ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಅಧ್ಯಕ್ಷ ಗಾದಿ ಮುಳ್ಳಿನ ಹಾಸಿಗೆ

ಅಧಿಕಾರ ಸ್ವೀಕರಿಸಿದ ಎಸ್‌.ಟಿ.ಸೋಮಶೇಖರ
Last Updated 10 ಜನವರಿ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಗಾದಿ ಮುಳ್ಳಿನ ಹಾಸಿಗೆ ಇದ್ದಂತೆ...’

ಬಿಡಿಎ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಶಾಸಕಎಸ್‌.ಟಿ.ಸೋಮಶೇಖರ ಅವರ ಮೊದಲ ಪ್ರತಿಕ್ರಿಯೆ ಇದು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಡಿಎ ಅಧ್ಯಕ್ಷ ಸ್ಥಾನವನ್ನು ಜನ ಬೇರೆಯೇ ರೀತಿ ವ್ಯಾಖ್ಯಾನಿಸುತ್ತಾರೆ. ಈ ಸಂಸ್ಥೆ ಕುರಿತು ಜನರಲ್ಲಿರುವ ಭಾವನೆಯನ್ನು ಬದಲಿಸಲು ಪ್ರಯತ್ನಿಸುತ್ತೇನೆ. ಕಚೇರಿಗೆ ಬಂದರೆ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಜನರಲ್ಲಿ ವಿಶ್ವಾಸ ಮೂಡುವಂತೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಕಳೆದ ಅವಧಿಯಲ್ಲಿ ಶಾಸಕನಾಗಿದ್ದಾಗ ಬಿಡಿಎ ಸದಸ್ಯನಾಗಿದ್ದೆ. ಹಾಗಾಗಿ ಪ್ರಾಧಿಕಾರದ ಸಮಸ್ಯೆಗಳ ಬಗ್ಗೆ ಅರಿವಿದೆ. ನಾನು ಪ್ರತಿನಿಧಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಡಪ್ರಭು ಕೆಂಪೇಗೌಡ, ವಿಶ್ವೇಶ್ವರಯ್ಯ, ಬನಶಂಕರಿ ಹಾಗೂ ಜ್ಞಾನಭಾರತಿ ಬಡಾವಣೆಗಳು ಬರುತ್ತವೆ. ಹಾಗಾಗಿ ಬಡಾವಣೆಗಳ ಸಮಸ್ಯೆಗಳ ಬಗ್ಗೆಯೂ ಚೆನ್ನಾಗಿ ಅರಿವಿದೆ’ ಎಂದರು.

ಬಸವೇಶ್ವರವೃತ್ತದಿಂದ ಹೆಬ್ಬಾಳದವರೆಗೆ ಮೇಲ್ಸೇತುವೆ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಳ್ಳುವ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದರು.

ಹದಗೆಟ್ಟಿರುವ ಬಿಡಿಎ ಆರ್ಥಿಕ ಪರಿಸ್ಥಿತಿಯನ್ನು ಮತ್ತೆ ಹೇಗೆ ಸರಿದಾರಿಗೆ ತರುತ್ತೀರಿ ಎಂಬ ಪ್ರಶ್ನೆಗೆ, ‘ನಾನು ಸದಸ್ಯನಾಗಿದ್ದಾಗ ಪ್ರಾಧಿಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರಲಿಲ್ಲ. ಈಗ ಹೇಗಿದೆಯೋ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.

‘ನಾನು ಯಾವುದೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಈ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದೆ. ಅವರು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಈ ಸ್ಥಾನಕ್ಕೆ ಹಾಗೂ ಬಿಡಿಎಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ’ ಎಂದರು.

ಅಧಿಕಾರ ಸ್ವೀಕಾರಕ್ಕೂ ಮುನ್ನ ಎಸ್‌.ಟಿ. ಸೋಮಶೇಖರ ಅವರುಕಚೇರಿಯಲ್ಲಿ ಗಣಪತಿ ಪೂಜೆ ನೆರವೇರಿಸಿದರು.

**

ಬಿಡಿಎ ಪ್ರಾಂಗಣದಲ್ಲಿ ಜನಜಾತ್ರೆ
ಎಸ್‌.ಟಿ.ಸೋಮಶೇಖರ ಅವರು ಅಧಿಕಾರ ಸ್ವೀಕರಿಸುವ ಸಮಾರಂಭದ ವೇಳೆ ಬಿಡಿಎ ಕೇಂದ್ರ ಕಚೇರಿ ಪ್ರಾಂಗಣದ ತುಂಬಾ ಜನಜಾತ್ರೆ ಇತ್ತು.

ನೂತನ ಅಧ್ಯಕ್ಷರಿಗೆ ಶುಭಕೋರಲು ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಶಾಸಕರಾದ ಎನ್‌.ಎ.ಹ್ಯಾರಿಸ್, ಭೈರತಿ ಬಸವರಾಜ್‌, ಆರ್‌.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ರಘು ಆಚಾರ್‌, ಪಾಲಿಕೆ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡರು ನೂತನ ಅಧ್ಯಕ್ಷರಿಗೆ ಶುಭಕೋರಿದರು.

ಅಭಿಮಾನಿಗಳಿಗೆಲ್ಲ ಸೋಮಶೇಖರ ಅವರು ಊಟೋಪಾಹಾರದ ವ್ಯವಸ್ಥೆ ಕಲ್ಪಿಸಿದ್ದರು.

‘ಇದರ ವೆಚ್ಚವನ್ನು ಬಿಡಿಎ ವತಿಯಿಂದ ಭರಿಸುವುದಿಲ್ಲ. ಅಧ್ಯಕ್ಷರು ಸ್ವಂತ ಖರ್ಚಿನಿಂದ ಈ ಏರ್ಪಾಟು ಮಾಡಿದ್ದಾರೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT