ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಆರು ಕಡೆ ಸುಲಿಗೆ

ಮೂವರ ಬಂಧನ l ಸಿನಿಮೀಯ ರೀತಿ ಪೊಲೀಸರ ಕಾರ್ಯಾಚರಣೆ
Last Updated 21 ಜುಲೈ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ಒಂದೇ ದಿನ ರಾತ್ರಿ ಆರು ಕಡೆ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ನಗರದ ಪೊಲೀಸರು ಹಿಡಿದಿದ್ದಾರೆ.

‘ಗೋವಿಂದಪುರ ನಿವಾಸಿಗಳಾದ ಸುಹೇಲ್ ಖಾನ್ (20), ಸೈಯದ್ ಸೈಫ್ (22) ಹಾಗೂ ಮಹಮ್ಮದ್ ಜುಕ್ರಿಯಾ (20) ಬಂಧಿತರು. ಅವರಿಂದ ನಾಲ್ಕು ಮೊಬೈಲ್ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಣಸವಾಡಿ ಹಾಗೂ ಕೆ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಇದೇ 17ರಂದು ರಾತ್ರಿ ಸಾರ್ವಜನಿಕರಿಗೆ ಚಾಕು ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪಿಗಳು, ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳನ್ನು ಸುಲಿಗೆ ಮಾಡಿದ್ದರು’ ಎಂದು ಹೇಳಿದ್ದಾರೆ.

ಡ್ರಗ್ಸ್‌ ಅಮಲಿನಲ್ಲಿ ಸರಣಿ ಸುಲಿಗೆ: ‘ಮಾದಕ ವ್ಯಸನಿಗಳಾಗಿರುವ ಆರೋಪಿಗಳು, ದುಶ್ಚಟಕ್ಕೆ ಹಣ ಹೊಂದಿಸಲು ಕೃತ್ಯ ಎಸಗುತ್ತಿದ್ದರು. ‘ಡ್ರಗ್ಸ್‌’ ಅಮಲಿನಲ್ಲೇ ಸುಲಿಗೆ ಮಾಡಿರುವ ಅನುಮಾನವಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರ ವರದಿ ಬರಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ತಮ್ಮದೇ ದ್ವಿಚಕ್ರ ವಾಹನದಲ್ಲಿ ಹೆಣ್ಣೂರು ಮುಖ್ಯರಸ್ತೆಗೆ ಬಂದಿದ್ದ ಮೂವರೂ ಆರೋಪಿಗಳು, ಅಲ್ಲಿಯೇ ವ್ಯಕ್ತಿಯೊಬ್ಬರನ್ನು ಬೆದರಿಸಿ ಮೊಬೈಲ್ ಕಿತ್ತುಕೊಂಡಿದ್ದರು. ಅಲ್ಲಿಂದ ಹೊರಟು, ಬಾಣಸವಾಡಿಯ ಒಂದನೇ ಬ್ಲಾಕ್‌ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯೂ ಎರಡು ಮೊಬೈಲ್ ಸುಲಿಗೆ ಮಾಡಿದ್ದರು’ ಎಂದರು.

‘ಜೈ ಭಾರತ ನಗರದ ಸಂಜೀವಪ್ಪ ಬಡಾವಣೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಉಮರ್‌ ಎಂಬುವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು. ಉಮರ್ ಅವರ ದ್ವಿಚಕ್ರ ವಾಹನವನ್ನೇ ಸುಲಿಗೆ ಮಾಡಿಕೊಂಡು ಹೋಗಿದ್ದರು. ಬಳಿಕ, ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲೂ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಸುಲಿಗೆ ಮಾಡಿದ್ದರು’ ಎಂದು ವಿವರಿಸಿದರು.

ಆರೋಪಿಗಳ ಬೆನ್ನಟ್ಟಿ ಸೆರೆ

‘ಆರೋಪಿಗಳ ಕೃತ್ಯದ ಬಗ್ಗೆ ಸಂತ್ರಸ್ತರೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಬಾಣಸವಾಡಿ ಠಾಣೆ ಇನ್‌ಸ್ಪೆಕ್ಟರ್‌ ಆರ್‌. ವಿರೂಪಾಕ್ಷಸ್ವಾಮಿ ಹಾಗೂ ಕೆ.ಜೆ.ಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಎಸ್‌. ಎಡ್ವಿನ್ ಪ್ರದೀಪ್ ನೇತೃತ್ವದ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು’ ಎಂದು ಅಧಿಕಾರಿ ಹೇಳಿದರು.

‘ಆರೋಪಿಗಳ ಕೃತ್ಯ ಕೆಲ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆ ದೃಶ್ಯಗಳನ್ನೇ ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗಳಿಗೆ ಕಳುಹಿಸಲಾಗಿತ್ತು. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ಮಾಡುವಂತೆ ಸೂಚಿಸಲಾಗಿತ್ತು. ಕೆ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲೇ ಆರೋಪಿಗಳ ಬೆನ್ನಟ್ಟಿ ಬಂಧಿಸಲಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT