ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಹಾರುತ್ತಿದ್ದ ರೌಡಿ ಮುಲಾಮ ಸೆರೆ

Last Updated 26 ಡಿಸೆಂಬರ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ಭೂಮಾಲೀಕರಿಗೆ ಜೀವ ಬೆದರಿಕೆ ಹಾಕುತ್ತ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದ ಕುಖ್ಯಾತ ರೌಡಿ ಲೋಕೇಶ ಅಲಿಯಾಸ್ ಮುಲಾಮನನ್ನು ಸಿಸಿಬಿ ಪೊಲೀಸರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬುಧವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ.

ಎರಡು ತಿಂಗಳ ಹಿಂದೆ ಸಿಸಿಬಿ ಪೊಲೀಸರು ಮುಲಾಮನ ಮನೆ ಮೇಲೆ ದಾಳಿ ನಡೆಸಿ ಭೂವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ಆ ದಾಳಿ ಬಳಿಕ ಸಂತ್ರಸ್ತರು ಆತನ ವಿರುದ್ಧ ಠಾಣೆಗಳ ಮೆಟ್ಟಿಲೇರಿದ್ದರು. ಮಹಿಳೆಯೊಬ್ಬರು ರಾಜರಾಜೇಶ್ವರಿ ನಗರ ಠಾಣೆಗೆ ದೂರು ಕೊಟ್ಟರೆ, ಇನ್ನೊಬ್ಬ ಉದ್ಯಮಿ ಬನ್ನೇರುಘಟ್ಟ ಠಾಣೆಗೆ ದೂರು ನೀಡಿದ್ದರು.

ತನ್ನ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾದ ವಿಚಾರ ತಿಳಿದ ಮುಲಾಮ, ಕರೆ ಮಾಡಿ ಅವರಿಬ್ಬರಿಗೆ ಜೀವಬೆದರಿಕೆ ಹಾಕಲು ಶುರು ಮಾಡಿದ್ದ. ಆಗ ಮಹಿಳೆ ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರ ಮೊರೆ ಹೋಗಿದ್ದರು. ಈ ಬೆಳವಣಿಗೆ ಬಳಿಕ ಮುಲಾಮನ ಬಂಧನಕ್ಕೆ ವಿಶೇಷ ತಂಡ ರಚನೆಯಾಯಿತು.

ರಾಜರಾಜೇಶ್ವರಿ ನಗರದಲ್ಲಿ ಬೃಹತ್ ಬಂಗಲೆ ಕಟ್ಟಿಕೊಂಡು ನೆಲೆಸಿದ್ದ ಮುಲಾಮ, ಸಿಸಿಬಿ ತನ್ನ ಹಿಂದೆ ಬಿದ್ದಿರುವ ವಿಚಾರ ತಿಳಿದು ತಿಂಗಳಿನಿಂದ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಈ ವಿಚಾರ ತಿಳಿದು ಪೊಲೀಸರು ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.

‘ಮೈಸೂರಿನಲ್ಲಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದ ಆತ, ಭಾನುವಾರ ರಾತ್ರಿ ನಗರಕ್ಕೆ ವಾಪಸಾಗಿದ್ದ. ಬುಧವಾರ ಬೆಳಿಗ್ಗೆ ವಿಮಾನದ ಮೂಲಕ ಮುಂಬೈಗೆ ಹೋಗುವವನಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ದಾಳಿ ನಡೆಸಿ ನಿಲ್ದಾಣದಲ್ಲೇ ವಶಕ್ಕೆ ಪಡೆದೆವು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾರು ಈ ಮುಲಾಮ?: 18ನೇ ವಯಸ್ಸಿಗೇ ಅಪರಾಧ ಲೋಕಕ್ಕೆ ಕಾಲಿಟ್ಟ ಮುಲಾಮ, ಕುಖ್ಯಾತ ರೌಡಿ ಬಲರಾಮನ ಬಂಟ. 7ನೇ ತರಗತಿಗೇ ವಿದ್ಯಾಭ್ಯಾಸ ಬಿಟ್ಟು ವೆಲ್ಡರ್ ಕೆಲಸ ಮಾಡುತ್ತಿದ್ದ. ನಂತರ ಸಹಚರರೊಂದಿಗೆ ಸೇರಿ ಕೊಲೆ, ಕೊಲೆ ಯತ್ನ, ಹೊಡೆದಾಟ, ದೊಂಬಿಗಳಲ್ಲಿ ಭಾಗಿಯಾಗಿದ್ದ. ತನ್ನ ಗುರು ಬಲರಾಮನ ಮರಣದ ನಂತರ, ತಾನೇ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಚಟುವಟಿಕೆ ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

1985ರಲ್ಲಿ ರಾಜಾಜಿನಗರ ಠಾಣೆಯಲ್ಲಿ ಮೊದಲ ಬಾರಿಗೆ ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು. ದಿನಕಳೆದಂತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿದ ಈತ, ತನ್ನ ದಂಧೆಗೆ ಅಡ್ಡ ಬಂದವರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದ್ದ. 3 ಕೊಲೆ, 3 ಕೊಲೆ ಯತ್ನ, 5 ದರೋಡೆ, 4 ಅಪಹರಣ ಸೇರಿದಂತೆ ಈತನ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಈಗ ರಾಜಗೋಪಾಲ ನಗರ, ಕಾಮಾಕ್ಷಿಪಾಳ್ಯ ಹಾಗೂ ರಾಜರಾಜೇಶ್ವರಿ ನಗರ ಠಾಣೆಯ ರೌಡಿಗಳ ಪಟ್ಟಿಯಲ್ಲೂ ಈತನ ಹೆಸರಿದೆ.

ದಂಧೆಗಾಗಿ ಸಂಘಟನೆ ಕಟ್ಟಿದ

ದಂಧೆಗಾಗಿಯೇ ‘ವೈಭವ ಕರ್ನಾಟಕ’ ಸಂಘಟನೆ ಕಟ್ಟಿದ್ದ ಮುಲಾಮ, ಅದರ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ. ಖಾಲಿ ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡು ಜಮೀನುಗಳನ್ನು ಕಬಳಿಸುತ್ತಿದ್ದ. 2016ರಲ್ಲಿ ಈತನ ಮೇಲೆ ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಿಸಿದ್ದ ಸಿಸಿಬಿ ಅಧಿಕಾರಿಗಳು, ‘ಹೀಗೆಯೇ ಮುಂದುವರಿದರೆ ಕೋಕಾ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇವೆ’ ಎಂದು ಎಚ್ಚರಿಸಿದ್ದರು. ಆದರೂ, ಆತನ ಉಪಟಳ ಕಡಿಮೆ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT