ಯಾಹ್ನ ರೆಸಾರ್ಟ್‌ನಲ್ಲಿಯೇ ರೊಟ್ಟಿ ಊಟ ಸವಿದರು. ‘ದೆಹಲಿಗೆ ಬರುವಂತೆ ಹೈಕಮಾಂಡ್‌ನಿಂದ ಕರೆ ಬಂದಿತ್ತು. ಆದರೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿರುವುದರಿಂದ ಬರಲು ಆಗದು ಎಂದು ಹೇಳಿದೆ’ ಎಂದರು.

ಡಿ.ಕೆ. ಶಿವಕುಮಾರ್ ಅವರನ್ನು ಕುಂದಗೋಳ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದ್ದರಿಂದ ಸಚಿವ ಸತೀಶ ಜಾರಕಿಹೊಳಿ ಅವರು ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಆ ಇಬ್ಬರೂ ನಾಯಕರು ಅಕ್ಕಪಕ್ಕದಲ್ಲಿ ಕುಳಿತು ಚುನಾವಣಾ ತಂತ್ರ ರೂಪಿಸಿ ಅಸಮಾಧಾನ ಇಲ್ಲ ಎಂಬ ಸಂದೇಶ ನೀಡಲು ಪ್ರಯತ್ನಿಸಿದರು.

ಶಾಸಕಿ ಅಂಜಲಿ ನಿಂಬಾಳ್ಕರ್, ಪ್ರಸಾದ್ ಅಬ್ಬಯ್ಯ, ಎಐಸಿಸಿ ಪ್ರತಿನಿಧಿ ಮಾಣಿಕ್ಯಂ ಟ್ಯಾಗೋರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT