ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮಾತಿನ ಮೆರವಣಿಗೆಯಲ್ಲಿ ಸೋತ ಅಭಿವೃದ್ಧಿ

ಬಿಜೆಪಿ– ಜೆಡಿಎಸ್ ನಡುವೆ ನೇರ ಸ್ಪರ್ಧೆ
Last Updated 25 ಏಪ್ರಿಲ್ 2019, 13:17 IST
ಅಕ್ಷರ ಗಾತ್ರ

ಶಿರಸಿ: ನೆತ್ತಿಸುಡುವ ಬಿಸಿಲನ್ನು ಮೀರಿದ ಪ್ರಖರ ಹಿಂದುತ್ವದ ಗಾಳಿ ಹಾಗೂ ಮೋದಿ ಅಲೆಯಲ್ಲಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾತಿನ ಮೆರವಣಿಗೆ ವಿಜೃಂಭಿಸುತ್ತಿದೆ. ರಾಜ್ಯ, ರಾಷ್ಟ್ರ ನಾಯಕರ ಪ್ರಚಾರದ ಭರಾಟೆಯಿಲ್ಲದ ಕ್ಷೇತ್ರದಲ್ಲಿ, ಅಭ್ಯರ್ಥಿಗಳ ನಡುವಿನ ಮಾತಿನ ಕೆಸರೆರಚಾಟವೇ ಪ್ರಮುಖ ಆಕರ್ಷಣೆಯಾಗಿದೆ.

ಕ್ಷೇತ್ರ ಪುನರ್ ವಿಂಗಡಣೆಯ ಪೂರ್ವದಲ್ಲಿ ‘ಕೆನರಾ’ ಆಗಿದ್ದ ಈ ಕ್ಷೇತ್ರವು, ಉತ್ತರ ಕನ್ನಡ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಭಾಗಗಳನ್ನು ಒಳಗೊಂಡಿದೆ. ಮರಾಠರು, ಅಲ್ಪಸಂಖ್ಯಾತರು, ಪರಿಶಿಷ್ಟರು, ಈಡಿಗರು, ಬ್ರಾಹ್ಮಣರು, ಲಿಂಗಾಯತರು ಇಲ್ಲಿ ಬಹುಸಂಖ್ಯಾತ ಮತದಾರರು. ಇದೇ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಆರನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ ಜತೆಗಿನ ಮೈತ್ರಿ ಒಪ್ಪಂದದಲ್ಲಿ ಆಕಸ್ಮಿಕವಾಗಿ ಟಿಕೆಟ್ ಪಡೆದಿರುವ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಪ್ರತಿಸ್ಪರ್ಧಿಯಾಗಿದ್ದಾರೆ.

1952ರಿಂದ 2014ರವರೆಗೆ ನಡೆದಿರುವ ಲೋಕಸಭೆ ಚುನಾವಣೆಗಳಲ್ಲಿ ಒಂಬತ್ತು ಬಾರಿ ಗೆದ್ದಿದ್ದ, ಇನ್ನುಳಿದ ಬಾರಿ ಪ್ರಬಲ ಪೈಪೋಟಿ ನೀಡಿದ್ದ ಕಾಂಗ್ರೆಸ್‌ ಪಕ್ಷ, ಇದೇ ಮೊದಲ ಬಾರಿಗೆ ‘ಕೈ’ ಚಿಹ್ನೆಯಿಲ್ಲದೇ ಇರಿಸುಮುರಿಸು ಅನುಭವಿಸುತ್ತಿದೆ. ಸೀಟು ಹೊಂದಾಣಿಕೆಯಲ್ಲಿ, ನೆಲೆಯಿಲ್ಲದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಸತ್ಯವನ್ನು ಕಾಂಗ್ರೆಸ್‌ ಕಾರ್ಯಕರ್ತರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದ ಕಾರ್ಯಕರ್ತರು, ಪಕ್ಷದ ವರಿಷ್ಠರ ಆದೇಶದ ಮೇರೆಗೆ ಈಗ ‘ತೋರಿಕೆಯ ಮೈತ್ರಿ’ ಪ್ರದರ್ಶಿಸುತ್ತಿದ್ದಾರೆ.

ಜಿಲ್ಲೆಯನ್ನು ಮುಷ್ಠಿಯಲ್ಲಿಟ್ಟುಕೊಂಡಿರುವ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಆನಂದ ಅಸ್ನೋಟಿಕರ್ ನಾಮಪತ್ರ ಸಲ್ಲಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಾಗಲೂ ಗೈರಾಗಿ, ಮುನಿಸನ್ನು ಹೊರಹಾಕಿದ್ದರು. ಶಿಷ್ಟಾಚಾರಕ್ಕೆಂಬಂತೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಅವರ, ‘ಶಕ್ತಿಯಿದ್ದ ಕಾಂಗ್ರೆಸ್‌ಗೆ ಟಿಕೆಟ್ ಸಿಕ್ಕಿಲ್ಲ, ಚುನಾವಣೆಯ ಅಬ್ಬರ ಕಾಣುತ್ತಿಲ್ಲ’ ಎಂಬ ಮೆಲುಮಾತಿನ ಸೂಚ್ಯಾರ್ಥವನ್ನು ಜೀರ್ಣಿಸಿಕೊಳ್ಳಲು ಜೆಡಿಎಸ್‌ಗೆ ಕಷ್ಟವಾಗುತ್ತಿದೆ.

ಬೂದಿ ಮುಚ್ಚಿದ ಕೆಂಡ: ಕ್ಷೇತ್ರದಲ್ಲಿ ಮೋದಿ ಅಲೆಯಷ್ಟೇ ಪ್ರಭಾವಿಯಾಗಿ ಅನಂತಕುಮಾರ್ ವಿರೋಧಿ ಅಲೆ ಇದೆ. ಪಕ್ಷದ ಶಿಸ್ತಿನ ಅಡಿಯಲ್ಲಿ ಕಾರ್ಯಕರ್ತರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಅವಿತುಕೊಂಡಿದೆ. ಪ್ರಚಾರಕ್ಕೆ ತೆರಳಿದಾಗ, ಅಭ್ಯರ್ಥಿಯ ವಿವಾದಾತ್ಮಕ ಹೇಳಿಕೆಗಳನ್ನು ಪ್ರಶ್ನಿಸುವ ಮತದಾರರಿಗೆ ಉತ್ತರಿಸಲಾಗದೇ ಮುಜುಗರ ಅನುಭವಿಸುವ ಕಾರ್ಯಕರ್ತರು, ಮೋದಿ ಸಾಧನೆಯನ್ನೇ ಬಾಯ್ತುಂಬ ಹೇಳಿ ಮುನ್ನಡೆಯುತ್ತಾರೆ. ಆರ್‌ಎಸ್ಎಸ್ ಕಾರ್ಯಕರ್ತರು ಸದ್ದು ಮಾಡದೇ ಪ್ರಚಾರದಲ್ಲಿ ತೊಡಗಿದ್ದಾರೆ.

ಅನಂತಕುಮಾರ್ ಹೆಗಡೆ ಮತ್ತು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸದಾ ವಿರುದ್ಧ ಧ್ರುವಗಳಿದ್ದಂತೆ. ಈ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಹೊಣೆಗಾರಿಕೆ ಹಾಕಿಸಿಕೊಂಡು ಜಾಣತನ ತೋರಿರುವ ಕಾಗೇರಿ, ಆಗೀಗ ಬಂದು ಪ್ರಚಾರದಲ್ಲಿ ಭಾಗವಹಿಸುತ್ತಾರೆ.

ಅದೃಷ್ಟದಲ್ಲಿ ಅಭ್ಯರ್ಥಿಯಾಗಿರುವ ಆನಂದ ಅಸ್ನೋಟಿಕರ್, ಕಾಂಗ್ರೆಸ್ ನಾಯಕರನ್ನು ಸಮಾಧಾನಪಡಿಸುವುದರಲ್ಲೇ ಹೈರಾಣಾಗಿದ್ದಾರೆ. ಜೆಡಿಎಸ್‌ನಲ್ಲೂ ಹಲವರಿಗೆ ಆನಂದ ಮೇಲೆ ಅಸಮಾಧಾನವಿದೆ. ಕ್ಷೇತ್ರದಲ್ಲಿ ತಳಪಾಯವಿಲ್ಲದ ಪಕ್ಷವನ್ನು ದಿಢೀರ್‌ ಆಗಿ ಸಂಘಟಿಸಲಾಗದೇ ಕೈಚೆಲ್ಲಿರುವ ಅವರು, ‘ಕಾಂಗ್ರೆಸ್ ಸಹಕಾರವಿಲ್ಲದೇ ನನ್ನ ಗೆಲುವು ಅಸಾಧ್ಯ’ ಎಂದು ಬಹಿರಂಗ ಸಭೆಗಳಲ್ಲಿ ಹೇಳುತ್ತ, ಸಹಕಾರ ಕೋರುತ್ತಿದ್ದಾರೆ.

ಮರೆಯಾದ ಕ್ಷೇತ್ರದ ಸಮಸ್ಯೆ: ರಾಷ್ಟ್ರೀಯತೆ, ದೇಶ ರಕ್ಷಣೆ ವಿಚಾರ, ಮೋದಿ ಕಾರ್ಯಕ್ರಮಗಳು ಮುನ್ನೆಲೆಯಲ್ಲಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರಾವಳಿಯ ಮೂರು ಸೀಟು ಗೆದ್ದುಕೊಟ್ಟಿದ್ದ ಪರೇಶ‌ ಮೇಸ್ತ ಸಾವಿನ ಪ್ರಕರಣ ಈಗ ಮೂಲೆ ಸೇರಿದೆ. ಕಾಣೆಯಾದ ಮೀನುಗಾರರು ಆಗಲೇ ಜನರ ಮನಸ್ಸಿನಿಂದ ದೂರವಾಗಿದ್ದಾರೆ. ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಉದ್ಯೋಗಕ್ಕಾಗಿ ವಿದ್ಯಾವಂತರ ವಲಸೆ, ದಶಕಗಳಿಂದ ಕನಸಾಗಿರುವ ರೈಲು ಮಾರ್ಗ ಇಂತಹ ಅನೇಕ ಜ್ವಲಂತ ಸಮಸ್ಯೆಗಳು ಗೌಣವಾಗಿವೆ. ‘ಕಳೆದ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಬಂದಿರುವ ಅನುದಾನದ ಲೆಕ್ಕಪತ್ರವನ್ನು ಸಂಸದರು ಮಂಡಿಸಲಿ’ ಎಂಬ ಜೆಡಿಎಸ್‌ನ ಧ್ವನಿ, ಮೋದಿಯ ಆರಾಧನೆಯ ನಡುವೆ ಕ್ಷೀಣಗೊಂಡಿದೆ.

ಅಭ್ಯರ್ಥಿಗಳು ಪರಸ್ಪರ ದೂಷಣೆಗೆ ಸೀಮಿತವಾಗಿದ್ದಾರೆ. ಸ್ಥಿತಪ್ರಜ್ಞರಾಗಿರುವ ಮತದಾರರು ಆಗಲೇ ಖಚಿತ ನಿರ್ಣಯ ತಳೆದ ಮಾನಸಿಕತೆಯಲ್ಲಿದ್ದಾರೆ. ಅನಂತ್‌ ಕುಮಾರ್‌ ಹೆಗಡೆ ಗೆದ್ದು ದಾಖಲೆ ಬರೆಯುತ್ತಾರೋ, ಆಸ್ನೋಟಿಕರ್‌ ವಿಜಯದ ನಗೆ ಬೀರುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.

**
3 ಲಕ್ಷಕ್ಕೂ ಅಧಿಕ ಮತಗಳ ಐತಿಹಾಸಿಕ ದಾಖಲೆಯೊಂದಿಗೆ ಬಿಜೆಪಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ನಾವು ಪ್ರಚಾರ ನಡೆಸುತ್ತಿಲ್ಲ, ಬದಲಾಗಿ ಜನರೇ ಈ ಬಾರಿ ಪ್ರಚಾರ ಮಾಡುತ್ತಿದ್ದಾರೆ. ಮೈತ್ರಿ ಆಟ ನಡೆಯುವುದಿಲ್ಲ.
-ಅನಂತಕುಮಾರ್ ಹೆಗಡೆ, ಬಿಜೆಪಿ ಅಭ್ಯರ್ಥಿ

**
ಬೆಟ್ಟದಷ್ಟು ಸಮಸ್ಯೆಗಳಿವೆ. ಅವುಗಳ ನಿವಾರಣೆ, ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದಿರುವ ಕ್ಷೇತ್ರದಲ್ಲಿ, ಉದ್ಯೋಗ ಸೃಷ್ಟಿಸಿ ಪ್ರತಿಭಾ ಪಲಾಯನ ತಡೆಗಟ್ಟಬೇಕಾದದ್ದು ತುರ್ತು ಅಗತ್ಯ.
-ಆನಂದ ಅಸ್ನೋಟಿಕರ್, ಜೆಡಿಎಸ್ ಅಭ್ಯರ್ಥಿ

**
ರಾಷ್ಟ್ರದ ಅಭಿವೃದ್ಧಿ ನಿರ್ಧರಿಸುವುದು ಅಲ್ಲಿನ ರಾಜಕೀಯ- ಸಾಮಾಜಿಕ ವ್ಯವಸ್ಥೆಯಾಗಿದೆ. ಆ ವ್ಯವಸ್ಥೆ ಸರಿಯಾಗಿ ನಡೆಯಲು ಸ್ಥಿರ ಸರ್ಕಾರ ಅವಶ್ಯ. ಸ್ಥಿರ ಸರ್ಕಾರ ರಚನೆಯಲ್ಲಿ ಚುನಾವಣೆ ಪಾತ್ಯ ಬಹುಮುಖ್ಯ.
- ಸುಗಂಧಿ ಹೆಗಡೆ ಗೋಳಗೋಡು, ಖಾಸಗಿ ಉದ್ಯೋಗಿ

**
ಸಂವಿಧಾನ ನೀಡಿರುವ ಅಧಿಕಾರ ಬಳಸಿಕೊಂಡು, ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ನೋವಿದೆ.
- ತಿರುಮಲ ನಾಯ್ಕ ಭಟ್ಕಳ, ಖಾಸಗಿ ಉದ್ಯೋಗಿ

–––

ಇನ್ನಷ್ಟುಉತ್ತರ ಕನ್ನಡ ಕ್ಷೇತ್ರದ ಚುನಾವಣಾ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT