ಶುಕ್ರವಾರ, ಏಪ್ರಿಲ್ 23, 2021
22 °C
ಐಟಿಪಿಎಲ್‌– ಬನಶಂಕರಿ ರಸ್ತೆಯಲ್ಲಿ ಹೆಚ್ಚಿದ ದಟ್ಟಣೆ l ಟ್ರಾಫಿಕ್‌ನಿಂದ ಬೇಸತ್ತ ಟೆಕಿಗಳಿಂದ ವ್ಯಂಗ್ಯದ ಟ್ವೀಟ್‌

24 ಕಿ.ಮೀ ಪ್ರಯಾಣಕ್ಕೆ ‘ಸ್ಲೀಪರ್ ಕೋಚ್‌’ ಬಸ್‌!‌

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘#ಬ್ರೇಕಿಂಗ್ ನ್ಯೂಸ್! ಐಟಿಪಿಎಲ್‌–ಬನಶಂಕರಿ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ, ಎಸ್‌ಆರ್‌ಎಸ್ ಹಾಗೂ ವಿಆರ್‌ಎಲ್‌ನ ಸ್ಲೀಪರ್‌ ಕೋಚ್‌ ಬಸ್‌ಗಳು ಓಡಾಡಲಿವೆ. ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ತಿಂಡಿ ಹಾಗೂ ಮಾರತ್ತಹಳ್ಳಿಯಲ್ಲಿ ಊಟಕ್ಕೆ ಬಸ್‌ಗಳು ನಿಲ್ಲಲಿವೆ...’ 

ವೈಟ್‌ಫೀಲ್ಡ್‌ನ ಐಟಿಪಿಎಲ್‌–ಬನಶಂಕರಿ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯಿಂದ ಬೇಸತ್ತ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ವ್ಯಂಗ್ಯವಾಗಿ ಮಾಡಿರುವ ಟ್ವೀಟ್ ಇದು. ನಿತ್ಯ ವಿಪರೀತ ಸಂಚಾರ ದಟ್ಟಣೆಯಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿರುವ ಪ್ರಯಾಣಿಕರು, ಟ್ವಿಟರ್ ಹಾಗೂ ಫೇಸ್‌ಬುಕ್‌ ಮೂಲಕ ಮಾರ್ಮಿಕವಾಗಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

‘ಈ ರಸ್ತೆಯಲ್ಲಿ ನರಕ ನೋಡುತ್ತಿದ್ದೇವೆ. ಹಿಂದೆ–ಮುಂದೆ, ಅಕ್ಕ–ಪಕ್ಕದ ವಾಹನಗಳು ಯಮಕಿಂಕರನಂತೆ ಕಾಣುತ್ತಿವೆ. ಕಚೇರಿ ಅವಧಿಗಿಂತಲೂ ಹೆಚ್ಚು ಸಮಯ ಟ್ರಾಫಿಕ್‌ನಲ್ಲೇ ಹೋಗುತ್ತಿದೆ. ಸಂಚಾರ ಪೊಲೀಸರು ಇದ್ದರೂ ಪ್ರಯೋಜನವಿಲ್ಲದಂತಾಗಿದೆ. ಈ ಟ್ರಾಫಿಕ್‌ನಿಂದ ನಮಗೆ ಮುಕ್ತಿ ಯಾವಾಗ’ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

‘ಐಟಿಪಿಎಲ್‌ನಿಂದ ಬನಶಂಕರಿ 24 ಕಿ.ಮೀ ದೂರದಲ್ಲಿದೆ. 100 ಅಡಿ ಹೊರವರ್ತುಲ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ ಹಾಗೂ ಎನ್‌ಎಚ್‌ 44ರ ಮೂಲಕ ಸಂಚರಿಸಬಹುದು. ಆದರೆ, ಈ ಮೂರು ರಸ್ತೆಯಲ್ಲೂ ದಟ್ಟಣೆ ವಿಪರೀತವಾಗಿರುತ್ತದೆ’ ಎಂದು ದೂರಿದ್ದಾರೆ.

‘ಮಾರತ್ತಹಳ್ಳಿ, ಬೆಳ್ಳಂದೂರು, ಬಿಟಿಎಂ ಲೇಔಟ್, ಸಿಲ್ಕ್‌ಬೋರ್ಡ್‌ ಜಂಕ್ಷನ್‌.... ಹೀಗೆ ಪ್ರತಿಯೊಂದು ಕಡೆಯಲ್ಲೂ ಅರ್ಧ ಗಂಟೆ ನಿಂತಲ್ಲೇ ನಿಲ್ಲಬೇಕು. ಬೆಳಿಗ್ಗೆ ಹಾಗೂ ಸಂಜೆಯಂತೂ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ’ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.

ತರಹೇವಾರಿ ಟ್ವೀಟ್‌ಗಳು: ‘ಟ್ರಾಫಿಕ್‌ನಿಂದ ‘ಬೆಂದ’ ಊರು = ಬೆಂಗಳೂರು’ ಎಂಬ ಶೀರ್ಷಿಕೆ ಅಡಿ ಈ ಟ್ವೀಟ್‌ಗಳು ಹರಿದಾಡುತ್ತಿವೆ.

‘ಐಟಿಪಿಎಲ್‌ನಿಂದ ಬನಶಂಕರಿಗೆ ಕೆಎಸ್‌ಆರ್‌ಟಿಸಿಯ ಐರಾವತ ಸ್ಲೀಪರ್ ಕೋಚ್ ಬಸ್ ಸೇವೆ ಆರಂಭವಾಗಲಿದ್ದು, ಮಾರತ್ತಹಳ್ಳಿಯಲ್ಲಿ ಊಟ ಹಾಗೂ ಸಿಲ್ಕ್‌ ಬೋರ್ಡ್‌ನಲ್ಲಿ ತಿಂಡಿಗೆ ನಿಲುಗಡೆ ಇದೆ’ ಎಂಬ ಟ್ವೀಟ್‌ನ್ನು ಜ. 28ರಂದು ‘ಪಿಂಚ್‌ ಆಫ್ ಸಾಲ್ಟ್‌’ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ. ಅದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.

ಶಶಿಧರ್ ರಾವ್ ಎಂಬುವರು, ‘ಒಳ್ಳೆಯ ಸುದ್ದಿ. ಕೇವಲ 7 ಗಂಟೆಯಲ್ಲೇ ಬಸ್‌ ಐಟಿಪಿಎಲ್‌ನಿಂದ ಬನಶಂಕರಿಗೆ ತಲುಪಲಿದೆ ಎಂದು ಸಹ ಜನರಿಗೆ ತಿಳಿಸಿ’ ಎಂದಿದ್ದಾರೆ. ಜಯತೀರ್ಥ ಎಂಬುವರು, ‘ಸಿಲ್ಕ್‌ಬೋರ್ಡ್‌ನಲ್ಲಿ ಜನಸಂದಣಿ ಜಾಸ್ತಿ ಇರುತ್ತದೆ. ಅಲ್ಲಿ ತಿಂಡಿ ಸಿಗೊಲ್ಲ. ಮಾರತ್ತಹಳ್ಳಿ ಸೇತುವೆ ಬಳಿಯೇ ತಿಂಡಿಗೆ ನಿಲುಗಡೆ ಮಾಡಿ’ ಎಂದಿದ್ದಾರೆ.

ವಿಶಾಲ್, ‘ದಯವಿಟ್ಟು ಸ್ಲೀಪರ್ ಕೋಚ್ ಬಸ್ಸಿಗೆ ತಿಂಗಳ ಪಾಸ್‌ ಕೊಡಿ’ ಎಂದು ಹೇಳಿದರೆ, ಗಿರಿಪ್ರಶಾಂತ್, ‘ಬಸ್ಸಿನಲ್ಲಿ ಶೌಚಾಲಯ‌ಕ್ಕೂ ವ್ಯವಸ್ಥೆ ಮಾಡಿದರೆ ನಮಗೆ ಅನುಕೂಲ’ ಎಂದಿದ್ದಾರೆ. ಕಲ್ಯಾಣಿ ಎಂಬುವರು, ‘ಇನ್ನೊಮ್ಮೆ ನೋಡಿ, ತಿಂಡಿ ಸಮಯಕ್ಕೆ ಬಸ್, ಸಿಲ್ಕ್‌ಬೋರ್ಡ್‌ ಜಂಕ್ಷನ್ ತಲುಪುತ್ತೋ ಇಲ್ಲವೋ’ ಎಂದು ಬರೆದಿದ್ದಾರೆ.

ನಾಗೇಶ್ ರಾಮಸ್ವಾಮಿ, ‘ಬೆಳ್ಳಂದೂರು ಬಳಿ ಕಾಫಿ ಹಾಗೂ ಟೀಗೂ ಬಸ್ ನಿಲ್ಲಿಸಬಹುದೇ? ವಿಚಾರಿಸಿ ಹೇಳಿ’ ಎಂದು ಟ್ವೀಟ್ ಮಾಡಿದ್ದಾರೆ. ಜೇಡಿತ್‌ ಎಂಬುವರು, ‘ಈ ಬಸ್‌ ಸೇವೆ ಪ್ರಯಾಣಿಕರಿಗಿಂತಲೂ ದಂಪತಿಗಳಿಗೆ ಹೆಚ್ಚು ಸೂಕ್ತ ಅನಿಸುತ್ತದೆ’ ಎಂದಿದ್ದಾರೆ.

‘ಯಾರ‍್ರೀ ಬಿಎಂಟಿಸಿ ಉತ್ತಮ ಸಾರಿಗೆ ಅಂದೋರು’

ಐಟಿಪಿಎಲ್‌ನಿಂದ ಹೊರಟಿದ್ದ ಬಿಎಂಟಿಸಿ ಬಸ್‌, 45 ನಿಮಿಷ ನಿಂತಲೇ ನಿಂತಿತ್ತು. ಅದರಿಂದ ಆಕ್ರೋಶಗೊಂಡ ಪ್ರಯಾಣಿಕ ಪ್ರವೀಣ್ ಎಂಬುವರು, ಬಿಎಂಟಿಸಿ ವಿರುದ್ಧ ಆಕ್ರೋಶದ ಟ್ವೀಟ್ ಮಾಡಿದ್ದಾರೆ. ‘ಈ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಯಾರ‍್ರೀ ಈ ಬಿಎಂಟಿಸಿಗೆ ಭಾರತದ ಉತ್ತಮ ಸಾರ್ವಜನಿಕ ಸಾರಿಗೆ ಅಂತಾ ಪ್ರಶಸ್ತಿ ಕೊಟ್ಟವರು’ ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು