ಶನಿವಾರ, ಸೆಪ್ಟೆಂಬರ್ 19, 2020
27 °C
ಮೇಯರ್ ಗಂಗಾಂಬಿಕೆ ಎಚ್ಚರಿಕೆ

ನಗರ ಸ್ವಚ್ಛವಾಗದಿದ್ದರೆ ಅಧಿಕಾರಿಗಳೇ ಹೊಣೆ: ಮೇಯರ್ ಗಂಗಾಂಬಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕಸ, ಘನತ್ಯಾಜ್ಯ, ಕಟ್ಟಡದ ಅವಶೇಷ ಕಂಡುಬಂದರೆ ಆಯಾ ವಾರ್ಡ್‍ನ ಆರೋಗ್ಯ ನಿರೀಕ್ಷಕ, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಅಮಾನತು ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಸಿದರು.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಅವರು, ‘ರಸ್ತೆ, ಖಾಲಿ ನಿವೇಶನಗಳಲ್ಲಿ ಯಾರೇ ಕಸ ಹಾಕಿದರೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಕೈಗಾರಿಕೆ, ವಾಣಿಜ್ಯ ಸಂಕೀರ್ಣ, ಮಾಲ್, ಹೋಟೆಲ್, ಶಿಕ್ಷಣ ಸಂಸ್ಥೆಗಳಿಂದ ನೂರಾರು ಕೋಟಿ ತೆರಿಗೆ ಬಾಕಿ ಇದೆ. ಇದು ಏಕೆ ವಸೂಲಿಯಾಗಿಲ್ಲ?’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಕೆಲವು ವಾರ್ಡ್‍ಗಳಲ್ಲಿ ಬಿ ಖಾತೆ ಇರುವುದರಿಂದ ಸರಿಯಾದ ಸಮಯಕ್ಕೆ ಕೆಲವರು ತೆರಿಗೆ ಕಟ್ಟಿಲ್ಲ. ಶೇ 75ರಷ್ಟು ತೆರಿಗೆ ವಸೂಲಿ ಮಾಡಲಾಗಿದೆ. ಕೆಎಲ್ಇ ಶಿಕ್ಷಣ ಸಂಸ್ಥೆ ಹೆಚ್ಚಿನ ತೆರಿಗೆ ಉಳಿಸಿಕೊಂಡಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ಶೀಘ್ರ ವಸೂಲು ಮಾಡಲಾಗುವುದು’ ಎಂದು ಉಪಆಯುಕ್ತ ಬೈರೇಗೌಡ ಮಾಹಿತಿ ನೀಡಿದರು.

ವಿಶೇಷ ಆಯುಕ್ತ ಲೊಕೇಶ್, ‘ತೆರಿಗೆ ವಸೂಲಿ ಮಾಡಲು ಸಾಧ್ಯವಿಲ್ಲವಾದರೆ ನಾವೇಕೆ ಕರ್ತವ್ಯದಲ್ಲಿರಬೇಕು? ಸರ್ಕಾ
ರಕ್ಕೆ ಅದರಿಂದ ನಷ್ಟವಾಗುವುದಿಲ್ಲವೇ?  ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಬಿಬಿಎಂಪಿಯನ್ನೇ ವಜಾ ಮಾಡಬಹುದಾಗಿದೆ’ ಎಂದರು.

ಮುಖ್ಯ ಎಂಜಿನಿಯರ್ ನಾಗರಾಜು, ‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 9 ವಾರ್ಡ್‍ಗಳಿವೆ. 5 ವಾರ್ಡ್‍ಗಳಲ್ಲಿ ಸಹಾಯಕ ಎಂಜಿನಿಯರ್, 3 ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್ ಸೇರಿ 10 ಆರೋಗ್ಯ ನಿರೀಕ್ಷಕರ ಹುದ್ದೆ ಖಾಲಿ ಇವೆ. ವರ್ಗಾಯಿಸಿದರೂ ಯಾರೂ ಸಹ ಇಲ್ಲಿಯವರೆಗೂ ಕೆಲಸ ವಹಿಸಿಕೊಂಡಿಲ್ಲ. ಪಶ್ಚಿಮ ಮತ್ತು ದಕ್ಷಿಣ ವಲಯಗಳ ಕಸವನ್ನು ರಾತ್ರೋ ರಾತ್ರಿ ರಾಜೇಶ್ವರಿನಗರದ ವಲಯ ಪ್ರದೇಶದಲ್ಲಿ ಸುರಿದು ಹೋಗುತ್ತಾರೆ. ಆದರೆ ಆಪಾದನೆ ಮಾತ್ರ ರಾಜರಾಜೇಶ್ವರಿನಗರ ವಲಯಕ್ಕೆ ಬರುತ್ತದೆ’ ಎಂದು ಅಳಲು ತೋಡಿಕೊಂಡರು.

'ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿಯಾಗಿರುವ ಅಧಿಕಾರಿಗಳನ್ನು ವರ್ಗಾಯಿಸುತ್ತೇವೆ. ಅಪಾರ್ಟ್‍ಮೆಂಟ್, ವಾಣಿಜ್ಯ ಮಳಿಗೆಗಳ ಮಾಲೀಕರು ಓ.ಸಿ ಮತ್ತು ಸಿ.ಸಿ ಪಡೆಯದಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದಂಡ ವಿಧಿಸುವ ಅಧಿಕಾರ ಜಂಟಿ ಆಯುಕ್ತರಿಗೆ ಇದೆ’ ಎಂದು ಮೇಯರ್‌ ಹೇಳಿದರು.

ಉದ್ಯಾನ ನಿರ್ವಹಣೆ ಸರಿಯಾಗಿಲ್ಲ. ಅಧೀಕ್ಷಕರಿಗೆ ಸರಿಯಾದ ಮಾಹಿತಿ ಇಲ್ಲ, ಜನವರಿ ಮೊದಲವಾರದಿಂದ ನಗರ ಪ್ರದಕ್ಷಿಣೆ ವೇಳೆಯಲ್ಲಿ ಅವ್ಯವಸ್ಥೆ ಕಂಡುಬಂದರೆ ಮುಖ್ಯ ಎಂಜಿನಿಯರ್, ಉಪಆರೋಗ್ಯ ಅಧಿಕಾರಿ, ಕಂದಾಯ ಅಧಿಕಾರಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು