ಸೋಮವಾರ, ಮಾರ್ಚ್ 27, 2023
23 °C
ಲಕ್ಷ್ಮಣ ಹತ್ಯೆ ಪ್ರಕರಣ: ರೌಡಿ ಆಕಾಶ್ ಬಂಧನ

ಮತ್ತೆ ಸದ್ದು ಮಾಡಿದ ಪೊಲೀಸರ ಪಿಸ್ತೂಲ್: ಮತ್ತೊಬ್ಬ ಆರೋಪಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಹತ್ಯೆ ಸಂಬಂಧ ರೌಡಿಗಳಾದ ಕ್ಯಾಟ್ ರಾಜ್ ಹಾಗೂ ಹೇಮಂತ್‌ನನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದ ಸಿಸಿಬಿ ಪೊಲೀಸರು, ಇದೀಗ ರೌಡಿ ಆಕಾಶ್‌ ಅಲಿಯಾಸ್ ಮಳೆರಾಯನ ಮೇಲೂ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

‘ಕೊಲೆ, ಕೊಲೆಗೆ ಯತ್ನ ಹಾಗೂ ದರೋಡೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಆಕಾಶ್, ಲಕ್ಷ್ಮಣನ ಹತ್ಯೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆತನನ್ನು ಲಕ್ಷ್ಮಣನ ಹತ್ಯೆ ಪ್ರಕರಣದ 9ನೇ ಆರೋಪಿಯನ್ನಾಗಿ ಬಂಧಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ
‘ಕ್ಯಾಟ್ ರಾಜ್ ಹಾಗೂ ಹೇಮಂತ್‌ ಜೊತೆಯಲ್ಲಿ ಆಕಾಶ್ ಸಹ ಲಕ್ಷ್ಮಣನಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದ. ಹತ್ಯೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಆತ, ಬುಧವಾರ ನಸುಕಿನಲ್ಲಿ ಉತ್ತರಹಳ್ಳಿ ಬಳಿ ಕಾಣಿಸಿಕೊಂಡಿದ್ದ’ ಎಂದು ಅಧಿಕಾರಿ ಹೇಳಿದರು.

‘ಆರೋಪಿಯ ಮಾಹಿತಿ ಪಡೆದಿದ್ದ ಸಿಸಿಬಿ ಇನ್‌ಸ್ಪೆಕ್ಟರ್ ಮುರುಗೇಂದ್ರಯ್ಯ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ನಿರ್ಜನ ಪ್ರದೇಶದಲ್ಲಿ ಅವಿತುಕೊಂಡಿದ್ದ ಆರೋಪಿ, ಪೊಲೀಸರನ್ನು ನೋಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಹಿಡಿಯಲು ಹೋಗಿದ್ದ ಹೆಡ್‌ ಕಾನ್‌ಸ್ಟೆಬಲ್‌ ಅರುಣ್‌ಕುಮಾರ್ ಮೇಲೆಯೇ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಮುರುಗೇಂದ್ರಯ್ಯ, ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದರು’ ಎಂದರು.

‘ಸ್ಥಳದಲ್ಲೇ ಕುಸಿದು ಬಿದ್ದ ಆರೋಪಿಯನ್ನು ಪೊಲೀಸರೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯಿಂದ ಹಲ್ಲೆಗೀಡಾಗಿರುವ ಹೆಡ್‌ ಕಾನ್‌ಸ್ಟೆಬಲ್‌ ಅವರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಅಧಿಕಾರಿ ಹೇಳಿದರು.

ಹೆಸರು ಮಾಡಲು ಹತ್ಯೆ
‘ಚನ್ನಪಟ್ಟಣದ ಆಂಬೊಡೆ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಆಕಾಶ್, ರೌಡಿ ಹೇಮಂತ್‌ನ ಸಹಚರನಾಗಿ ಗುರುತಿಸಿಕೊಂಡಿದ್ದ. ಬೆಂಗಳೂರಿನ ದೊಡ್ಡ ರೌಡಿಯನ್ನು ಕೊಂದು ಹೆಸರು ಮಾಡುವ ಹುಚ್ಚು ಅವನಿಗಿತ್ತು. ಅದೇ ಕಾರಣಕ್ಕೆ ಲಕ್ಷ್ಮಣನ ಹತ್ಯೆಗೆ ಕೈ ಜೋಡಿಸಿದ್ದ. ಆ ಬಗ್ಗೆ ಆತನೇ ಹೇಳಿಕೊಂಡಿದ್ದಾನೆ’ ಎಂದು ಅಧಿಕಾರಿ ತಿಳಿಸಿದರು.

‘ಪ್ರಕರಣದ ಪ್ರಮುಖ ಆರೋಪಿಗಳಾದ ರೂಪೇಶ್ ಹಾಗೂ ವರ್ಷಿಣಿ, ಹತ್ಯೆ ಬಳಿಕ ಏನೇ ಬಂದರೂ ನೋಡಿಕೊಳ್ಳುವುದಾಗಿ ಇತರೆ ಆರೋಪಿಗಳಿಗೆ ಭರವಸೆ ನೀಡಿದ್ದರು. ಅದೇ ಧೈರ್ಯದಿಂದ ಆರೋಪಿಗಳು, ಮಚ್ಚ ಅಲಿಯಾಸ್ ಕೃಷ್ಣಮೂರ್ತಿ ಕೊಲೆಗೆ ಪ್ರತೀಕಾರವಾಗಿ ಲಕ್ಷ್ಮಣನನ್ನು ಹತ್ಯೆ ಮಾಡಿದ್ದಾರೆ’ ಎಂದರು.

ಹೋಟೆಲ್ ಸಿಬ್ಬಂದಿ ವಿಚಾರಣೆ
ಹತ್ಯೆಗೂ ಮುನ್ನ ಲಕ್ಷ್ಮಣ, ಆರ್.ಜಿ. ಪ್ಯಾಲೇಸ್ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದ. ಅದು ಏಕೆ? ಎಂಬುದನ್ನು ತಿಳಿದುಕೊಳ್ಳಲು ಸಿಸಿಬಿ ಪೊಲೀಸರು, ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

‘ಆಗಾಗ ಹೋಟೆಲ್‌ಗೆ ಕರೆ ಮಾಡುತ್ತಿದ್ದ ಲಕ್ಷ್ಮಣ, ರಾಜಕಾರಣಿಯೊಬ್ಬರ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸುತ್ತಿದ್ದ. ಸ್ನೇಹಿತರು ಹಾಗೂ ಆಪ್ತರ ಜೊತೆಯಲ್ಲಿ ಬಂದು ಕೊಠಡಿಯಲ್ಲಿ ಇದ್ದು ಹೋಗುತ್ತಿದ್ದ. ಪ್ರತಿ ಬಾರಿಯೂ ಹೋಟೆಲ್ ಸಿಬ್ಬಂದಿ, ಆತನಿಂದ ಯಾವುದೇ ಗುರುತಿನ ಚೀಟಿಯನ್ನೂ ಪಡೆಯುತ್ತಿರಲಿಲ್ಲ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಲಕ್ಷ್ಮಣನ ಹತ್ಯೆಗೆ ಒಂದಾದ ವೈರಿಗಳು?
‘ಬೆಂಗಳೂರಿನ ಕುಖ್ಯಾತ ರೌಡಿಯಾಗಿದ್ದ ಲಕ್ಷ್ಮಣ, ರಿಯಲ್ ಎಸ್ಟೇಟ್ ದಂಧೆ ಹಾಗೂ ವ್ಯಾಜ್ಯಗಳ ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ. ರಾಜಕಾರಣಿಗಳ ಜೊತೆಯೂ ಒಡನಾಟವಿದ್ದ ಆತ ಶಾಸಕನಾಗುವ ಆಸೆ ಇಟ್ಟುಕೊಂಡಿದ್ದ. ಅದೇ ಕಾರಣಕ್ಕೆ ಆತ, ಕಳೆದ ವಿಧಾನಸಭಾ ಚುನಾವಣೆ ವೇಳೆ ಮದ್ದೂರು ಕ್ಷೇತ್ರದಿಂದ ರಾಜಕೀಯ ಪಕ್ಷವೊಂದರಿಂದ ಟಿಕೆಟ್ ಸಹ ಕೇಳಿದ್ದ. ಕೊನೆಯಲ್ಲಿ ಟಿಕೆಟ್ ಕೈ ತಪ್ಪಿತ್ತು’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ಲಕ್ಷ್ಮಣ ಬೆಳೆದರೆ ತಮಗೆ ಉಳಿಗಾಲವಿಲ್ಲವೆಂದು ತಿಳಿದಿದ್ದ ನಗರದ ಕೆಲ ವೈರಿಗಳು, ಆತನ ಹತ್ಯೆಗಾಗಿ ಒಂದಾಗಿದ್ದರು. ಆತನ ಬಲವನ್ನು ಅರಿತಿದ್ದ ವೈರಿ
ಗಳು, ನೇರವಾಗಿ ಹತ್ಯೆಯಲ್ಲಿ ಪಾಲ್ಗೊಂಡಿಲ್ಲ. ಬದಲಿಗೆ, ಕ್ಯಾಟ್‌ರಾಜ್ ಹಾಗೂ ಹೇಮಂತ್‌ ಮೂಲಕ ಹತ್ಯೆ ಮಾಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ವೈರಿಗಳು ಯಾರ‍್ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು. 

ಸತ್ತಂತೆ ನಟಿಸಿದ್ದ ಲಕ್ಷ್ಮಣ!
‘ಮೈಸೂರು ಸ್ಯಾಂಡಲ್‌ ಸೋಪ್ ಫ್ಯಾಕ್ಟರಿ ಬಳಿ ಮಾ. 7ರಂದು ಲಕ್ಷ್ಮಣನ ಕಾರಿನ ಮೇಲೆ ದಾಳಿ ಮಾಡಿದ್ದ ಆರೋಪಿಗಳು, ಮಚ್ಚಿನಿಂದ ಹೊಡೆದಿದ್ದರು. ಆಗ ಲಕ್ಷ್ಮಣ, ಸ್ಟೇರಿಂಗ್ ಮೇಲೆ ಬಿದ್ದು ಸತ್ತಂತೆ ನಟಿಸಿದ್ದ. ಈ ಬಗ್ಗೆ ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಲಕ್ಷ್ಮಣ ಸತ್ತನೆಂದು ತಿಳಿದ ಆರೋಪಿಗಳು, ತಮ್ಮ ಕಾರಿನತ್ತ ಹೊರಟಿದ್ದರು. ಆಗ ಎಚ್ಚರಗೊಂಡಿದ್ದ ಲಕ್ಷ್ಮಣ, ಕಾರಿನಲ್ಲಿ ನರಳಾಡಲಾರಂಭಿಸಿದ್ದ. ಅದನ್ನು ನೋಡಿದ್ದ ಆರೋಪಿಗಳು, ಪುನಃ ಕಾರಿನ ಬಳಿ ಹೋಗಿ ಆತನನ್ನು ಹೊರಗೆ ಎಳೆದು ಮಚ್ಚಿನಿಂದ ಕೊಚ್ಚಿದ್ದರು. ಆತ ಮೃತಪಟ್ಟಿದ್ದನ್ನು ಖಾತ್ರಿಪಡಿಸಿಕೊಂಡೇ ಸ್ಥಳದಿಂದ ಪರಾರಿಯಾಗಿದ್ದರು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು