ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗೃತ ದಳ ಸ್ಥಾಪಿಸಲು ಮುಂದಾದ ರೇರಾ

ಪ್ರಾಧಿಕಾರದ ಆದೇಶ ಪಾಲನೆಗೆ ಹಿಂದೇಟು ಹಾಕುತ್ತಿರುವ ಡೆವಲಪರ್‌ಗಳು
Last Updated 2 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ನಿಯಂತ್ರಣಾ ಪ್ರಾಧಿಕಾರದ (ರೇರಾ) ಆದೇಶಗಳನ್ನು ಪಾಲಿಸಲು ಡೆವಲಪರ್‌ಗಳು ಮೀನಮೇಷ ಎಣಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿಯೇ ಜಾಗೃತ ದಳ ಸ್ಥಾಪಿಸಲು ಪ್ರಾಧಿಕಾರಮುಂದಾಗಿದೆ.

ಡೆವಲಪರ್‌ಗಳು ನೀಡುವ ದಾರಿ ತಪ್ಪಿಸುವಂತಹ ಜಾಹೀರಾತುಗಳನ್ನು ನಂಬಿ ಕೆಲವು ಖಾಸಗಿ ಬಡಾವಣೆಗಳಲ್ಲಿ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಮನೆ ಖರೀದಿಸಿದವರಿಂದ ಪ್ರಾಧಿಕಾರಕ್ಕೆ ದೂರುಗಳ ಮಹಾಪೂರವೇ ಹರಿದುಬರುತ್ತಿವೆ.

‘ಪ್ರಾಧಿಕಾರದ ನ್ಯಾಯನಿರ್ಣಯ ಅಧಿಕಾರಿಗಳು ನೀಡಿರುವ ಆದೇಶಗಳನ್ನು ಡೆವಲಪರ್‌ಗಳು ಪಾಲಿಸುತ್ತಿಲ್ಲ ಎಂದು ಮನೆ ಖರೀದಿದಾರರು ದೂರುತ್ತಿದ್ದಾರೆ. ಹಾಗಾಗಿ ಜಾಗೃತ ದಳವನ್ನು ಹೊಂದುವ ಬಗ್ಗೆ ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಪೊಲೀಸರಿಗೆ ಇರುವಂತೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಅಧಿಕಾರ ಈ ದಳಕ್ಕೂ ಇರಲಿದೆ. ಪೊಲೀಸ್‌ ಇಲಾಖೆಯ ಅಧಿಕಾರಿಯನ್ನೇ ಇದಕ್ಕೆ ನಿಯೋಜಿಸಲಾಗುತ್ತದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಯಾವುದೇ ಡೆವಲಪರ್‌ ಪ್ರಾಧಿಕಾರದ ಆದೇಶ ಪಾಲನೆಗೆ ಹಿಂದೇಟು ಹಾಕಿದರೆ ಜಾಗೃತ ದಳದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ಖರೀದಿದಾರರಿಗೆ ಸಕಾಲದಲ್ಲಿ ಮನೆಯನ್ನು ಹಸ್ತಾಂತರಿಸಲು ವಿಫಲರಾದ ಬಿಲ್ಡರ್‌ಗಳಿಗೆ ರೇರಾ ದಂಡ ವಿಧಿಸಿತ್ತು. ಆದರೆ, ಅನೇಕ ಡೆವಲಪರ್‌ಗಳು ದಂಡವನ್ನು ಪಾವತಿಸಲು ಹಿಂದೇಟು ಹಾಕಿದ್ದರು. ಈ ಬಗ್ಗೆ ಮನೆ ಖರೀದಿದಾರರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.

ರಾಜ್ಯದಲ್ಲಿ 2017ರ ಜುಲೈನಲ್ಲಿ ರೇರಾ ಸ್ಥಾಪಿಸಲಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿರುವ ಎಲ್ಲ ಡೆವಲಪರ್‌ಗಳು ಈ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ. ನೋಂದಣಿ ಮಾಡಿಸದ ಡೆವಲಪರ್‌ಗಳಿಗೆ ಪ್ರಾಧಿಕಾರವು ಇದುವರೆಗೆ ವಿಧಿಸಿರುವ ದಂಡದ ಮೊತ್ತ ₹ 8.83 ಕೋಟಿ ದಾಟಿದೆ.

ಶಾಶ್ವತ ಪ್ರಾಧಿಕಾರ ರಚನೆಗೆ ಸಿದ್ಧತೆ

ಹಂಗಾಮಿ ಅಧ್ಯಕ್ಷ ಜೆ.ರವಿಶಂಕರ ನೇತೃತ್ವದಲ್ಲಿ ರೇರಾ ಕಾರ್ಯನಿರ್ವಹಿಸುತ್ತಿದೆ. ರೇರಾ ಕಾಯ್ದೆ ಅಡಿ ಶಾಶ್ವತ ಪ್ರಾಧಿಕಾರ ರಚಿಸಲು ಸಿದ್ಧತೆ ನಡೆದಿದೆ. ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳ ಹಾಗೂ ಮೇಲ್ಮನವಿ ಪ್ರಾಧಿಕಾರದ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (www.rera.karnataka.gov.in) ಅರ್ಜಿ ನಮೂನೆ ಲಭ್ಯ. ಭರ್ತಿ ಮಾಡಿದ ಅರ್ಜಿ ಸಲ್ಲಿಸುವುದಕ್ಕೆ ಡಿಸೆಂಬರ್‌ 15 ಕೊನೆಯ ದಿನ.

ನಗರಾಭಿವೃದ್ಧಿ, ವಸತಿ, ರಿಯಲ್‌ ಎಸ್ಟೇಟ್‌ ಅಭಿವೃದ್ಧಿ, ಮೂಲಸೌಕರ್ಯ, ಅರ್ಥಶಾಸ್ತ್ರ, ಯೋಜನೆ, ಕಾನೂನು, ವಾಣಿಜ್ಯ, ಕೈಗಾರಿಕೆ, ನಿರ್ವಹಣೆ, ಸಾಮಾಜಿಕ ಸೇವೆ, ಸಾರ್ವಜನಿಕ ವ್ಯವಹಾರ ಅಥವಾ ಆಡಳಿತ ಕ್ಷೇತ್ರಗಳಲ್ಲಿ ಆಳವಾದ ಜ್ಞಾನ ಹಾಗೂ 20 ವರ್ಷಗಳ ಅನುಭವ ಹೊಂದಿರುವವರು ರೇರಾ ಅಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಬಹುದು. ರಾಜ್ಯ ಅಥವಾ ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅಥವಾ ತತ್ಸಮಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

ಸದಸ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕ್ಷೇತ್ರಗಳಲ್ಲಿ ಕನಿಷ್ಠ 15 ವರ್ಷಗಳ ಅನುಭವ ಹೊಂದಿರಬೇಕು. ರಾಜ್ಯ ಅಥವಾ ಕೇಂದ್ರ ಸರ್ಕಾರದ ಕಾರ್ಯದರ್ಶಿ ಅಥವಾ ತತ್ಸಮಾನ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳೂ ಸದಸ್ಯ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT