ಮಂಗಳವಾರ, ಜುಲೈ 27, 2021
28 °C

3 ಕೆ.ಜಿ ಚಿನ್ನ, 23 ಕೈಗಡಿಯಾರ ಕಳವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎರಡು ತಿಂಗಳ ಹಿಂದಷ್ಟೇ ಚೇಳಕೆರೆಯ ಅವಿಭಕ್ತ ಕುಟುಂಬದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ನೇಪಾಳದ ದಂಪತಿ, ಮೂರೂಕಾಲು ಕೆ.ಜಿ ಚಿನ್ನ ಸೇರಿದಂತೆ ₹ 1.14 ಕೋಟಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಈ ಸಂಬಂಧ ಮನೆ ಮಾಲೀಕ ನಾಗರಾಜ ರೆಡ್ಡಿ ಅವರು ಭಾನುವಾರ ಹೆಣ್ಣೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಅವರು ಬಿಲ್ಡರ್ ಆಗಿದ್ದು, ಮೇ 3ರ ಬೆಳಿಗ್ಗೆ ಕುಟುಂಬ ಸಮೇತ ತಮಿಳುನಾಡು ತಿರುನಲ್ಲೂರಿನ ಶನೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಮೇ 5ರ ಬೆಳಿಗ್ಗೆ ಮನೆಗೆ ವಾಪಸಾದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

‘ಹಿಂಬಾಗಿಲನ್ನು ಮುರಿದು ಒಳನುಗ್ಗಿರುವ ಕಳ್ಳರು, ನಂತರ ಗ್ರಿಲ್ ಡೋರ್‌ನ ಬೀಗವನ್ನೂ ಒಡೆದಿದ್ದಾರೆ. ಲಾಕರ್‌ನಲ್ಲಿದ್ದ ₹ 3 ಕೆ.ಜಿ 254 ಗ್ರಾಂ ಚಿನ್ನ, 15 ಕೆ.ಜಿಯ ಬೆಳ್ಳಿ ಸಾಮಾನುಗಳು, ವಿವಿಧ ಕಂಪನಿಗಳ 23 ಕೈಗಡಿಯಾರಗಳು, ₹ 1.5 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ₹ 5 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ’ ಎಂದು ರೆಡ್ಡಿ ದೂರಿನಲ್ಲಿ ವಿವರಿಸಿದ್ದಾರೆ.

‘ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ಹೇಮಂತ್ ಸಿಂಗ್ ಹಾಗೂ ಮಾಂಡವಿ ಸಿಂಗ್ ದಂಪತಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಹೀಗಾಗಿ, ಅವರೇ ಕಳವು ಮಾಡಿಕೊಂಡು ಹೋಗಿರುವುದು ಸ್ಪಷ್ಟ. ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಜರುಗಿಸಬೇಕು’ ಎಂದು ರೆಡ್ಡಿ ಮನವಿ ಮಾಡಿದ್ದಾರೆ.

ನೇಪಾಳದ ಗ್ಯಾಂಗ್‌ನಿಂದ 3ನೇ ಕೃತ್ಯ
‘ಕೆಲ ದಿನಗಳ ಹಿಂದೆ ನೇಪಾಳದ ದಂಪತಿಯ ಗ್ಯಾಂಗ್, ರಾಮಮೂರ್ತಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಆಭರಣ ದೋಚಿತ್ತು. ಅದರ ಬೆನ್ನಲ್ಲೇ ಆರ್‌.ಟಿ.ನಗರದ ಆದಿತ್ಯ ನಾರಾಯಣ ಸ್ವಾಮಿ ಎಂಬುವರ ಮನೆಯಲ್ಲೂ ನೇಪಾಳದ 250 ಗ್ರಾಂ ಚಿನ್ನಾಭರಣ ದೋಚಿದ್ದರು. ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದೆ. ಹೇಮಂತ್–ಮಾಂಡವಿ ದಂಪತಿ ಕೂಡ ಅದೇ ಗ್ಯಾಂಗ್‌ನ ಸದಸ್ಯರಿರಬಹುದು. ಹೀಗಾಗಿ, ಬಂಧಿತರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು