ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಹಳ್ಳಿಯಲ್ಲೂ ಸ್ಮಶಾನಕ್ಕೆ ಜಾಗ ಮೀಸಲಿಡಿ

ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೂಚನೆ
Last Updated 13 ಡಿಸೆಂಬರ್ 2019, 13:01 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲೂ ಸ್ಮಶಾನಕ್ಕಾಗಿ ಒಂದು ಜಾಗವನ್ನು ಮೀಸಲಿಡಬೇಕು. ಯಾವುದೇ ಸಮುದಾಯ, ವರ್ಗಕ್ಕೂ ಅನ್ಯಾಯವಾಗದಂತೆ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಜಾರಿ ಕುರಿತಂತೆ ಗುರುವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ಜಿಲ್ಲಾ ಕೇಂದ್ರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ತ್ವರಿತವಾಗಿ ಮುಕ್ತಾಯವಾಗಬೇಕು. ಭವನಕ್ಕೆ ಬೇಕಾದ ಸಲಕರಣೆಗಳನ್ನು ಶೀಘ್ರವಾಗಿ ಮಂಜೂರು ಮಾಡಬೇಕು. ರಾಜ್ಯದಲ್ಲಿ ಉತ್ತಮವಾದ ಅಂಬೇಡ್ಕರ್ ಭವನ ಇದಾಗಿದ್ದು, ಇದರ ನಿರ್ವಹಣೆಯನ್ನು ಸಮಗ್ರವಾಗಿ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಇಲ್ಲಿ ನಡೆಯುವಂತಾಗಬೇಕು’ ಎಂದು ಹೇಳಿದರು.

‘ಇಲಾಖೆಗಳಲ್ಲಿರುವ ಅನುದಾನ ಹಣವನ್ನು ಮುಖ್ಯವಾಹಿನಿಯಿಂದ ದೂರ ಇರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೀಸಲಿಡಬೇಕು. ಹಣವು ಸರ್ಕಾರದಿಂದ ವಾಪಸ್‌ ಹೋಗದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಕೂಡಲೇ ದೊರೆಯುವಂತೆ ಮಾಡಬೇಕು. ಅವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಸಭೆಯ ನಂತರದಲ್ಲಿ ಶಂಕರ ನಗರ ಬಡಾವಣೆಯ ವೃತ್ತಿಪರ ಕಾಲೇಜು ವಿದ್ಯಾರ್ಥಿನಿಲಯದ ಆವರಣದಲ್ಲಿ ಅವರು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಚಿಂತನೆ ಮಾಡಬೇಕು. ನಮ್ಮ ಪ್ರಕೃತಿಗೆ ಕೊಡುಗೆ ನೀಡುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹೊಸ ಮನ್ವಂತರ ಪ್ರಾರಂಭಿಸಬೇಕು ಎಂಬ ಉದ್ದೇಶದಿಂದ ಸಸಿ ನೆಟ್ಟು, ಹಸಿರು ಕ್ರಾಂತಿಗೆ ಹೊಸ ಶಕೆ ಪ್ರಾರಂಭ ಮಾಡಬೇಕು. ಈ ಹಸಿರು ಕ್ರಾಂತಿಗೆ ಸಾರ್ವಜನಿಕರು ಕೂಡ ಕೈ ಜೋಡಿಸಿ, ತಮ್ಮ ಜೀವನದ ವಿಶೇಷ ಸಂದರ್ಭದಲ್ಲಿ, ಜನ್ಮದಿನಗಳ ವೇಳೆ ಒಂದೊಂದು ಸಸಿ ನೆಟ್ಟು ಮೂಲಕ ಹಸಿರು ಜಿಲ್ಲೆಯನ್ನಾಗಿ ಮಾಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಉಪ ವಿಭಾಗಾಧಿಕಾರಿ ಶೈಲಜಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ, ಕರ್ನಾಟಕ ದಲಿತ ಸಂಘದ ಅಧ್ಯಕ್ಷ ಎಂ.ಬಿ.ಶ್ರೀನಿವಾಸ್, ವೆಂಕಟಗಿರಿಯಯ್ಯ, ಮೀರಾ ಶಿವಲಿಂಗಯ್ಯ, ತೈಲೂರು ವೆಂಕಟಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT