ಸೋಮವಾರ, ಮೇ 17, 2021
23 °C
ಪಶ್ಚಿಮ ವಿಭಾಗದ ಪೊಲೀಸರ ಕಾರ್ಯಾಚರಣೆ * 150ಕ್ಕೂ ಹೆಚ್ಚು ಮಂದಿ ವಶಕ್ಕೆ

ಬೆಳ್ಳಂಬೆಳಗ್ಗೆ ರೌಡಿ ಮನೆಗಳ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಶ್ಚಿಮ ವಿಭಾಗದ ಹಲವು ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ರೌಡಿಗಳ ಮನೆಗಳ ಮೇಲೆ ಭಾನುವಾರ ನಸುಕಿನಲ್ಲಿ ದಿಢೀರ್ ದಾಳಿ ಮಾಡಿದ ಪೊಲೀಸರು, 150ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದರು.

ಇತ್ತೀಚೆಗಷ್ಟೇ ನಗರದಲ್ಲಿ ರೌಡಿ ಲಕ್ಷ್ಮಣನ ಹತ್ಯೆಯಾಗಿದ್ದು, ರೌಡಿ ಚಟುವಟಿಕೆಗಳು ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರೌಡಿಗಳ ಮೇಲೆ ನಿಗಾ ಇರಿಸುವಂತೆ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌, ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ಅದರನ್ವಯ ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ನೇತೃತ್ವದಲ್ಲಿ ಪೊಲೀಸರು, ನಸುಕಿನ 3 ಗಂಟೆಯಿಂದ 6 ಗಂಟೆವರೆಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 

ನಿದ್ದೆಯ ಮಂಪರಿನಲ್ಲಿದ್ದ ರೌಡಿಗಳನ್ನು ಹಾಸಿಗೆಯಲ್ಲೇ ವಿಚಾರಣೆಗೆ ಒಳಪಡಿಸಿದರು. ಮಾರಕಾಸ್ತ್ರ ಹಾಗೂ ಶಸ್ತ್ರಾಸ್ತ್ರ ಬಚ್ಚಿಟ್ಟಿರಬಹುದೆಂಬ ಅನುಮಾನದಡಿ ಮನೆಯಲ್ಲೆಲ್ಲ ಹುಡುಕಾಟ ನಡೆಸಿದರು. ರಾಜರಾಜೇಶ್ವರಿನಗರ, ವಿಜಯನಗರ, ಕಾಮಾಕ್ಷಿಪಾಳ್ಯ ಠಾಣೆ ಆವರಣದಲ್ಲಿ ಪರೇಡ್ ನಡೆಸಿ ಮುಂಜಾಗ್ರತಾ ಕ್ರಮವಾಗಿ 150ಕ್ಕೂ ಹೆಚ್ಚು ರೌಡಿಗಳನ್ನು ವಶಕ್ಕೆ ಪಡೆದರು.

ರೌಡಿಗಳಾದ ಭರತ್ ಅಲಿಯಾಸ್ ಶ್ರೀರಾಮಪುರ, ಸಂತೋಷ್ ಅಲಿಯಾಸ್ ಗಾಂಧಿ, ಅರುಣ ಅಲಿಯಾಸ್ ಹಳ್ಳಿ, ದಿಲೀಪ್ ಅಲಿಯಾಸ್ ಪಂ‍ಪು ಸೇರಿದಂತೆ ಹಲವು ರೌಡಿಗಳ ಮನೆಗಳ ಮೇಲೆ ಈ ದಾಳಿ ನಡೆಯಿತು.

ಚಾಕು, ದೊಣ್ಣೆ ಜಪ್ತಿ: ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು, ಅವರ ಬಳಿಯ ಚಾಕು ಹಾಗೂ ಮರದ ದೊಣ್ಣೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಅದೇ ವೇಳೆಯಲ್ಲೇ ಪೊಲೀಸರು ದಾಳಿ ಮಾಡಿ ಅವರನ್ನು ಬಂಧಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು