ಭಾನುವಾರ, ಡಿಸೆಂಬರ್ 15, 2019
26 °C

ರಾಷ್ಟ್ರೀಯ ಲೋಕ ಅದಾಲತ್‌: ರಾಜಿ ಮೊತ್ತ ₹ 327 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ರಾಜ್ಯದಾದ್ಯಂತ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ₹ 327 ಕೋಟಿ ಮೊತ್ತದ ಪ್ರಕರಣಗಳು ರಾಜಿಯಾಗಿವೆ.

ಸಂಜೆಯ ವೇಳೆಗೆ ದೊರೆತ ಮಾಹಿತಿ ಅನುಸಾರ 3,664 ವ್ಯಾಜ್ಯಪೂರ್ವ (ಕೋರ್ಟ್‌ಗೆ ಬರುವ ಮನ್ನವೇ ಇತ್ಯರ್ಥಗೊಳ್ಳುವುದು) ಹಾಗೂ ನ್ಯಾಯಾಲಯದಲ್ಲಿ ಬಾಕಿ ಇದ್ದ 22,127 ಸಿವಿಲ್‌ ಹಾಗೂ ಕ್ರಿಮಿನಲ್‌ ಪ್ರಕರಣಗಳು ಇತ್ಯರ್ಥಗೊಂಡಿವೆ.

‘ಬೆಂಗಳೂರು ಹೈಕೋರ್ಟ್‌ ಪ್ರಧಾನ ಪೀಠ, ಕಲಬುರ್ಗಿ ಹಾಗೂ ಧಾರವಾಡ ಪೀಠಗಳೂ ಸೇರಿದಂತೆ ಎಲ್ಲಾ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಅದಾಲತ್‌ ನಡೆಸಲಾಗಿದೆ. ಗಂಭೀರ ಪ್ರಕರಣಗಳನ್ನು ಹೊರತುಪಡಿಸಿ ರಾಜಿಯಾಗಬಹುದಾದ ವಾಹನ ಅಪಘಾತ ಪರಿಹಾರ, ಕೌಟುಂಬಿಕ, ಸಾಲ ವಸೂಲು, ಚೆಕ್‌ ಬೌನ್ಸ್‌ ಸೇರಿದಂತೆ ಎಲ್ಲ ರೀತಿಯ ವ್ಯಾಜ್ಯಗಳನ್ನು ಬಗೆಹರಿಸಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ₹ 327,04,74,069 ಮೌಲ್ಯ ಒಳಗೊಂಡಿದೆ’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಂಚಾಟೆ ಸಂಜೀವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರಕರಣಗಳು ತ್ವರಿತ ಮತ್ತು ವ್ಯಾಜ್ಯರಹಿತವಾಗಿ ವಿಲೇವಾರಿ ಆಗುವ ದಿಸೆಯಲ್ಲಿ ಪ್ರತಿ ತಿಂಗಳೂ ಲೋಕ ಅದಾಲತ್‌ ನಡೆಸಲಾಗುತ್ತದೆ. ಈ ದಿಸೆಯಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಾಹೇಶ್ವರಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾಯಮೂರ್ತಿ ಎಲ್‌. ನಾರಾಯಣ ಸ್ವಾಮಿ ಅವರು ಶ್ರಮದಿಂದಾಗಿ ಈ ಬಾರಿ ಗಣನೀಯ ಪ್ರಮಾಣದಲ್ಲಿ ಯಶಸ್ಸು ದೊರೆತಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು